More

    ಕಣ್ಣುಗಳು ಮಣ್ಣಾಗುವ ಮುನ್ನವೇ ಅಂಧರ ಬಾಳಿಗೆ ಬೆಳಕಾಗಲಿ

    ಚಿತ್ರದುರ್ಗ: ಅಂಧತ್ವದ ಸಮಸ್ಯೆ ಎದುರಿಸುತ್ತಿರುವಂಥ ಲಕ್ಷಾಂತರ ಜನರಿಗೆ ದೃಷ್ಟಿ ಒದಗಿಸಲು ನೇತ್ರದಾನದ ಸಂಕಲ್ಪವನ್ನು ಮಾಡೋಣ ವೆಂದು ತಾಲೂಕು ವೈದ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಗ್ರಾಮಸ್ಥರಿಗೆ ಮನವಿ ಮಾಡಿದರು.

    ಚಿತ್ರದುರ್ಗ ತಾಲೂಕು ವಿಜಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ನೇತ್ರದಾನ ಪಾಕ್ಷಿಕ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಧರಿಗೆ ದೃಷ್ಟಿ ಒದಗಿಸಲು ನೇತ್ರದಾನದ ಅಗತ್ಯವಿದೆ. ಆರೋಗ್ಯ ಇಲಾಖೆ ರಾಜ್ಯದಾದ್ಯಂತ ಸೆ.8 ರವರೆಗೆ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಹಮ್ಮಿಕೊಂಡಿದೆ. ಇದರ ಮೂಲಕ ಜನರಲ್ಲಿ ನೇತ್ರದಾನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು,ಕಣ್ಣುಗಳು ಮಣ್ಣಾಗುವ ಮುನ್ನವೇ ಅಂಧರ ಬಾಳಿಗೆ ಬೆಳಕಾಗಲಿ ಎಂದರು.

    ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜಯಶ್ರೀ ಮಾತನಾಡಿ,ಅಪಘಾತ,ಜೀವಸತ್ವದ ಕೊರತೆ ಹಾಗೂ ಆನುವಂಶಿಕ ಸಮಸ್ಯೆಗಳಿಂದ ಕೆಲವರು ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ಅಂತಹವರಿಗೆ ನೇತ್ರವನ್ನು ದಾನ ಮಾಡಿದಲ್ಲಿ ಸಾವಿನಲ್ಲಿಯೂ ಸಾರ್ಥಕತೆ ಕಾಣಲು ಸಾಧ್ಯ. ಹಾಗಾಗಿ,ಮರಣಾನಂತರ ನೇತ್ರದಾನ ಮಾಡುವುದಾಗಿ ಪ್ರತಿಜ್ಞೆ ಕೈ ಗೊಳ್ಳಬೇಕಿದೆ ಎಂದರು.

    ತಾಲೂಕು ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ದೇಶದಲ್ಲಿ ಪ್ರತಿವರ್ಷ 40-50 ಸಾವಿರ ನೇತ್ರಗಳನ್ನು ಸಂಗ್ರಹಿಸಲಾಗುತ್ತಿದೆ. ದೇಶದಲ್ಲಿ 750,ಕರ್ನಾಟಕದಲ್ಲಿ 32 ನೇತ್ರ ಸಂಗ್ರಹಣಾ ಕೇಂದ್ರಗಳು ಹಾಗೂ ಚಿತ್ರದುರ್ಗದಲ್ಲಿ ಒಂದು ಕೇಂದ್ರವಿದೆ ಎಂದರು.

    ಜಿಲ್ಲಾ ಕಾರ‌್ಯಕ್ರಮ ಅನುಷ್ಠಾನಾಧಿಕಾರಿ ಡಾ.ರೂಪಾ ಮಾತನಾಡಿ,ಸಾವು ಸಂಭವಿಸಿದಾಗ ನೇತ್ರದಾನದ ಬಗ್ಗೆ ಮಾಹಿತಿ ನೀಡಿದರೆ ಆರೋಗ್ಯ ಇಲಾಖೆ ಸಿಬ್ಬಂದಿಯೇ ನೇತ್ರ ಸಂಗ್ರಹಿಸುತ್ತಾರೆ. ಒಂದು ವೇಳೆ ನೇತ್ರದಾನಕ್ಕೆ ಹೆಸರು ನೋಂದಾಯಿ ಸದಿದ್ದರೂ ಕುಟುಂಬದ ಸದಸ್ಯರು ಇಚ್ಛಿಸಿದಲ್ಲಿ ಕಣ್ಣುಗಳನ್ನು ದಾನ ಕೊಡಲು ಸಾಧ್ಯವಿದೆ. ನೇತ್ರದಾನಕ್ಕೆ ವಯೋಮಿತಿಯ ನಿರ್ಬಂಧವಿಲ್ಲ. ಅಧಿಕ ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆ ಇರುವವರು ಕೂಡ ನೇತ್ರದಾನಕ್ಕೆ ಅರ್ಹರು. ಒಂದು ಜತೆ ನೇತ್ರಗಳು ಇಬ್ಬರಿಗೆ ಸಹಕಾರಿಯಾಗಲಿದೆ. ಬದುಕಿದ್ದಾಗ ರಕ್ತದಾನ ಮಾಡಿ,ಮರಣಾನಂತರ ನೇತ್ರದಾನ ಮಾಡಿ ಎಂದರು.

    ಸುನಿಲ್,ಶ್ರೀಧರ್,ಗೌರಮ್ಮ,ಕಾತ್ಯಾಯಮ್ಮ,ಚಂದ್ರಶೇಖರ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts