More

    ಖೋಟಾ ನೋಟು ದಂಧೆ ಜೋರು, 500 ರೂ. ಮುಖಬೆಲೆ ನೋಟು ಚಲಾವಣೆ

    – ನಿಶಾಂತ್ ಬಿಲ್ಲಂಪದವು ವಿಟ್ಲ
    ದೇಶದ ಆಂತರಿಕ ವ್ಯವಸ್ಥೆಯನ್ನು ತಲೆಕೆಳಗೆ ಮಾಡುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯ ಕೆಲವರು ಭಾರಿ ಮೊತ್ತದ ಖೋಟಾ ನೋಟು ಚಲಾವಣೆಗೆ ಪ್ರಯತ್ನಿಸಿ ಪೊಲೀಸರ ಆತಿಥ್ಯಕ್ಕೊಳಗಾಗಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದರು ಹಾಗೂ ವಿಮಾನ ನಿಲ್ದಾಣ ಇರುವ ಹಿನ್ನೆಲೆಯಲ್ಲಿ ಹವಾಲ ಹಣದ ಬಳಕೆ ಹೆಚ್ಚು ನಡೆಯುತ್ತಿದೆ. ಜತೆಗೆ ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳು ಅಧಿಕವಾಗಿರುವುದರಿಂದ ಹಣಕಾಸಿನ ಚಲಾವಣೆಯೂ ಜಾಸ್ತಿ. ಇದನ್ನೇ ಗುರಿಯಾಗಿಸಿಕೊಂಡು ಈ ಭಾಗದಲ್ಲಿ ಖೋಟಾ ನೋಟು ಚಲಾವಣೆ ನಡೆಯುತ್ತಿದೆ.

    500 ಹಾಗೂ 2000 ರೂ. ಮುಖಬೆಲೆಯ ನೋಟುಗಳು ಚಲಾವಣೆಗೆ ಬಂದ ಸಂದರ್ಭದಲ್ಲಿ ಬಣ್ಣದ ಪ್ರತಿ ಮಾಡಿ ಚಲಾವಣೆಗೆ ತರುವ ಪ್ರಯತ್ನ ನಡೆದಿತ್ತು. ಈಗ ಅಸಲಿ ನೋಟಿನ ಹಾಗೆ ಕಾಣುವ 500 ರೂಪಾಯಿ ಮುಖಬೆಲೆಯ ನಕಲಿ ರೂಪ ಮಾರುಕಟ್ಟೆ ಸೇರಿದೆ.

    ನಾಲ್ವರ ಬಂಧನ: ಚಿಕ್ಕಮಗಳೂರು ಜಿಲ್ಲೆಯ ಹಾಂದಿ ಗ್ರಾಮದ ಸರ್ಕಲ್ ಬಳಿ ಅಲ್ದೂರು ಪೊಲೀಸರ ಕಾರ್ಯಾಚರಣೆಯಲ್ಲಿ ಪುತ್ತೂರು ನೊಂದಾಯಿತ ಕಾರಿನಲ್ಲಿ 500 ರೂ. ಮುಖಬೆಲೆಯ ಖೋಟಾ ನೋಟು ಸಾಗಾಟ ಮಾಡುತ್ತಿದ್ದ ಬೆಳ್ತಂಗಡಿ ಅಜಿಕುರಿ ನಿವಾಸಿ ಸಂತೋಷ್ (45) ಹಾಗೂ ಸುರತ್ಕಲ್ ನಿವಾಸಿ ನಜೀರ್ (40)ನ್ನು ಬಂಧಿಸಲಾಗಿದೆ.

    ತನಿಖೆ ಸಂದರ್ಭ ಪ್ರಮುಖ ಆರೋಪಿಗಳ ಜತೆಗೆ ನೇರ ಸಂಪರ್ಕದಲ್ಲಿದ್ದ ಕೊಳ್ನಾಡು ಕರೈ ನಿವಾಸಿ ಖಾಲಿದ್ (30), ಕುಡ್ತಮುಗೇರು ಕೆಳಗಿನ ಬಾರೆಬೆಟ್ಟು ಜಾಬೀರ್(30)ನನ್ನು ಬಂಧಿಸಲಾಗಿದೆ. ಮುಖ್ಯ ರೂವಾರಿಗಳಾದ ವಿಟ್ಲ ಕೊಳ್ನಾಡು ಕರೈ ಜುಬೇದ್ ಹಾಗೂ ಬಂದಡ್ಕ ರಿಯಾಜ್ ತಲೆಮರೆಸಿಕೊಂಡಿದ್ದು, ಚಿಕ್ಕಮಗಳೂರಿನ ಪೊಲೀಸರ ತಂಡ ಹಲವು ದಿನಗಳಿಂದ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.

    ರೆಡ್ ಮರ್ಕ್ಯೂರಿ ದಂಧೆಗೆ ಬಳಕೆ: ರೆಡ್ ಮರ್ಕೂರಿ ದಂಧೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರಲ್ಲಿ ಜನರನ್ನು ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ದುಪ್ಪಟ್ಟು ಹಣ ನೀಡಿ ವಸ್ತುವನ್ನು ಪಡೆಯಲಾಗುತ್ತದೆ. ದುಪ್ಪಟ್ಟು ಹಣವನ್ನು ಸಂಪೂರ್ಣ ಖೋಟಾ ನೋಟು ನೀಡುವ ಮೂಲಕ ವ್ಯವಹರಿಸಲಾಗುತ್ತಿದೆ ಎನ್ನುವುದು ಪೊಲೀಸ್ ಮೂಲಗಳ ಮಾಹಿತಿ.

    ಹಿಂದೆಯೂ ನಡೆದಿತ್ತು: ಕೇರಳ ಗಡಿ ಭಾಗದ ವಿಟ್ಲಕ್ಕೆ ಖೋಟಾ ನೋಟಿನ ಸಂಪರ್ಕ ಹಿಂದಿನಿಂದಲೂ ಇದೆ. 2006ರ ಮಾರ್ಚ್‌ನಲ್ಲಿ ವಿಟ್ಲ ಠಾಣೆಯ ಉಪನಿರೀಕ್ಷಕರಾಗಿದ್ದ ಜಿ.ಪಿ. ಬಾಲಚಂದ್ರ ಗೌಡ ನೇತೃತ್ವದ ತಂದ ಬೈಕ್‌ನಲ್ಲಿ ಸಾಗಾಟ ಮಾಡುತ್ತಿದ್ದ 500 ರೂ. ಮುಖಬೆಲೆಯ ಸುಮಾರು 1 ಲಕ್ಷ ರೂಪಾಯಿಯ ನಕಲಿ ನೋಟುಗಳನ್ನು ವಶಕ್ಕೆ ಪಡೆದು, ನಾಲ್ವರನ್ನು ಬಂಧಿಸಿದ್ದರು.

    ನಕಲಿ ನೋಟು ವ್ಯವಹಾರ ಸಂಬಂಧಿಸಿ ಇಬ್ಬರ ಬಂಧನವಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳ ಪತ್ತೆಗೆ ಅಗತ್ಯಕ್ರಮಗಳನ್ನು ಕೈಗೊಳ್ಳಲಾಗಿದೆ.
    – ಸ್ವರ್ಣ ಜಿ. ಎಸ್. ಪೊಲೀಸ್ ವೃತ್ತ ನಿರೀಕ್ಷಕಿ, ಚಿಕ್ಕಮಗಳೂರು ಗ್ರಾಮಾಂತರ

    ಪ್ರಮುಖ ಬೇರನ್ನು ಪತ್ತೆ ಹಚ್ಚಬೇಕಾಗಿದೆ. ಈ ನಿಟ್ಟಿನಲ್ಲಿ ತನಿಖೆ ಪ್ರಗತಿಯಲ್ಲಿದೆ. ಸಮಗ್ರ ಮಾಹಿತಿಯನ್ನು ತನಿಖೆಯ ಬಳಿಕ ನೀಡಲಾಗುವುದು.
    -ರಕ್ಷಿತ್ ಎ.ಕೆ. ಪೊಲೀಸ್ ನಿರೀಕ್ಷಕ, ಚಿಕ್ಕಮಗಳೂರು ಜಿಲ್ಲಾ ಅಪರಾಧ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts