ಭೀಕರ ರಸ್ತೆ ಅಪಘಾತದಲ್ಲಿ ಬದುಕುಳಿದ ಒಂದೇ ಕುಟುಂಬದ ಐವರು: ನಡೆಯಿತು ಪವಾಡ!

Car Accident
Published on

ಹೈದರಾಬಾದ್​: ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ಉರುಳಿಬಿದ್ದರೂ ಸಹ ಐವರು ಸದಸ್ಯರನ್ನೊಳಗೊಂಡ ಕುಟುಂಬವೊಂದು ಪವಾಡ ರೀತಿಯಲ್ಲಿ ಕೆಲವು ಗಾಯಗಳೊಂದಿಗೆ ಪಾರಾಗಿರುವ ಘಟನೆ ಹೈದರಾಬಾದ್​ನ ಘಟ್ಕೇಸರ್​ ಬಳಿಯಿರುವ​ ಹೊರ ವರ್ತುಲ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.

ಚಾಲಕ ಸ್ಟೀರಿಂಗ್​ ವ್ಹೀಲ್​ ನಿಯಂತ್ರಣ ಕಳೆದುಕೊಂಡಿದ್ದರಿಂದ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಕಾರಿನಲ್ಲಿ ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಇದ್ದರು. ಹೈದರಾಬಾದ್​ ಕಡೆ ತೆರಳುತ್ತಿದ್ದರು. ದಮ್ಮೈಗುಡ ನಿವಾಸಿಯಾಗಿರುವ ಕುಟುಂಬ ಪ್ರವಾಸ ಮುಗಿಸಿ ಮರಳುತ್ತಿದ್ದರು ಎಂದು ವರದಿಯಾಗಿದೆ.

ರಸ್ತೆ ತಿರುವಿನಲ್ಲಿ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಅಡ್ಡೆಗೋಡೆಗಳನ್ನು ಗುದ್ದಿಕೊಂಡು ಇಳಿಜಾರಿನ ಪ್ರದೇಶಕ್ಕೆ ಬಿದ್ದಿದೆ. ಕಾರು ಸಂಪೂರ್ಣ ಜಖಂಗೊಂಡಿದ್ದರು ಅದೃಷ್ಟವಶಾತ್​ ಎಲ್ಲ ಐವರು ಸಹ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವ್​ ಆಗಿದ್ದಾರೆ. ಭೀಕರ ಅಪಘಾತದಲ್ಲೂ ಪ್ರಾಣಹಾನಿ ಸಂಭವಿಸದೇ ಇರುವುದು ಅದೃಷ್ಟವೇ ಸರಿ.

ಈ ಘಟನೆ ಘಟ್ಕೇಶ್ವರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆದರೆ, ಈ ಸಂಬಂಧ ಪ್ರಕರಣ ದಾಖಲಾಗಿಲ್ಲ. ಯಾರೊಬ್ಬರು ಸಹ ಮುಂದೆ ಬಂದು ದೂರು ದಾಖಲಿಸಿಲ್ಲ. ಸದ್ಯ ಗಾಯಗೊಂಡ ಕುಟುಂಬ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಒಂದು ವೇಳೆ ದೂರು ನೀಡಿದರೆ, ಪ್ರಕರಣ ದಾಖಲಿಸಿವೆವು ಎಂದು ಘಟ್ಕೇಶ್ವರ ಪೊಲೀಸ್​ ಠಾಣೆಯ ಇನ್​ಸ್ಪೆಕ್ಟರ್​ ರಘುವೀರ್​ ರೆಡ್ಡಿ ತಿಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net