More

    ನಶಿಸುತ್ತಿರುವ ದೇವರನಾಮ, ಭಜನಾ ಗೀತೆಗಳು

    ಬೇಲೂರು: ಅಧುನಿಕ ಕಾಲಘಟ್ಟದಲ್ಲಿ ದೇವರನಾಮ ಮತ್ತು ಭಜನಾ ಗೀತೆಗಳು ನಶಿಸುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಇವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಶ್ರಮಿಸಲಿದ್ದು, ಎಲ್ಲರೂ ಸಹಕಾರ ನೀಡಬೇಕು ಎಂದು ತಾಲೂಕು ಕಸಾಪ ಅಧ್ಯಕ್ಷ ರಾಜೇಗೌಡ ಹೇಳಿದರು.

    ಮನೆ ಮನೆ ಸಾಹಿತ್ಯಗೋಷ್ಠಿ ಅಂಗವಾಗಿ ಪಟ್ಟಣದಲ್ಲಿರುವ ಸಾಹಿತಿ, ಹರಿಕಥಾ ವಿದುಷಿ ಇಂದಿರಮ್ಮ ಎಂಬುವವರ ನಿವಾಸದಲ್ಲಿ ಭಾನುವಾರ ಆಯೋಜಿಸಿದ್ದ ಭಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಪ್ರತಿಯೊಂದು ದೇವಾಲಯದಲ್ಲೂ ರಾಮ ನವಮಿ ಮತ್ತು ಕಾರ್ತಿಕ ಮಾಸದಲ್ಲಿ ಭಜನೆ ನಡೆಸುವ ವಾಡಿಕೆ ಇತ್ತು. ಆದರೆ ದೃಶ್ಯ ಮಾಧ್ಯಮಗಳ ಭರಾಟೆಯಿಂದ ಭಜನೆ ಹಾಗೂ ಗೀತೆಗಳು ಮೂಲೆ ಸೇರುತ್ತಿವೆ. ಆದರೆ ಭಜನೆ ಮತ್ತು ಗೀತೆಗಳು ಮನುಷ್ಯನ ಮಾನಸಿಕ ನೆಮ್ಮದಿ ಮತ್ತು ಸಂಸ್ಕಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಭಜನೆಯೊಂದಿಗೆ ದೇವರ ಗೀತೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಾಲೂಕು ಕಸಾಪ ಮುಂದಾಗಿದೆ ಎಂದರು.

    ಸಾಹಿತಿ ಇಂದಿರಮ್ಮ ಮಾತನಾಡಿ, ಈ ಹಿಂದೆ ಯಾವುದೇ ಮಾಧ್ಯಮಗಳಿಲ್ಲದ ಸಂದರ್ಭ ನಮ್ಮ ಪೂರ್ವಿಕರು ದೇಗುಲದಲ್ಲಿ ಭಜನೆ ಮೂಲಕ ಮನರಂಜನೆ ಮತ್ತು ಧಾರ್ಮಿಕ ಕಾರ್ಯ ನಡೆಸುತ್ತಾ ಬಂದಿದ್ದರು. ಭಜನೆ ಹಿರಿಯರಿಗೆ ಸೀಮಿತವಾಗಿಲ್ಲ. ಈ ಬಗ್ಗೆ ಮಕ್ಕಳಿಗೆ ತಿಳಿಸಬೇಕಿದೆ. ದೇವರ ನಾಮ ಮತ್ತು ಭಜನೆ ಸೇರಿದಂತೆ ಹರಿಕಥೆ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು ಎಂದರು.

    ಹಾಸನದ ಹರಿಕಥಾ ವಿದ್ವಾನ್ ನಾಗಲಕ್ಷ್ಮೀ ಶಿವರಾಂ ಮಾತನಾಡಿ, ಭಜನೆಗೆ ಯಾವುದೇ ಜಾತಿ, ಧರ್ಮ, ವರ್ಗ ಭೇದವಿಲ್ಲ. ಭಕ್ತಿಯಿಂದ ಕೂಡಿದ ಮನಸ್ಸಿರಬೇಕು. ಭಜನೆ ದೇವರನ್ನು ಒಲಿಸುವ ನಿಟ್ಟಿನಲ್ಲಿ ನಮ್ಮ ಮನಸ್ಸಿಗೆ ಮುದ ನೀಡುತ್ತದೆ. ವಾದಿರಾಜರು, ಪುರಂದರದಾಸರು, ಕನಕದಾಸರ ನಾನಾ ಕೀರ್ತನೆಗಳನ್ನು ಹೇಳುವುದರೊಂದಿಗೆ, ಅವರ ಸಂದೇಶವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

    ಶಾರದಾ ಶಂಕರ ಭಜನಾ ಮಂಡಳಿ (ಮಹಿಳೆಯರು) ಮಧ್ವಪತಿ ವಿಟ್ಠಲ ಭಜನಾ ಮಂಡಳಿ, ಶಾರದಾ ಶಂಕರ ಭಜನಾ ಮಂಡಳಿ (ಪುರುಷರು) ಗಾಯತ್ರಿ ಭಜನಾ ಮಂಡಳಿ, ಪೂರ್ಣಪ್ರಜ್ಞ ಭಜನಾ ಮಂಡಳಿ, ಚನ್ನಕೇಶವ ಭಜನಾ ಮಂಡಳಿ, ಶ್ರೀವಾರಿ ಭಜನಾ ಮಂಡಳಿ, ಚೌಡೇಶ್ವರಿ ಭಜನಾ ಮಂಡಳಿ, ವೀರಾಂಜನೇಯ ಭಜನಾ ಮಂಡಳಿ ಕಲಾವಿದರು ಭಾಗವಹಿಸಿದ್ದರು. ಕಲಾವಿದ ಚಂದನಕುಮಾರ್, ಕಸಾಪ ಗೌರವ ಕಾರ್ಯದರ್ಶಿಗಳಾದ ಬಿ.ಬಿ.ಶಿವರಾಜ್, ಆರ್.ಎಸ್.ಮಹೇಶ್, ಮಾಜಿ ಅಧ್ಯಕ್ಷ ಮ.ಶಿವಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts