More

    ರೈತ ಹುತಾತ್ಮ ದಿನಾಚರಣೆ ಇಂದು


    ಧಾರವಾಡ: ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ನಡೆದ ಹೋರಾಟದಲ್ಲಿ ಹುತಾತ್ಮರಾದ ರೈತರ ಸ್ಮರಣಾರ್ಥ ಜು. 21ರಂದು ರೈತ ಹುತಾತ್ಮ ದಿನ ಆಚರಿಸಲಾಗುತ್ತದೆ.
    ಸತತ 6 ವರ್ಷಗಳ ಬರಗಾಲದ ನಡುವೆಯೂ ಸರ್ಕಾರ ಕರ ವಸೂಲಿಗೆ ಕ್ರಮ ಕೈಗೊಂಡಿತ್ತು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದ ರೈತರ ಮೇಲೆ ಪೊಲೀಸರಿಂದ ಗೋಲಿಬಾರ್ ನಡೆದಿತ್ತು. ನವಲಗುಂದದಲ್ಲಿ ಇಬ್ಬರು ರೈತರು ಹುತಾತ್ಮರಾದರು. ನಂತರ ಇಡೀ ರಾಜ್ಯವನ್ನು ವ್ಯಾಪಿಸಿದ್ದ ಹೋರಾಟದಲ್ಲಿ 139 ರೈತರು ಬಲಿಯಾಗಿದ್ದರು.
    ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ 1974ರಿಂದ 1980ರವರೆಗೆ ಸತತ 6 ವರ್ಷ ಕಾಲ ಭೀಕರ ಬರಗಾಲ. ಆದರೂ ಸರ್ಕಾರ ರೈತರಿಂದ ನೀರಾವರಿ ಕರ, ಬೆಟರ್​ವೆುಂಟ್ ಲೆವಿ ಹಾಗೂ ಸುಸ್ತಿ ಬಡ್ಡಿ ವಸೂಲಿಯ ಕಠಿಣ ಕ್ರಮ ಕೈ ಬಿಟ್ಟಿರಲಿಲ್ಲ. ಇದಕ್ಕೆ ಒಪ್ಪದ ರೈತರ ಮನೆಗಳಿಗೆ ನುಗ್ಗಿದ್ದ ಅಧಿಕಾರಿಗಳು, ಕೃಷಿ ಸಾಮಗ್ರಿಗಳನ್ನೂ ಬಿಡದಂತೆ ಜಪ್ತಿ ಮಾಡಿದ್ದರು.
    ಸರ್ಕಾರದ ದಬ್ಬಾಳಿಕೆಯ ವಿರುದ್ಧ ನವಲಗುಂದ, ನರಗುಂದ, ಸವದತ್ತಿ, ರಾಮದುರ್ಗ ತಾಲೂಕುಗಳ ರೈತರು 1980ರ ಮಾ. 1ರಂದು ಸಮಾವೇಶ ಸಂಘಟಿಸಿದ್ದರು. ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಬೃಹತ್ ಸಮಾವೇಶ ಆಯೋಜಿಸಿದ್ದರು. ಮಲಪ್ರಭಾ ಪ್ರದೇಶ ರೈತ ಸಮನ್ವಯ ಸಮಿತಿ ರಚಿಸಿ ಧರಣಿ ಸತ್ಯಾಗ್ರಹ, ಮನವಿ ಸಲ್ಲಿಸಲಾಯಿತು. ಆದರೆ, ಸರ್ಕಾರ ರೈತರ ಬೇಡಿಕೆಗೆ ಕಿವಿಗೊಡಲಿಲ್ಲ. ಜು. 21ರಂದು ನವಲಗುಂದ, ನರಗುಂದ, ಸವದತ್ತಿ ಹಾಗೂ ರಾಮದುರ್ಗ ತಾಲೂಕುಗಳಲ್ಲಿ ಬಂದ್ ಆಚರಿಸಲಾಯಿತು. ಪೊಲೀಸರು ರೈತರ ಮೇಲೆ ಗುಂಡು ಹಾರಿಸಿದರು. ರೊಚ್ಚಿಗೆದ್ದ ಜನ ಸರ್ಕಾರಿ ಕಚೇರಿಯನ್ನು ಧ್ವಂಸ ಮಾಡಿ, ಪೋಲೀಸರ ಮೇಲೆ ಪ್ರತಿ ದಾಳಿ ಮಾಡಿದರು. ಗಲಭೆಯಲ್ಲಿ ಮೂವರು ಪೊಲೀಸರು ಬಲಿಯಾದರೆ, ಪೊಲೀಸರ ಗುಂಡೇಟಿಗೆ ನರಗುಂದದಲ್ಲಿ ರೈತ ಈರಪ್ಪ ಕಡ್ಲಿಕೊಪ್ಪ ಬಲಿಯಾದ. ನೀರಾವರಿ ಕಚೇರಿಗೆ ಮುತ್ತಿಗೆ ಹಾಕಿದ ರೈತರ ಮೇಲೆ ಗೋಲಿಬಾರ್ ನಡೆಸಲಾಯಿತು. ನವಲಗುಂದದಲ್ಲಿ ರೈತ ಬಸಪ್ಪ ಲಕ್ಕುಂಡಿ ಆಹುತಿಯಾದರು. ಸಿಟ್ಟಿಗೆದ್ದ ಜನ ನೀರಾವರಿ ಕಚೇರಿಗೆ ಬೆಂಕಿ ಹಚ್ಚಿ ಕಂಡ ಕಂಡ ಅಧಿಕಾರಿಗಳನ್ನು ಥಳಿಸಿದರು. ಮರುದಿನದಿಂದ ರೈತರ ಹೋರಾಟ ಸರ್ಕಾರದ ವಿರುದ್ಧ ಪ್ರತೀಕಾರವಾಗಿ ಪರಿಣಮಿಸಿತು. ರೈತರ ಸ್ಮರಣಾರ್ಥ ಪ್ರತಿವರ್ಷ ಜು. 21ರಂದು ನವಲಗುಂದದಲ್ಲಿ ಹುತಾತ್ಮ ದಿನ ಆಚರಿಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts