More

    FACT CHECK| ಜರ್ಮನಿಯಲ್ಲಿ ಬೆರಳಚ್ಚಿನ ಆಕಾರದ ಗ್ರಾಮ ಇದೆಯೇ?: ಫ್ಯಾಕ್ಟ್​ ಚೆಕ್​ನಿಂದ ಬಯಲಾಯಿತು ಸತ್ಯ

    ನವದೆಹಲಿ: ಜರ್ಮನಿಯಲ್ಲಿರುವ ಬೆರಳಚ್ಚಿನ ಆಕಾರದ ಗ್ರಾಮದ ಸುಂದರ ವೈಮಾನಿಕ ಫೋಟೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅಧಿಕವಾಗಿ ಹರಿದಾಡುತ್ತಿದೆ.

    ಅರ್​ಬಿಲ್​​ ಗ್ರಾಮ ಬೆರಳಚ್ಚಿನ ಆಕಾರದಲ್ಲಿ ಇರುವುದು ವೈಮಾನಿಕ ಚಿತ್ರದಿಂದ ಪತ್ತೆಯಾಗಿದೆ. ಗ್ರಾಮ ಸುತ್ತಲು ಹಸಿರಿನಿಂದ ಕೂಡಿದೆ ಎನ್ನುವ ಮಾಹಿತಿ ಹಾಗೂ ಛಾಯಾ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಅಧಿಕವಾಗಿ ಅಪ್​ಲೋಡ್​ ಮಾಡಲಾಗುತ್ತಿದೆ.

    ರಿಫ್ಲೆಕ್ಷನ್ ಎಂಬ ಫೇಸ್‌ಬುಕ್ ಪುಟ ಈ ಚಿತ್ರವನ್ನು ಜರ್ಮನಿಯಲ್ಲಿರುವ ಬೆರಳಚ್ಚಿನ ಆಕಾರದ ಗ್ರಾಮ ಅರ್​ಬಿಲ್​ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದೆ. ಇದನ್ನು ಹಲವು ಫೇಸ್​ಬುಕ್​ ಬಳಕೆದಾರರು ಮರು ಹಂಚಿಕೆ ಮಾಡಿದ್ದಾರೆ.
    ಮೊದಲ ನೋಟಕ್ಕೆ ಇದು ವೈಮಾನಿಕ ಚಿತ್ರದಂತೆ ಕಂಡುಬಂದರೂ ಅದು ವೈಮಾನಿಕ ಚಿತ್ರ ಅಲ್ಲ. ಅಲ್ಲದೆ ಈ ಹೆಸರಿನ ಗ್ರಾಮ ಜರ್ಮನಿಯಲ್ಲಿ ಇಲ್ಲ ಎಂಬುದು ಫ್ಯಾಕ್ಟ್​ಚೆಕ್​ನಿಂದ ಪತ್ತೆಯಾಗಿದೆ.

    ಕಲಾವಿದ ಜಾಕೋಬ್​ ಐಸಿಂಗ್​ ಎಂಬುವವರು ತಯಾರಿಸಿದ ಚಿತ್ರ ಎಂಬುದನ್ನು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಪತ್ತೆ ಮಾಡಿದೆ.

    ಜರ್ಮನಿಯ ಮೊಡಸ್​ ಎಂಬ ನಿಯತಕಾಲಿಕಕ್ಕೆ 2015ರ ಫೆಬ್ರವರಿಯಲ್ಲಿ ಕಲಾವಿದ ಜಾಕೋಬ್ ಐಸಿಂಗ್‌ ತಯಾರಿಸಿದ ಡಿಜಿಟಲ್​ ಚಿತ್ರ ಇದು. ಮೊಡಸ್​ನಲ್ಲಿ ಈ ಚಿತ್ರ ಪ್ರಕಟವಾಗಿದೆ. ಅಲ್ಲದೆ ಈ ಕಲಾಕೃತಿಯ ಹಲವು ಚಿತ್ರಗಳನ್ನು ಕಲಾವಿದ ಐಸಿಂಗ್​ ಅವರು ಬೆಹನ್ಸ್​ ಎಂಬ ಮಾಧ್ಯಮದಲ್ಲಿ ಪ್ರಕಟಮಾಡಿದ್ದಾರೆ. ಮೊಡಸ್​ ನಿಯತಕಾಲಿಕದ ಮಾಲೀಕರು 2015ರ ಫೆಬ್ರವರಿ ಸಂಚಿಕೆಗಾಗಿ ಬೆರಳಚ್ಚು ಆಕಾರದ ನಗರ ಅಥವಾ ಹಳ್ಳಿಯ ಸುಂದರ ಚಿತ್ರ ತಯಾರಿಸಿಕೊಡುವಂತೆ ಮನವಿ ಮಾಡಿದ್ದರು. ಮನವಿಯಂತೆ ಹಲವು ಚಿತ್ರಗಳನ್ನು ಬರೆದುಕೊಟ್ಟಿದ್ದೆ. ಅದರಲ್ಲಿ ಈ ಚಿತ್ರ ಪ್ರಕಟವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.

    ಜರ್ಮನಿಯಲ್ಲಿ ಅರ್​ಬಿಲ್​ ಎಂಬ ಗ್ರಾಮ ಇದೆಯೇ ಎಂದು ಹುಡುಕಾಟ ನಡೆಸಲಾಯಿತು. ಜರ್ಮನಿಯಲ್ಲಿ ಈ ಹೆಸರಿನ ಗ್ರಾಮ ಇಲ್ಲ. ಇರಾಕ್​ನ ಕುರ್ದಿಸ್ತಾನ್​ನ ರಾಜಧಾನಿ ಅರ್​ಬಿಲ್​ ನಗರ ಇರುವುದು ಪತ್ತೆಯಾಯಿತು. ಆದರೆ ಆನಗರ ಬೆರಳಚ್ಚಿನ ಆಕಾರದಲ್ಲಿ ಇಲ್ಲ. ಹೀಗಾಗಿ ವೈರಲ್​ ಆದ ಫೋಟೋ ಗ್ರಾಮದ ವೈಮಾನಿಕ ಚಿತ್ರ ಅಲ್ಲ ಎಂಬುದು ಫ್ಯಾಕ್ಟ್​ ಚೆಕ್​ನಿಂದ ಪತ್ತೆಯಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts