More

    ಕೃಷಿ ಇಲಾಖೆ ಕಟ್ಟಡ ದುರಸ್ತಿಗೆ ಅನುದಾನ

    ಕಡೂರು: ಹೋಬಳಿ ಕೇಂದ್ರಗಳ ವ್ಯಾಪ್ತಿಯಲ್ಲಿ ತಲಾ 2 ಕೋಟಿ ರೂ. ವೆಚ್ಚದ ಸುಸಜ್ಜಿತ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ನಿರ್ಮಾಣಗೊಳ್ಳಲಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
    ತಾಲೂಕಿನ ಯಗಟಿ ಗ್ರಾಮದಲ್ಲಿ ಭಾನುವಾರ 2 ಕೋಟಿ ರೂ. ವೆಚ್ಚದ ರೈತ ಸಂಪರ್ಕ ಕೇಂದ್ರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ತಾಲೂಕಿನ ಇತರ ಹೋಬಳಿಗಳಲ್ಲಿನ ರೈತ ಸಂಪರ್ಕ ಕೇಂದ್ರಗಳ ಕಟ್ಟಡ 50 ಲಕ್ಷ ರೂ.ನಲ್ಲಿ ಮಾತ್ರ ನಿರ್ಮಾಣಗೊಂಡಿದೆ. ಯಗಟಿ ಮತ್ತು ಮತಿಘಟ್ಟದ ಕಸಬಾದಲ್ಲಿ ವಿಶೇಷವಾಗಿ ತಲಾ 2 ಕೋಟಿ ರೂ.ನಲ್ಲಿ ಎರಡು ಕಟ್ಟಡ ನಿರ್ಮಿಸಲಾಗುತ್ತಿದೆ. ಈಗಾಗಲೇ ಯಗಟಿ ಕೇಂದ್ರದ ಕಾಮಗಾರಿಗೆ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಮತಿಘಟ್ಟ ಗ್ರಾಮದಲ್ಲಿ ಕಟ್ಟಡ ನಿರ್ಮಿಸಲು ಭೂಮಿ ಪೂಜೆ ನಡೆಯಲಿದೆ ಎಂದರು.
    ಕಡೂರು ಪಟ್ಟಣದಲ್ಲಿರುವ ಕೃಷಿ, ತೋಟಗಾರಿಕೆ ಇಲಾಖೆಗಳ ಕಟ್ಟಡ ದುರಸ್ತಿಗೆ ಅಗತ್ಯ ಅನುದಾನಕ್ಕಾಗಿ ಸಂಬಂಧಿಸಿದ ಸಚಿವರಿಗೆ ಪತ್ರ ನೀಡಿ ಮನವಿ ಮಾಡಿದ್ದು, ಅನುದಾನ ಮಂಜೂರಾಗುವ ನಿರೀಕ್ಷೆ ಇದೆ. ನಂತರ ಎರಡು ಕಟ್ಟಡಗಳನ್ನು ನೆಲಸಮಗೊಳಿಸಿ ನೂತನ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ಭರವಸೆ ನೀಡಿದರು.
    ರಾಜ್ಯ ಸರ್ಕಾರ ಕೃಷಿ ಹೊಂಡಗಳ ನಿರ್ಮಾಣಕ್ಕೆ 200 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಕ್ಷೇತ್ರ ಒಂದಕ್ಕೆ ಕನಿಷ್ಠ 1 ಕೋಟಿ ರೂ. ಅನುದಾನ ಬರುವ ನಿರೀಕ್ಷೆ ಇದ್ದು, ಲೋಕಸಭಾ ಚುನಾವಣೆಯ ನಂತರ ಕೃಷಿ ಹೊಂಡಕ್ಕೆ ಅನುದಾನ ನೀಡಲಿದ್ದೇವೆ. ಅಧಿಕಾರಿಗಳು ಬಡವರನ್ನು ಗುರುತಿಸಿ ಅಂತಹವರಿಗೆ ಇಲಾಖೆಯ ಸೌಲಭ್ಯಗಳನ್ನು ನೀಡಬೇಕು ಎಂದು ತಾಕೀತು ಮಾಡಿದರು.
    ಕೃಷಿ ಇಲಾಖೆಯಿಂದ ನೀಡುತ್ತಿರುವ ಪೈಪ್‌ಗಳು ಕಳಪೆಯಾಗಿವೆ. ಉತ್ತಮ ಕಂಪನಿಯ ಪೈಪ್‌ಗಳನ್ನು ವಿತರಿಸಲು ಅಧಿಕಾರಿಗಳಿಗೆ ತಿಳಿಸಿ ಎಂದು ರೈತರು ಮನವಿ ಮಾಡಿದರು. ಇದಕ್ಕೆ ತಕ್ಷಣ ಸ್ಪಂದಿಸಿದ ಶಾಸಕರು, ಉತ್ತಮ ಗುಣಮಟ್ಟದ ಕಂಪನಿಯ ಪೈಪ್‌ಗಳನ್ನು ನೀಡಿ ಇಲ್ಲವಾದರೆ ವಾಪಸ್ ಕಂಪನಿಗೆ ಕಳುಹಿಸಿ ಎಂದು ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದರು.
    ಯಗಟಿ ಗ್ರಾಪಂ ಅಧ್ಯಕ್ಷೆ ಕಲಾವತಿ ವೆಂಕಟೇಶ್, ಸದಸ್ಯರಾದ ಚನ್ನಪಿಳ್ಳೇ ಗೋವಿಂದಪ್ಪ, ಮೂರ್ತಿ, ಸತೀಶ್, ಗಾಯತ್ರಿ ರವಿಕುಮಾರ್, ಸಾಕಮ್ಮ, ಸುನೀತಾ, ಜ್ಯೋತಿ, ಶಂಕರನಾಯ್ಕ, ಎರೆಹುಳು ಈಶಣ್ಣ, ಕೊನೆಮನೆ ರವಿ, ಕೋಡಿಹಳ್ಳಿ ಸಿದ್ದಪ್ಪ, ಭೂಸೇನಾ ನಿಗಮದ ಎಇಇ ಅಶ್ವಿನಿ, ಸಹಾಯಕ ಕೃಷಿ ಅಧಿಕಾರಿ ಅಶೋಕ್, ಪಿಡಿಒ ನವೀನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts