ಸಿನಿಮಾ

ಮರೆಯಾದ ಮಾವು ಮೇಳ

ಧಾರವಾಡ: ಹಣ್ಣುಗಳ ರಾಜ ಮಾವು. ಧಾರವಾಡ ಜಿಲ್ಲೆ ಮಾವು ಬೆಳೆಯಲ್ಲಿ ಮುಂಚೂಣಿ ಸ್ಥಾನದಲ್ಲಿದ್ದು, ‘ಒಂದು ಜಿಲ್ಲೆ ಒಂದು ಉತ್ಪನ್ನ’ ಘೋಷಣೆ ಅಡಿ ಜಿಲ್ಲೆಗೆ ಮಾವು ಉತ್ಪನ್ನ ಲಭಿಸಿದೆ. ಆದರೆ, ಮಾವಿನ ಹಣ್ಣಿನ ಸುಗ್ಗಿ ಮುಗಿಯುತ್ತಿದ್ದರೂ ಮಾವು ಮೇಳ ಆಯೋಜಿಸದಿರುವುದು ಜಿಲ್ಲೆ ಜನರಲ್ಲಿ ಬೇಸರ ಮೂಡಿಸಿದೆ.


ಪ್ರತಿ ವರ್ಷ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮಾವು ಮೇಳ ಆಯೋಜಿಸಲಾಗುತ್ತಿತ್ತು. ಈ ಮೇಳದಲ್ಲಿ ಜನರಿಗೆ ಮಾವಿನ ತಳಿಗಳ ಪರಿಚಯದ ಜತೆಗೆ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಒದಗಿಸಲಾಗುತ್ತಿತ್ತು. 3 ದಿನ ನಡೆಯುತ್ತಿದ್ದ ಮೇಳದಲ್ಲಿ 100-150 ಟನ್ ಮಾವು ಮಾರಾಟವಾಗಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿತ್ತು. ಕೋವಿಡ್ ಹೆಸರಿನಲ್ಲಿ ಬಂದ್ ಆದ ಮೇಳ ಈ ವರ್ಷವೂ ನಡೆದಿಲ್ಲ.


ಜಿಲ್ಲೆಯಲ್ಲಿ ಅಂದಾಜು 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಈ ಬಾರಿ ಹವಾಮಾನ ವೈಪರಿತ್ಯದಿಂದ ಹೂ ಬಿಡುವುದು ವಿಳಂಬವಾಗಿದ್ದಲ್ಲದೆ, ಬಿಟ್ಟ ಹೂಗಳು ಉದುರಿವೆ. ಇದರಿಂದ ಶೇ. 30ರಷ್ಟು ಮಾತ್ರ ಇಳುವರಿ ಬಂದಿದೆ. ಇದು ಸಹ ಮೇಳದ ಮೇಲೆ ಪರಿಣಾಮ ಬೀರಿದೆ.


2019ರ ಮೇ ತಿಂಗಳಲ್ಲಿ ನಡೆದ ಮಾವು ಮೇಳವೇ ಕೊನೇ. ನಂತರ 2 ವರ್ಷ ಕೋವಿಡ್ ಕಾಟದಿಂದ ಮೇಳ ನಡೆಯದಿದ್ದರೆ, ಕಳೆದ ವರ್ಷ ಆಯೋಜಿಸಿಲು ಚಿಂತಿಸಿದ್ದರೂ ಕೊನೆ ಕ್ಷಣದಲ್ಲಿ ರದ್ದಾಗಿತ್ತು. ಈ ಬಾರಿ ಸಹ ಇಳುವರಿ ಕಡಿಮೆ ಹಾಗೂ ಅನುದಾನ ಕೊರತೆ ಕಾರಣಕ್ಕೆ ಮೇಳ ಆಯೋಜಿಸಿಲ್ಲ. ಇದು ಜನರಲ್ಲಿ ಬೇಸರ ಮೂಡಿಸುವಂತಾಗಿದೆ.


ರೈತರು ಹಾಗೂ ಗ್ರಾಹಕರ ಮಧ್ಯೆ ವ್ಯಾಪಾರದ ಸಂಪರ್ಕ ಕೊಂಡಿಯಾಗಿ ಮೇಳ ಪ್ರಯೋಜನವಾಗಿತ್ತು. ಜನರ ಸ್ಪಂದನೆ ಸಹ ಉತ್ತಮವಾಗಿತ್ತು. ಕೆಲ ವರ್ಷ ಗ್ರಾಹಕರ ಒತ್ತಾಸೆ ಮೇರೆಗೆ ನಾಲ್ಕು ದಿನಗಳ ಕಾಲ ನಡೆಸಲಾಗಿದೆ. ಮೇಳ ಮಾತ್ರವಲ್ಲದೆ, ಮ್ಯಾಂಗೋ ಟೂರಿಸಂ ಎಂಬ ಕಲ್ಪನೆ ತರಲಾಗಿತ್ತು. ಇಲ್ಲಿ ಮಾವು ಬೆಳೆದ ರೈತರ ತೋಟಕ್ಕೆ ಗ್ರಾಹಕರು ನೇರವಾಗಿ ತೆರಳಿ ಖರೀದಿಸಬಹುದಿತ್ತು. ಆದರೆ ಸ್ಪಂದನೆ ಇಲ್ಲದೆ ಬ್ರೇಕ್ ಬಿದ್ದಿದೆ.


ಮೂರು ವರ್ಷಗಳ ಕಾಲ ಮಾವು ಮೇಳ ಇಲ್ಲದೆ ಜನರಲ್ಲಿ ನಿರಾಸೆ ಮೂಡಿದೆ. ಮುಂದಿನ ಸೀಜನ್‌ನಲ್ಲಾದರೂ ಜಿಲ್ಲಾಡಳಿತ ಮೇಳ ಆಯೋಜನೆ ಮಾಡಲಿ ಎಂಬುದು ಮಾವು ಪ್ರಿಯರ ಅಭಿಪ್ರಾಯ.

Latest Posts

ಲೈಫ್‌ಸ್ಟೈಲ್