More

    ಪಾಕ್​ಗೆ ಎಫ್​ಎಟಿಎಫ್ ಎಚ್ಚರಿಕೆ

    ಇಸ್ಲಾಮಾಬಾದ್: ಭಯೋತ್ಪಾದಕ ಸಂಘಟನೆ ಗಳ ವಿರುದ್ಧದ ಕ್ರಿಯಾ ಯೋಜನೆಗಳನ್ನು ಜಾರಿಗೆ ತರುವಲ್ಲಿ ವಿಫಲವಾದ ಕಾರಣ ಪಾಕಿಸ್ತಾನವನ್ನು ಜೂನ್ 2020ರ ವರೆಗೆ ಬೂದು ಪಟ್ಟಿಯಲ್ಲೇ ಮುಂದುವರಿಸಲು ಜಾಗತಿಕ ಉಗ್ರ ನಿಗ್ರಹ ಕಣ್ಗಾವಲು ಸಂಸ್ಥೆಯಾದ ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್​ಎಟಿಎಫ್) ನಿರ್ಧರಿಸಿದೆ.

    ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸು ನೆರವು ತಡೆಯಲು ಜೂನ್ ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಪ್ಯಾರಿಸ್​ನಲ್ಲಿ ನಡೆದ ಎಫ್​ಎಟಿಎಫ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಲಷ್ಕರ್, ಜೈಷ್ ಸೇರಿ ಹಲವು ಭಯೋತ್ಪಾದಕ ಸಂಘಟನೆಗಳಿಗೆ ಆರ್ಥಿಕ ನೆರವು ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನೀಡಲಾಗಿದ್ದ 27 ಕ್ರಿಯಾ ಯೋಜನೆಗಳಲ್ಲಿ ಪಾಕ್ ಕೆಲವನ್ನು ಮಾತ್ರ ಪೂರೈಸುವಲ್ಲಿ ಯಶಸ್ವಿಯಾಗಿರುವುದರಿಂದ ಮತ್ತೆ ಬೂದು ಪಟ್ಟಿಯಲ್ಲೇ ಮುಂದುವರಿಸಲಾಗಿದೆ.

    ಪಾಕಿಸ್ತಾನವನ್ನೂ ಉತ್ತರ ಕೊರಿಯಾ ಮತ್ತು ಇರಾನ್ ಜತೆ ಕಪು್ಪ ಪಟ್ಟಿಗೆ ಸೇರಿಸುವ ಎಲ್ಲ ಸಾಧ್ಯತೆಗಳಿವೆ. ಎಫ್​ಎಟಿಎಫ್​ನ ಬೂದು ಪಟ್ಟಿಯಿಂದ ಹೊರಬಂದು ಬಿಳಿ ಪಟ್ಟಿಗೆ ಸೇರ್ಪಡೆಯಾಗಲು ಪಾಕ್​ಗೆ 39ರಲ್ಲಿ 12 ಮತಗಳ ಅವಶ್ಯಕತೆ ಇದೆ. ಆದರೆ ಪಾಕ್​ಗೆ ಇನ್ನೂ 3 ರಾಷ್ಟ್ರಗಳ ಬೆಂಬಲ ಅಗತ್ಯವಿದೆ. ಈ ನಡುವೆ ಪಾಕಿಸ್ತಾನದ ನ್ಯಾಯಾಲಯ 2008ರ ಮುಂಬೈ ದಾಳಿ ಸಂಚುಕೋರ ಉಗ್ರ ಹಫೀಜ್ ಸೈಯಿದ್​ಗೆ ಶಿಕ್ಷೆ ತೀರ್ಪು ನೀಡಿ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳುತ್ತಿರುವ ಸೂಚನೆ ನೀಡಿತ್ತಾದರೂ ಬಳಿಕ ಇದು ಎಫ್​ಎಟಿಎಫ್​ನ್ನು ಮೆಚ್ಚಿಸಲು ಮಾಡಿದ ತಂತ್ರ ಎಂದು ಬಯಲಾಯಿತು. ಎಫ್​ಎಟಿಎಫ್ ಸಭೆಯಲ್ಲಿ ಪಾಕ್​ಗೆ ಮಲೇಷ್ಯಾ ಹೆಚ್ಚು ಬೆಂಬಲ ನೀಡಿದೆ. ಆದರೆ ಪಾಕ್ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವ ಬಗ್ಗೆ ಭಾರತ ಸಾಕಷ್ಟು ಪುರಾವೆಗಳನ್ನು ನೀಡಿದ್ದರಿಂದ ಇತರ ರಾಷ್ಟ್ರಗಳು ಪಾಕ್​ಗೆ ಬೆಂಬಲ ನೀಡಲಿಲ್ಲ.

    ಪಾಕಿಸ್ತಾನಕ್ಕೆ ಸಂಕಷ್ಟ

    ಎಫ್​ಎಟಿಎಫ್​ನ ಬೂದು ಪಟ್ಟಿಯಲ್ಲೇ ಮುಂದುವರಿಯುತ್ತಿರುವುದರಿಂದ ಪಾಕ್​ಗೆ ಐಎಂಎಫ್, ವಿಶ್ವಬ್ಯಾಂಕ್, ಎಡಿಬಿ ಮತ್ತು ಐರೋಪ್ಯ ಒಕ್ಕೂಟದಿಂದ ಹಣಕಾಸಿನ ನೆರವು ಪಡೆಯುವುದು ಕಷ್ಟವಾಗುತ್ತದೆ. ಮೊದಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಸಮಸ್ಯೆಗಳು ಮತ್ತಷ್ಟು ಉಲ್ಬಣಿಸಲಿವೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts