More

    ಫೆಡೆಕ್ಸ್, ಮುಂಬೈ ಪೊಲೀಸರ ಸೋಗಿನಲ್ಲಿ ಸುಲಿಗೆ; 8 ಮಂದಿ ಸೆರೆ

    ಬೆಂಗಳೂರು: ಫೆಡೆಕ್ಸ್ ಕೊರಿಯರ್‌ನಲ್ಲಿ ನಿಮ್ಮ ಹೆಸರಿನಲ್ಲಿ ವಿದೇಶಕ್ಕೆ ಡ್ರಗ್ಸ್ ಪಾರ್ಸೆಲ್ ಹೋಗುತ್ತಿದ್ದಾಗಿ ಮುಂಬೈ ಪೊಲೀಸರ ಸೋಗಿನಲ್ಲಿ ಜನರಿಗೆ ಬೆದರಿಸಿ ಸುಲಿಗೆ ಮಾಡುತ್ತಿದ್ದ ಎಂಟು ಮಂದಿಯ ಗ್ಯಾಂಗ್‌ನ್ನು ಉತ್ತರ ವಿಭಾಗ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

    ದಾವಣಗೆರೆ ನಗರದ ಎನ್.ವಸೀಂ, ಎಂ.ಹಬೀಬುಲ್ಲಾ, ನಿಜಾಮುದ್ದೀನ್, ಮುಷಾರಫ್, ಫ್ರೇಜರ್ ಟೌನ್‌ನ ನೂರುಲ್ಲಾ ಖಾನ್, ಮೊಹಮ್ಮದ್ ಉಮರ್, ಸೈಯದ್ ಅಹಮದ್, ಸೈಯದ್ ಹುಸೇನ್ ಬಂಧಿತರು. 13.17 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸುತ್ತಿದ್ದ 11 ಮೊಬೈಲ್‌ಗಳು, ಚೆಕ್‌ಬುಕ್‌ಗಳು, ಪಾಸ್‌ಬುಕ್‌ಗಳು ಮತ್ತು ಎಟಿಎಂಗಳನ್ನು ಜಪ್ತಿ ಮಾಡಲಾಗಿದೆ. ವಿವಿಧ ಬ್ಯಾಂಕ್ ಖಾತೆಗಳಿದ್ದ 19 ಲಕ್ಷ ರೂ. ಮತ್ತು 148 ವಿವಿಧ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಲ್ಲೇಶ್ವರದ ನಿವೃತ್ತ ಅಧಿಕಾರಿಗೆ, ನ.11ರಂದು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರ ಸೋಗಿನಲ್ಲಿ ಕರೆ ಮಾಡಿ ಫೆಡೆಕ್ಸ್ ಕೊರಿಯರ್‌ನಲ್ಲಿ ನಿಮ್ಮ ಪತ್ನಿ ಹೆಸರಿನಲ್ಲಿ ಕಾನೂನು ಬಾಹಿರ ವಸ್ತುಗಳು ವಿದೇಶಕ್ಕೆ ಪಾರ್ಸೆಲ್ ಹೋಗುತ್ತಿವೆ. ಅದರಲ್ಲಿ 4 ಅವಧಿ ಮೀರಿದ ಪಾಸ್‌ಪೋರ್ಟ್, 2.35 ಕೆಜಿ ಬಟ್ಟೆಗಳು, 2 ಪೆನ್‌ಡ್ರೈವ್, 1 ಲ್ಯಾಪ್‌ಟಾಪ್, ಕ್ರೆಡಿಟ್ ಕಾರ್ಡ್, ಬ್ಯಾಂಕ್ ದಾಖಲಾತಿಗಳು, 140 ಗ್ರಾಂ ಎಂಡಿಎಂಎ ಮಾದಕ ವಸ್ತುಗಳು ಸಿಕ್ಕಿವೆ. ನಿಮ್ಮ ಹೆಸರಿನಲ್ಲಿ ಹಲವು ಬ್ಯಾಂಕ್ ಖಾತೆ ತೆರೆದು ಅಕ್ರಮವಾಗಿ ಹಣ ವರ್ಗಾವಣೆ ಆಗಿದ್ದು, ಮನಿ ಲಾರ್ಡಿಂಗ್ ಕೇಸ್ ಸಹ ದಾಖಲಾಗಿದೆ.

    ಆದರಿಂದ ನಿಮ್ಮ ಬ್ಯಾಂಕ್ ಸ್ಟೇಟೆಮೆಂಟ್ ಪರಿಶೀಲಿಸಬೇಕು. ತನಿಖೆಗಾಗಿ ಮುಂಗಡವಾಗಿ ನೀವು ಹಣ ನೀಡಬೇಕು. ತನಿಖೆ ಮುಗಿದ ಬಳಿಕ ಆ ಹಣವನ್ನು ನಿಮ್ಮ ಖಾತೆಗೆ ಜಮೆ ಮಾಡುವುದಾಗಿ ಹೇಳಿ ಬ್ಯಾಂಕ್ ದಾಖಲೆಗಳನ್ನು ಪಡೆದುಕೊಂಡಿದ್ದಾನೆ. ಈತನ ಮಾತು ನಂಬಿದ ದೂರುದಾರ, ವಿವಿಧ ಹಂತಗಳಲ್ಲಿ 1.8 ಕೋಟಿ ರೂ. ಆರೋಪಿಗಳು ನೀಡಿದ್ದ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು.

    ಹಣ ಕೈ ಸೇರಿದ ಮೇಲೆ ಆರೋಪಿಗಳು ಸಂಪರ್ಕ ಕಡಿತ ಮಾಡಿಕೊಂಡಿದ್ದರು. ನೊಂದ ಸಂತ್ರಸ್ತ, ಉತ್ತರ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದರು. ಮಲ್ಲೇಶ್ವರ ಉಪವಿಭಾಗ ಎಸಿಪಿ ಮೇರಿ ಶೈಲಜ ಮತ್ತು ಸೈಬರ್ ಕ್ರೈಂ ಠಾಣೆ ಇನ್‌ಸ್ಪೆಕ್ಟರ್ ಶಿವರತ್ನ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಈ ತಂಡ ಕಾರ್ಯಾಚರಣೆ ನಡೆಸಿ ಎಂಟು ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದಾವಣಗೆರೆ ಆರ್‌ಬಿಎಲ್ ಬ್ಯಾಂಕ್‌ನಲ್ಲಿ ವಿತ್ ಡ್ರಾ !

    ಸಂತ್ರಸ್ತ ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು, ಹಣದ ಚಲನೆ ಬಗ್ಗೆ ಪರಿಶೀಲನೆ ನಡೆಸಿದ ದಾವಣೆಗೆರೆಯ ಆರ್‌ಬಿಎಲ್ ಬ್ಯಾಂಕ್‌ನಿಂದ ವಿತ್ ಡ್ರಾ ಮಾಡಿರುವುದು ಗೊತ್ತಾಗಿದೆ. ಈ ಸುಳಿವಿನ ಮೇರೆಗೆ ಆರ್‌ಬಿಎಲ್ ಬ್ಯಾಂಕ್‌ನ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿಗಳಾದ ಎನ್.ವಸೀಂ, ಎಂ.ಹಬೀಬುಲ್ಲಾ ಮುಖಚಹರೆ ಪತ್ತೆಯಾಗಿತ್ತು. ಇದರ ಮೇಲೆ ಬಲೆಬೀಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 8 ಆರೋಪಿಗಳು ಸೆರೆಸಿಕ್ಕಿದ್ದಾರೆ.

    75 ಸೈಬರ್ ಕ್ರೈಂ ಬೆಳಕಿಗೆ :

    ಆರೋಪಿಗಳ ಬಂಧನದಿಂದ ಬೆಂಗಳೂರು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 2 ಪ್ರಕರಣಗಳು ಹಾಗೂ ಎನ್‌ಸಿಆರ್‌ಬಿ ಪೋರ್ಟಲ್‌ನಲ್ಲಿ ದಾಖಲಾಗಿದ್ದ 75 ಸೈಬರ್ ವಂಚನೆ ಪ್ರಕರಣಗಳು ಪತ್ತೆಯಾಗಿವೆ.

    ಬಿಟ್‌ಕಾಯಿನ್ ಬದಲಿಸಿ ಕಮಿಷನ್:

    ದಾವಣಗೆರೆ ಆರ್‌ಟಿಒ ಕಚೇರಿಯಲ್ಲಿ ಎನ್. ವಸೀಂ ಮತ್ತು ಮುಷಾರಫ್ ಏಜೆಂಟ್‌ಗಳಾಗಿದ್ದರು.
    ನಿಜಾಮುದ್ದೀನ್ ರಿಯಲ್ ಎಸ್ಟೇಟ್, ಹಬೀಬುಲ್ಲಾ ಪ್ರಥಮ ದರ್ಜೆ ಗುತ್ತಿಗೆದಾರ, ನೂರುಲ್ಲಾ ಖಾನ್ ಮತ್ತು ಮೊಹಮ್ಮದ್ ಉಮರ್ ಗುಜರಿ ವ್ಯಾಪಾರ ಹಾಗೂ ಸೈಯದ್ ಅಹಮದ್, ಸೈಯದ್ ಹುಸೇನ್ ಟ್ರೇಡಿಂಗ್ ವ್ಯವಹಾರದಲ್ಲಿ ತೊಡಗಿದ್ದರು. ಆದರೆ, ಸೈಬರ್ ವಂಚನೆಗೆ ಇಳಿದ ಮೇಲೆ ವೃತ್ತಿಯನ್ನು ಬಿಟ್ಟು ುಲ್‌ಟೈಮ್ ವಂಚನೆಯಲ್ಲಿ ತೊಡಗಿದ್ದರು.
    ತಲೆಮರೆಸಿಕೊಂಡಿರುವ ಪ್ರಕರಣದ ಕಿಂಗ್‌ಪಿನ್ ಸೂಚನೆ ಮೇರೆಗೆ ವಿವಿಧ ಬ್ಯಾಂಕ್‌ಗಳಲ್ಲಿ ನಕಲಿ ದಾಖಲೆ ಸಲ್ಲಿಸಿ ಖಾತೆಗಳನ್ನು ತೆರೆದಿದ್ದರು. ಆ ಬ್ಯಾಂಕ್ ಖಾತೆಗಳನ್ನು ಕಿಂಗ್‌ಪಿನ್‌ಗೆ ಕೊಡುತ್ತಿದ್ದರು. ಆತ ಅಮಾಯಕರಿಗೆ ಬೆದರಿಸಿ ಆ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿಸುತ್ತಿದ್ದ.
    ಈ ಹಣವನ್ನು ಬಂಧಿತ ಆರೋಪಿಗಳು ಡ್ರಾ ಮಾಡಿದ ಮೇಲೆ ಬಿಟ್‌ಕಾಯಿನ್‌ಗೆ ಬದಲಿಸಿ ಅದನ್ನು ಕಿಂಗ್‌ಪಿನ್‌ಗೆ ರವಾನೆ ಮಾಡಿ ಕಮಿಷನ್ ಪಡೆಯುತ್ತಿದ್ದರು. ಇದೊಂದು ವ್ಯವಸ್ಥಿತ ಜಾಲವಾಗಿದ್ದು, ತನಿಖೆ ಮುಂದುವರಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts