More

    ಹುಸಿ ಬಾಂಬ್ ಕರೆ ಮಾಡಿದವನ ಬಂಧನ: ವೇತನ ಬಾಕಿ ಉಳಿಸಿಕೊಂಡಿದಕ್ಕೆ ಕೃತ್ಯ

    ಬೆಂಗಳೂರು: ಮಾಸಿಕ ವೇತನ ಕೊಡದೆ ಬಾಕಿ ಉಳಿಸಿಕೊಂಡ ರೆಸ್ಟೋರೆಂಟ್‌ಗೆ ಮದ್ಯದ ಅಮಲಿನಲ್ಲಿ ಹುಸಿ ಬಾಂಬ್ ಕರೆ ಮಾಡಿದ ಮಾಜಿ ಉದ್ಯೋಗಿಯನ್ನು ಮಹಾದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಬಾಣಸವಾಡಿ ನಿವಾಸಿ ವೇಲು ಮುರುಗನ್(೨೮) ಬಂಧಿತ. ಆರೋಪಿ ಬುಧವಾರ ರಾತ್ರಿ ೧೧ ಗಂಟೆ ಸುಮಾರಿಗೆ ಮಹಾದೇವಪುರದಲ್ಲಿರುವ ಪಾಸ್ತಾ ರೆಸ್ಟೋರೆಂಟ್‌ಗೆ ಕರೆ ಮಾಡಿ, ರೆಸ್ಟೋರೆಂಟ್‌ನಲ್ಲಿ ಬಾಂಬ್ ಇಟ್ಟಿದ್ದು, ಕೆಲವೇ ನಿಮಿಷಗಳಲ್ಲಿ ಸ್ಫೋಟಗೊಳ್ಳಲಿದೆ ಎಂದು ಬೆದರಿಸಿದ್ದ. ಅದರಿಂದ ಆತಂಕಗೊಂಡ ರೆಸ್ಟೋರೆಂಟ್ ಮಾಲೀಕರು ಕೂಡಲೇ ಪೊಲೀಸ್ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳದ ಜತೆ ಸ್ಥಳಕ್ಕೆ ದೌಡಾಯಿಸಿದ ಮಹಾದೇವಪುರ ಠಾಣೆ ಪೊಲೀಸರು ರೆಸ್ಟೋರೆಂಟ್‌ನ ಎಲ್ಲೆಡೆ ಶೋಧಿಸಿದ್ದಾರೆ. ಎಲ್ಲಿಯೂ ಬಾಂಬ್ ಅಥವಾ ಸ್ಫೋಟಕ ವಸ್ತುಗಳು ಪತ್ತೆಯಾಗಿಲಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಕರೆ ಎಂದು ದೃಢಪಡಿಸಿಕೊಂಡ ಪೊಲೀಸರು ಕರೆ ಮಾಡಿದ ವ್ಯಕ್ತಿಗಾಗಿ ಶೋಧ ನಡೆಸಿ ತಡರಾತ್ರಿ ಆರೋಪಿಯನ್ನು ಬಂಧಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮೊಬೈಲ್ ನೆಟ್‌ವರ್ಕ್ ಆಧರಿಸಿ ಬಂಧನ:
    ಇಂದಿರಾನಗರ, ಮಹಾದೇವಪುರ ಮತ್ತು ಕೋರಮಂಗಲದಲ್ಲಿ ಪಾಸ್ತಾ ರೆಸ್ಟೋರೆಂಟ್ ಶಾಖೆಗಳಿವೆ. ಇಂದಿರಾನಗರದಲ್ಲಿ ಆರೋಪಿ ಕೆಲಸ ಮಾಡುತ್ತಿದ್ದು, ಮೂರು ತಿಂಗಳ ಹಿಂದಷ್ಟೇ ಕೆಲಸ ಬಿಟ್ಟಿದ್ದ. ಜತೆಗೆ ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ವಾರದಲ್ಲಿ ಎರಡು ದಿನ ಕೆಲಸಕ್ಕೆ ಬಂದರೆ, ಐದು ದಿನ ಬರುತ್ತಿರಲಿಲ್ಲ. ಜತೆಗೆ ಮದ್ಯದ ಚಟ ಅಂಟಿಸಿಕೊಂಡಿದ್ದು, ಮದ್ಯ ಅಮಲಿನಲ್ಲಿಯೇ ಸಹ ಸಿಬ್ಬಂದಿ ಹಾಗೂ ಗ್ರಾಹಕರ ಜತೆ ಅನುಚಿತವಾಗಿ ವರ್ತಿಸುತ್ತಿದ್ದ. ಹೀಗಾಗಿ ಕೆಲಸ ಬಿಟ್ಟು ಹೋಗುವಂತೆ ಹೇಳಲಾಗಿತ್ತು. ಜತೆಗೆ ಸಂಬಳ ಕೊಟ್ಟಿರಲಿಲ್ಲ. ಅದರಿಂದ ಕೋಪಗೊಂಡ ಆರೋಪಿ, ಬುಧವಾರ ತಡರಾತ್ರಿ ಮನೆಯಲ್ಲಿ ಮದ್ಯ ಸೇವಿಸಿ ಮಹಾದೇವಪುರ ಪಾಸ್ತಾ ರೆಸ್ಟೋರೆಂಟ್ ಶಾಖೆಗೆ ಕರೆ ಮಾಡಿ ಬಾಂಬ್ ಬೆದರಿಕೆ ಹಾಕಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿ ಮೊಬೈಲ್ ನೆಟ್‌ವರ್ಕ್ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts