More

    ಈತನ ಚುಚ್ಚು ಮದ್ದು ತೆಗೆದುಕೊಂಡ ಮಹಿಳೆ ಅನುಭವಿಸಬೇಕಾಯ್ತು ನರಕ ಯಾತನೆ! ಸೆರೆ ಸಿಕ್ಕ ನಕಲಿ ವೈದ್ಯ…

    ಬೆಂಗಳೂರು: ಜ್ವರ ಎಂದು ಬಂದ ಮಹಿಳೆಗೆ ಚುಚ್ಚುಮದ್ದು ನೀಡಿ ಶಸ ಚಿಕಿತ್ಸೆಗೆ ಕಾರಣರಾದ ನಕಲಿ ವೈದ್ಯ ಮತ್ತು ಕ್ಲಿನಿಕ್ ಮಾಲೀಕನನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.

    ಮಾದೇಶ್ವರನಗರದ ನಕಲಿ ವೈದ್ಯ ನಾಗರಾಜ ಸವಣೂರ (55) ಮತ್ತು ಕ್ಲಿನಿಕ್ ಮಾಲೀಕ ಕುಮಾರಸ್ವಾಮಿ (35) ಬಂಧಿತರು. ಹೆಗ್ಗನಹಳ್ಳಿಯ ಸಂಜೀವಿನಿನಗರದಲ್ಲಿ ಸಹನಾ ಪಾಲಿಕ್ಲಿನಿಕ್ ನಡೆಸುತ್ತಿದ್ದರು. ಶ್ರೀಗಂಧದಕಾವಲು ನಿವಾಸಿ ಜ್ಯೋತಿ (29) ಎಂಬಾಕೆ ನೀಡಿದ ದೂರಿನ ಮೇರೆಗೆ ಈ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಗಾರ್ಮೆಂಟ್ಸ್ ಉದ್ಯೋಗಿ ಜ್ಯೋತಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೆ.25ರಂದು ಸಹನಾ ಪಾಲಿಕ್ಲಿನಿಕ್‌ಗೆ ತೆರಳಿದ್ದರು. ಪರೀಕ್ಷಿಸಿದ ನಕಲಿ ವೈದ್ಯ ನಾಗರಾಜ, ಜ್ಯೋತಿ ಅವರ ಸೊಂಟಕ್ಕೆ ಎರಡು ಚುಚ್ಚುಮದ್ದು ನೀಡಿದ್ದ. 2 ದಿನಗಳ ಬಳಿಕ ಚುಚ್ಚುಮದ್ದು ನೀಡಿದ್ದ ಜಾಗದಲ್ಲಿ ರಕ್ತಹೆಪ್ಪುಗಟ್ಟಿ ನೋವು ಕಾಣಿಸಿಕೊಂಡ ಕಾರಣಕ್ಕೆ ಜ್ಯೋತಿ, ಮತ್ತೆ ಕ್ಲಿನಿಕ್‌ಗೆ ಬಂದಿದ್ದರು.

    ಮೆಡಿಕಲ್ ಶಾಪ್‌ನಿಂದ ಆಯಿಂಟ್‌ಮೆಂಟ್ ತರಿಸಿ ರಕ್ತಹೆಪ್ಪುಗಟ್ಟಿರುವ ಜಾಗಕ್ಕೆ ಲೇಪಿಸುವಂತೆ ನಾಗರಾಜು, ಸೂಚಿಸಿ ಮನೆಗೆ ಕಳುಹಿಸಿದ್ದ. ಇದಾದ ಐದಾರು ದಿನಗಳ ಬಳಿಕ ಜ್ಯೋತಿ ಸೊಂಟದ ಭಾಗದಲ್ಲಿ ನೋವು ಹೆಚ್ಚಾಗಿ ಹೆಪ್ಪುಗಟ್ಟಿದ ಭಾಗದಲ್ಲಿ ಕೀವು ತುಂಬಿಕೊಂಡಿತ್ತು.

    ಮತ್ತೆ ಕ್ಲಿನಿಕ್‌ಗೆ ಬಂದ ಜ್ಯೋತಿಗೆ ನಕಲಿ ವೈದ್ಯ ನಾಗರಾಜು, ಬೇರೆ ಆಸ್ಪತ್ರೆಗೆ ತೋರಿಸಿಕೊಳ್ಳುವಂತೆ ಸಲಹೆ ನೀಡಿ ಚಿಕಿತ್ಸಾ ವೆಚ್ಚವನ್ನು ಭರಿಸುವ ಭರವಸೆ ನೀಡಿದ್ದ. ಖಾಸಗಿ ಆಸ್ಪತ್ರೆಗೆ ಜ್ಯೋತಿ ತೋರಿಸಿದಾಗ ವೈದ್ಯರು ಕೀವು ತುಂಬಿ ಕೊಂಡಿದೆ ಎಂದು ಹೇಳಿದ್ದರು.

    ಅಲ್ಲದೆ, ಶಸ್ತ್ರಚಿಕಿತ್ಸೆ ಮಾಡಿ ಕೊಳೆತ ಮಾಂಸವನ್ನು ಹೊರತೆಗೆದು ಹೊಲಿಕೆ ಹಾಕಿದ್ದರು. ಇದರಿಂದ ನೊಂದ ಜ್ಯೋತಿ, ನಕಲಿ ವೈದ್ಯ ನಾಗರಾಜನ ವಿರುದ್ಧ ದೂರು ನೀಡಿದ್ದರು. ಈ ದೂರು ಆಧರಿಸಿ ನಾಗರಾಜನನ್ನು ಬಂಧಿಸಿ ತನಿಖೆ ನಡೆಸಿದಾಗ ಎಂಬಿಬಿಎಸ್ ವೈದ್ಯ ಅಲ್ಲ. ನಕಲಿ ವೈದ್ಯ ಎಂಬುದು ಗೊತ್ತಾಗಿದೆ. ಹುಬ್ಬಳ್ಳಿಯಿಂದ ನಗರಕ್ಕೆ ಕರೆತಂದು ಕ್ಲಿನಿಕ್ ಹಾಕಿಕೊಟ್ಟಿದ್ದ ಮಾಲೀಕ ಕುಮಾರಸ್ವಾಮಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts