More

    ಫಲ್ಗುಣಿ ನದಿ ನೀರು ಮಲಿನ

    ಗುರುಪುರ: ಗುರುಪುರ ಆಸುಪಾಸಿನ ಪ್ರದೇಶದಲ್ಲಿ ಶನಿವಾರದಿಂದ ಫಲ್ಗುಣಿ ನದಿಯ ನೀರು ಕಪ್ಪಾಗಿದ್ದು, ಕೆಲವು ಕಡೆ ಮೀನುಗಳು ಸತ್ತಿವೆ. ಉಳಾಯಿಬೆಟ್ಟು, ಸೇತುವೆ ಬಳಿ, ಕಾರಮೊಗರು, ಏತಮೊಗರು ಪ್ರದೇಶದಲ್ಲಿ ನದಿ ತಟದ ಬಾವಿಗಳ ನೀರು ಕಳೆದೆರಡು ದಿನಗಳಿಂದ ಕಲುಷಿತಗೊಂಡಿದ್ದು, ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

    ಫಲ್ಗುಣಿ ನದಿ ತಟದಲ್ಲಿರುವ ಗೋಳಿದಡಿಗುತ್ತಿನ ಶ್ರೀ ಮಹಾಕಾಲೇಶ್ವರ ದೇವರ ಉಜ್ಜೈನಿ ತೀರ್ಥಬಾವಿಯ ನೀರು ಶನಿವಾರದಿಂದ ಸಂಪೂರ್ಣ ಕಲುಷಿತಗೊಂಡಿದೆ. ಅತ್ತ ನದಿಯಲ್ಲಿ ಮೀನುಗಳು ಸತ್ತಿವೆ. ಇದು ನದಿ ಮೇಲ್ಗಡೆಯಿಂದ(ಮಳವೂರು ಡ್ಯಾಮ್ ಕಡೆಯಿಂದ) ಯಾವುದೋ ಕೆಮಿಕಲ್ ಫ್ಯಾಕ್ಟರಿಯಿಂದ ಹರಿದು ಬರುವ ಕೆಮಿಕಲ್‌ಯುಕ್ತ ತ್ಯಾಜ್ಯ ನೀರಿರಬೇಕು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
    ಫಲ್ಗುಣಿ ನದಿಯಿಂದ ಗುರುಪುರ, ಕಂದಾವರ, ಗಂಜಿಮಠ ಮತ್ತು ಪಡುಪೆರಾರ ಗ್ರಾಪಂಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ನದಿ ನೀರು ಶುದ್ಧೀಕರಣಗೊಂಡ ಬಳಿಕ ಪಂಚಾಯಿತಿ ವ್ಯಾಪ್ತಿಗೆ ಪೂರೈಕೆಯಾಗುತ್ತದೆ ಎಂದು ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೇಳುತ್ತಿದ್ದರೂ, ಶುದ್ಧೀಕರಣ ಘಟಕ ಸರಿಯಾಗಿ ಕೆಲಸ ಮಾಡದಿರುವುದರಿಂದ ನದಿ ನೀರು ನೇರವಾಗಿ ಸರಬರಾಜಾಗುತ್ತಿದೆ. ಈ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಈ ಹಿಂದೆ ಸ್ಥಳೀಯರೇ ತಿಳಿಸಿದ್ದಾರೆ.

    ಅಧಿಕಾರಿಗಳಿಗೆ ದೂರು: ಈ ಬಗ್ಗೆ ತಹಸೀಲ್ದಾರ್, ಗುರುಪುರ ನಾಡಕಚೇರಿ, ಉಪತಹಸೀಲ್ದಾರ್ ಹಾಗೂ ಗುರುಪುರ ಪಿಡಿಒಗೆ ದೂರವಾಣಿ ಮೂಲಕ ತಿಳಿಸಿದ್ದೇನೆ. ಕುಡಿಯುವ ನೀರು ಯೋಜನೆಯಡಿ ಸ್ಥಳೀಯವಾಗಿ ಕೆಲವು ಗ್ರಾಮ ಪಂಚಾಯಿತಿಗಳು ಈ ನದಿ ನೀರು ಪಡೆಯುತ್ತಿವೆ. ಪರಿಸ್ಥಿತಿ ಹೀಗಾದರೆ ಹೇಗೆ? ಎಂದು ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಪ್ರಶ್ನಿಸಿದ್ದಾರೆ.

    ನದಿಯಲ್ಲಿ ತ್ಯಾಜ್ಯ : ಸೇತುವೆ ಮೇಲ್ಗಡೆ ವಾಹನದಲ್ಲಿ ಸಾಗುವ ದಾರಿಹೋಕರು ನದಿಗೆ ಪೂಜಾ ಸಾಮಗ್ರಿಗಳು ಹಾಗೂ ಇತರ ತ್ಯಾಜ್ಯ ಸೊತ್ತು ಎಸೆಯುತ್ತಿದ್ದು, ಸೇತುವೆಯ ಕಂಬಗಳ ಕೆಳಗಡೆ ಇಂತಹ ರಾಶಿಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ ತುಂಬಿದೆ. ಅಲ್ಲದೆ ನದಿ ನೀರಿನಲ್ಲೂ ತ್ಯಾಜ್ಯ ತೇಲುತ್ತಿರುತ್ತದೆ. ಇದರ ವಿರುದ್ಧ ಸ್ಥಳೀಯಾಡಳಿತ, ಪೊಲೀಸ್ ಹಾಗೂ ಸಂಬಂಧಿತ ಇಲಾಖೆಗಳು ಸೂಕ್ತ ಕ್ರಮ ಜರುಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಅಧಿಕಾರಿಗಳ ತಂಡ ಭೇಟಿ: ಸ್ಥಳೀಯರ ದೂರಿನನ್ವಯ ಸೋಮವಾರ ಬೆಳಗ್ಗೆ ಉಪತಹಸೀಲ್ದಾರ್ ಶಿವಪ್ರಸಾದ್ ಹಾಗೂ ಕಂದಾಯ ನಿರೀಕ್ಷಕ ನವನೀತ ಮಾಳವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಮಂಜಲ್‌ಬೈಲ್ ತ್ಯಾಜ್ಯ ನೀರು?
    ಈ ಹಿಂದೆ ಪಿಲಿಕುಳ ನಿಸರ್ಗಧಾಮದ ಬಳಕೆಗೆ ಹರಿದು ಬರುತ್ತಿದ್ದ ಮಂಗಳೂರು ನಗರಪಾಲಿಕೆ ವ್ಯಾಪ್ತಿಯ ತ್ಯಾಜ್ಯ ನೀರು, ಈಗ ಪಚ್ಚನಾಡಿಯಿಂದ ಮಂಜಲ್ಪಾದೆಯಾಗಿ ಫಲ್ಗುಣಿಗೆ ಹರಿದು ಬರುತ್ತಿದೆ. ಪಿಲಿಕುಳ ನಿಸರ್ಗಧಾಮ ಆಡಳಿತವು ಶುದ್ಧೀಕರಣಗೊಳ್ಳದ ಈ ನೀರು ನಿರಾಕರಿಸಿದ ಬಳಿಕ ಮಂಜಲ್ಪಾದೆಯಿಂದ ನೇರವಾಗಿ ಪಿಲಿಕುಳವಾಗಿ ಫಲ್ಗುಣಿ ನದಿಗೆ ಹರಿಯುತ್ತಿದೆ. ಈ ಘಟನೆ ವಿರುದ್ಧ ಮೂಡುಶೆಡ್ಡೆ ಭಾಗದಲ್ಲಿ ನಾಗರಿಕರು ಈ ಹಿಂದೆ ಪ್ರತಿಭಟನೆ ನಡೆಸಿದ್ದರು.

    ಈಗ ನದಿ ತಟ ಹೊರತುಪಡಿಸಿ ಉಳಿದೆಲ್ಲ ನೀರು ತಿಳಿಯಾಗಿದೆ. ಸ್ಥಳೀಯ ತೀರ್ಥಬಾವಿಯ ನೀರು ಕಲುಷಿತಗೊಂಡಿದೆ. ಈ ಬಗ್ಗೆ ತಹಸೀಲ್ದಾರ್‌ಗೆ ವರದಿ ನೀಡುತ್ತೇವೆ. ಸಣ್ಣ ನೀರಾವರಿ(ಎಂಐ) ಇಲಾಖೆಯವರು ನೀರಿನ ಬಗ್ಗೆ ಪರಿಶೀಲನೆ ನಡೆಸಬೇಕಾಗುತ್ತದೆ.
    – ಶಿವಪ್ರಸಾದ್, ಉಪತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts