More

    ವಿಪಕ್ಷದಿಂದ ಅನಗತ್ಯ, ಸುಳ್ಳು ಆರೋಪ

    ವಿಜಯವಾಣಿ ಸುದ್ದಿಜಾಲ ಹಾನಗಲ್ಲ

    ರಾಜ್ಯದ ಜನತೆ ಹಾಗೂ ಸರ್ಕಾರ ಕೋವಿಡ್ ಹಾಗೂ ನೆರೆ ಸಂಕಷ್ಟ ಎದುರಿಸುವ ಸಂದರ್ಭದಲ್ಲಿಯೂ ವಿರೋಧ ಪಕ್ಷದ ನಾಯಕರು ಸರ್ಕಾರದೊಂದಿಗೆ ನಿಂತು ಜವಾಬ್ದಾರಿ ನಿರ್ವಹಿಸದೇ ಅನಗತ್ಯವಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಆಕ್ರೋಶ ವ್ಯಕ್ತಪಡಿಸಿದರು.

    ಪಟ್ಟಣದಲ್ಲಿ ಸೋಮವಾರ ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷಗಳು ರಾಜ್ಯಕ್ಕೆ ಸಂಕಷ್ಟ ಬಂದಾಗ ಆಡಳಿತ ಪಕ್ಷದೊಂದಿಗೆ ಸಹಕರಿಸಿ, ವಿಶ್ವಾಸ ಮೂಡಿಸುವ ಕಾರ್ಯ ಮಾಡಬೇಕಿತ್ತು. ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಕೋವಿಡ್ ಸಂದರ್ಭದಲ್ಲಿ ವಲಸೆ ಕಾರ್ವಿುಕರಿಗೆ ಬಸ್ ಸೌಕರ್ಯವಿಲ್ಲವೆಂದು, ಬಸ್ ದರ ತೆಗೆದುಕೊಳ್ಳುತ್ತಿರುವ ಸುಳ್ಳು ಆರೋಪ ಮಾಡಿದರು. ಕಾರ್ವಿುಕರನ್ನು ಸರ್ಕಾರದ ವಿರುದ್ಧ ಎತ್ತಿ ಕಟ್ಟಿದರು. ಕೋವಿಡ್​ನಲ್ಲಿ ಭಾರಿ ಹಗರಣವಾಗಿದೆ ಎಂದು ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರ ಮಾಡಿದರು. ನೆರೆ ಬಗ್ಗೆ ಈಗ ತಗಾದೆ ಎತ್ತಿದ್ದಾರೆ. ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗಲೂ ನೆರೆ ಬಂದಿತ್ತು. ತಾವೆಷ್ಟು ಪರಿಹಾರ ನೀಡಿದ್ದರು ಎಂದು ನೆನಪಿಸಿಕೊಳ್ಳಲಿ. ತಮ್ಮ ಕಾಲಘಟ್ಟದಲ್ಲಿ ಕೇಂದ್ರದಿಂದ ಪರಿಹಾರವನ್ನೇ ನೀಡಲಿಲ್ಲ. ಕಳೆದ ವರ್ಷವೇ ಮುಖ್ಯಮಂತ್ರಿಗಳು ಫಲಾನುಭವಿಗಳ ಖಾತೆಗೆ ಹಣ ಹಾಕಿದ್ದಾರೆ. ಮನೆ ಕಟ್ಟಿಕೊಳ್ಳುವವರಿಗೂ ಹಂತ-ಹಂತವಾಗಿ ಹಣ ಜಮಾ ಆಗುತ್ತದೆ. ಸಿಎಂ ಕಳೆದ ಬಾರಿ ನೀಡಿದ ಪ್ರಮಾಣದಲ್ಲಿಯೇ ಈ ಬಾರಿಯೂ ಪರಿಹಾರ ಘೊಷಿಸಲಿದ್ದಾರೆ ಎಂದರು.

    ಮುಖ್ಯಮಂತ್ರಿಗಳು ಅನಾರೋಗ್ಯದ ಮಧ್ಯೆಯೂ, ಆಸ್ಪತ್ರೆಯಲ್ಲಿದ್ದುಕೊಂಡೇ ರಾಜ್ಯದಲ್ಲಿನ ನೆರೆ ಸಮಸ್ಯೆಗಳಿಗೆ ಸ್ಪಂದಿಸಿದರು. ಮನೆ ಕಳೆದುಕೊಂಡವರಿಗೆ ತಕ್ಷಣ 10 ಸಾವಿರ ರೂ. ನೀಡುವಂತೆ ಸೂಚಿಸಿದ್ದಾರೆ. ಕೇಂದ್ರ ಸರ್ಕಾರಕ್ಕೂ ಮಾಹಿತಿ ನೀಡಿ ಪರಿಹಾರಕ್ಕೆ ಮನವಿ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ವಿರೋಧ ಪಕ್ಷಗಳೆರಡೂ ಕಚ್ಚಾಟದಲ್ಲಿ ಕಾಲ ಕಳೆದವು. ಒಬ್ಬರು ತಾಜ್ ಹೋಟೆಲ್​ನಲ್ಲಿ ಕುಳಿತೇ ನೆರೆ ವೀಕ್ಷಣೆ ಮಾಡಿದರು. ಸಿಎಂ ಅವರು ವೈಚಾರಿಕ ಭಾಷಣ ಮಾಡುತ್ತ ವಿಧಾನಸೌಧದಿಂದ ಹೊರಬರಲೇಯಿಲ್ಲ. ಇಂಥವರಿಗೆ ಟೀಕೆ ಮಾಡುವ ಹಕ್ಕಿಲ್ಲ. ಕೇಂದ್ರ ಸರ್ಕಾರ ಎನ್​ಡಿಆರ್​ಎಫ್ ಮಾರ್ಗಸೂಚಿಯನ್ವಯ ಪರಿಹಾರ ಬಿಡುಗಡೆಗೊಳಿಸುತ್ತದೆ. ಮಾರ್ಗಸೂಚಿ ವಿರೋಧ ಪಕ್ಷದ ನಾಯಕ ಸಿದ್ದಣ್ಣನವರಿಗೆ ಗೊತ್ತಿಲ್ಲವೋ? ಗೊತ್ತಿದ್ದೂ ನಾಟಕ ಮಾಡುತ್ತಿದ್ದಾರೋ ತಿಳಿಯುತ್ತಿಲ್ಲ ಎಂದು ಕಟೀಲ್ ವಾಗ್ದಾಳಿ ನಡೆಸಿದರು.

    ಕೋವಿಡ್ ಬಂದಾಗ ರಾಜ್ಯದಲ್ಲಿ ಕೇವಲ 4 ಲ್ಯಾಬ್​ಗಳಿದ್ದವು. ಬಿಎಸ್​ವೈ ಸಿಎಂ ಆದ ಬಳಿಕ 3 ತಿಂಗಳಲ್ಲಿ 80 ಲ್ಯಾಬ್​ಗಳಾಗಿವೆ. ವೆಂಟಿಲೇಟರ್​ಗಳಿರಲಿಲ್ಲ. ಈಗ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಮಾಡಲಾಗಿದೆ. ಆಸ್ಪತ್ರೆಗಳಲ್ಲಿ ಬೆಡ್ ಹೆಚ್ಚಿಸಲಾಗಿದೆ. ಫೀವರ್ ಕ್ಲಿನಿಕ್ ಸ್ಥಾಪಿಸಲಾಗಿದೆ. ಸಿಎಂ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.

    ರಾಜ್ಯದಲ್ಲಿನ 37 ಜಿಲ್ಲಾ ವಲಯದಲ್ಲಿರುವ 180 ಮಂಡಲಗಳಿಗೆ ಒಂದು ಬಾರಿ ಭೇಟಿ ನೀಡಿ ಸಭೆ ನಡೆಸಿ, ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ. 311 ಸಂಘಟನಾ ಮಂಡಲಗಳಿದ್ದು, ಪ್ರತಿ ಜಿಲ್ಲೆಗಳಿಗೆ 7 ಸುತ್ತು ಭೇಟಿ ನೀಡಿ ಸಂಘಟನೆ ಕೈಗೊಳ್ಳಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಬಲಪಡಿಸಲಾಗುತ್ತದೆ ಎಂದು ಕಟೀಲ್ ವಿವರಿಸಿದರು.

    ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಸಂಸದ ಶಿವಕುಮಾರ ಉದಾಸಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ, ಶಾಸಕರಾದ ಸಿ.ಎಂ. ಉದಾಸಿ, ಅರುಣಕುಮಾರ ಪೂಜಾರ, ವಿಪ ಸದಸ್ಯ ಆರ್. ಶಂಕರ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ನಿಕಟಪೂರ್ವ ಅಧ್ಯಕ್ಷ ಶಿವರಾಜ ಸಜ್ಜನರ, ಲಿಂಗರಾಜ ಪಾಟೀಲ, ಜಯತೀರ್ಥ ಕಟ್ಟಿ, ಕಾರ್ಯದರ್ಶಿಗಳಾದ ಕೃಷ್ಣ ಈಳಿಗೇರ, ಪ್ರದೀಪ ಮುಳ್ಳೂರ, ಶಶಿಧರ ಹೊಸೂರ, ತಾಲೂಕಾಧ್ಯಕ್ಷ ರಾಜು ಗೌಳಿ ಇತರರಿದ್ದರು.

    ಕೋವಿಡ್ ಸಮಸ್ಯೆ ಮಧ್ಯೆಯೂ ಶ್ರಮಪಟ್ಟು ರಾಜ್ಯದ ವಿದ್ಯಾರ್ಥಿಗಳು ಯಶಸ್ಸು ಸಾಧಿಸಿದ್ದಾರೆ. ಅವರಿಗೆ ರಾಜ್ಯ ಬಿಜೆಪಿ ಪರವಾಗಿ ಅಭಿನಂದನೆಗಳು. ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ತುರ್ತು ಸಂದರ್ಭದಲ್ಲಿಯೂ ಹೇಗೆ ನಡೆಸಬಹುದೆಂಬುದಕ್ಕೆ ಮಾದರಿಯಾಗಿ, ಸವಾಲಾಗಿ ಸ್ವೀಕರಿಸಿದ್ದ ಶಿಕ್ಷಣ ಸಚಿವ ಸುರೇಶಕುಮಾರ, ಮುಖ್ಯಮಂತ್ರಿ ಬಿಎಸ್​ವೈ ಅವರಿಗೆ ಕೃತಜ್ಞತೆಗಳು.

    | ನಳೀನಕುಮಾರ ಕಟೀಲ, ಬಿಜೆಪಿ ರಾಜ್ಯಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts