More

    ಗಾಜಾ ಮೇಲೆ ಇಸ್ರೇಲ್ ಬೆಂಕಿಯ ಮಳೆ ಸುರಿಸಿತೇ? ಏನಿದು​ ಬಿಳಿ ರಂಜಕ ಬಾಂಬ್?ಎಷ್ಟು ಡೇಂಜರ್​? ಇಲ್ಲಿದೆ ಮಾಹಿತಿ….

    ಜೆರುಸಲೇಂ: ಅ.7ರ ಶನಿವಾರ ಬೆಳಗ್ಗೆ ಪ್ಯಾಲೆಸ್ತೀನ್​ನ ಹಮಾಸ್​ ಉಗ್ರರು ದಿಢೀರ್​ ದಾಳಿ ಮಾಡುವ ಮೂಲಕ ಇಸ್ರೇಲ್​​ಗೆ ಶಾಕ್​ ನೀಡಿದರು. ಸುಮಾರು 5 ಸಾವಿರಕ್ಕೂ ಹೆಚ್ಚು ರಾಕೆಟ್‌ಗಳ ಮೂಲಕ ಬೆಂಕಿಯ ಮಳೆಯನ್ನೇ ಸುರಿಸಿತು. ಇದಕ್ಕೆ ಪ್ರತಿಯಾಗಿ ಇಸ್ರೇಲ್​ ಕೂಡ ಗಾಜಾವನ್ನು ಗುರಿಯಾಗಿಸಿಕೊಂಡು ವಾಯುದಾಳಿ ನಡೆಸುತ್ತಿದ್ದು, ಗಾಜಾಪಟ್ಟಿ ಇದೀಗ ಅಕ್ಷರಶಃ ರಣಾಂಗಣವಾಗಿದೆ.

    ದಾಳಿ-ಪ್ರತಿದಾಳಿಯಲ್ಲಿ ಇಸ್ರೇಲ್​ ಮತ್ತು ಪ್ಯಾಲೇಸ್ತೀನ್​ ಎರಡೂ ಕಡೆ 3000ಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ. ಇಸ್ರೇಲ್​ನ ಸಾವಿರಾರು ಮಂದಿ ಮೃತಪಟ್ಟಿದ್ದಾರೆ. ಅದರಲ್ಲೂ ನಾಗರಿಕರೆ ಹೆಚ್ಚಿದ್ದಾರೆ. ಸಾಕಷ್ಟು ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ. ಪ್ರಖ್ಯಾತ ಸಂಗೀತ ಉತ್ಸವಕ್ಕೆ ನುಗ್ಗಿದ ಹಮಾಸ್​ ಉಗ್ರರು ಡಜನ್​ಗಟ್ಟಲೆ ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಯುದ್ಧ ಮುಂದುವರಿದಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

    ಬಿಳಿ ರಂಜಕ ಬಾಂಬ್ ಸ್ಫೋಟಿಸಿತೇ ಇಸ್ರೇಲ್​?​
    ಇದೀಗ ಜಾಗತಿಕ ಕಳವಳಕಾರಿ ಅಂಶವೇನೆಂದರೆ ಇಸ್ರೇಲ್​-ಹಮಾಸ್​ ಯುದ್ಧ ಸಾಗುತ್ತಿರುವ ಹಾದಿ. ಏಕೆಂದರೆ, ದಟ್ಟವಾದ ಜನನಿಬಿಡ ಪ್ರದೇಶಗಳಲ್ಲಿ ಬಿಳಿ ರಂಜಕ ಬಾಂಬ್‌ಗಳನ್ನು ಬಳಸಲಾಗಿದೆ ಎಂದು ಹೇಳಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ. ಇಸ್ರೇಲ್ ಗಾಜಾದಲ್ಲಿ ಜನನಿಬಿಡ ಪ್ರದೇಶಗಳ ಮೇಲೆ ಬಿಳಿ ರಂಜಕ ಬಾಂಬ್​ಗಳನ್ನು ಬಳಸಿರುವ ಸಾಧ್ಯತೆಯನ್ನು ತೋರಿಸುವ ವಿಡಿಯೋ ಕಂಡುಬಂದಿದೆ. ಬಿಳಿ ರಂಜಕ ಬಾಂಬ್ ಬಳಕೆಯನ್ನು ಯುದ್ಧ ಅಪರಾಧವೆಂದು ಪರಿಗಣಿಸಲಾಗಿದೆ. ಯೂಕ್ರೇನ್​ನ ಬಖ್​ಮತ್​​ನಲ್ಲಿ ರಷ್ಯಾ ಕೊನೆಯದಾಗಿ ಈ ಬಾಂಬ್ ಬಳಸಿದೆ ಎನ್ನಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವಿಡಿಯೋ, ಬೆಂಕಿಯ ಮಳೆಯನ್ನು ತೋರಿಸುತ್ತದೆ. ಈ ವಿಡಿಯೋವನ್ನು ಗಾಜಾದಲ್ಲಿ ಚಿತ್ರೀಕರಿಸಲಾಗಿದೆಯೇ ಅಥವಾ ಈ ಮುಂಚಿನ ವಿಡಿಯೋವೇ ಎಂಬುದು ತಿಳಿದಿಲ್ಲ. ಗರಿಷ್ಠ ವಿನಾಶಕ್ಕಾಗಿ ರಂಜಕ ಬಾಂಬ್ ಇಸ್ರೇಲ್ ಬಳಸಿರಬಹುದು ಎನ್ನಲಾಗಿದೆ.

    ಏನಿದು ಬಿಳಿ ರಂಜಕ ಬಾಂಬ್​?
    ಬಿಳಿ ರಂಜಕ ಬಾಂಬ್​ ಬಗ್ಗೆ ನಾವೀಗ ಸಂಪೂರ್ಣವಾಗಿ ತಿಳಿದುಕೊಳ್ಳೋಣ.ಈ ಬಿಳಿ ರಂಜಕವು ಮೇಣದಂಥ ಸ್ಫಟಿಕದಂತಹ ಘನವಸ್ತುವಾಗಿದೆ. ಇದನ್ನು ಬೆಳಕಿಗೆ ಒಡ್ಡಿದಾಗ ಕತ್ತಲೆಯಾಗುತ್ತದೆ. ಇದೊಂದು ವಿಷಕಾರಿ ವಸ್ತುವಾಗಿದ್ದು, ಬೆಳ್ಳುಳ್ಳಿಯಂತೆ ತೀವ್ರವಾದ ವಾಸನೆಯನ್ನು ಹೊಂದಿರುತ್ತದೆ, ಆದಾಗ್ಯೂ, ಅದರ ಪತ್ತೆಗೆ ವಾಸನೆಯನ್ನು ಅವಲಂಬಿಸಲಾಗದು. ಈ ಬಿಳಿ ರಂಜಕವು ಆಮ್ಲಜನಕದೊಂದಿಗೆ ಸಂಪರ್ಕಕ್ಕೆ ಬಂದಾಗ ಸ್ವಯಂಪ್ರೇರಿತವಾಗಿ ಗಾಳಿಯಲ್ಲಿ ಬೆಂಕಿಯನ್ನು ಹೊತ್ತಿಸುವ ಕಾರಣ ಇದನ್ನು ಬೆಂಕಿಯ ಏಜೆಂಟ್ ಆಗಿ ವಿವಿಧ ರೀತಿಯ ಮದ್ದುಗುಂಡುಗಳ ರೂಪದಲ್ಲಿ ಮಿಲಿಟರಿಯಲ್ಲಿ ಬಳಸಲಾಗುತ್ತದೆ. ಅಲ್ಲದೆ, ಈ ವಸ್ತುವನ್ನು ಪ್ರಪಂಚದಾದ್ಯಂತದ ಮಿಲಿಟರಿಗಳು ಹೊಗೆ ಏಜೆಂಟ್ ಆಗಿ ಬಳಸುತ್ತಾರೆ. ಏಕೆಂದರೆ ಇದು ಕಿರಿಕಿರಿಯುಂಟುಮಾಡುವ ಬಿಳಿ ಹೊಗೆಯ ಮೋಡಗಳನ್ನೇ ಉತ್ಪಾದಿಸುತ್ತದೆ. ಈ ಬಿಳಿ ರಂಜಕವು ನೆಲದ ಮೇಲೆ ವೇಗವಾಗಿ ಸುಡುವ ಮತ್ತು ವೇಗವಾಗಿ ಹರಡುವ ಬೆಂಕಿಯನ್ನು ಹೊತ್ತಿಸುತ್ತದೆ ಮತ್ತು ಒಮ್ಮೆ ಹೊತ್ತಿಕೊಂಡರೆ ಅದನ್ನು ನಂದಿಸುವುದು ತುಂಬಾ ಕಷ್ಟ ಎಂದು ಅನೇಕ ವರದಿಗಳು ಹೇಳಿವೆ.

    ಇದನ್ನೂ ಓದಿ: 20 ವರ್ಷಗಳ ನಂತರ ತೆರೆಯ ಮೇಲೆ ಮಿಂಚಲಿರುವ ಅಕ್ಷಯ್-ರವೀನಾ; ಸಂದರ್ಶಕಿ ಕೇಳಿದ ಪ್ರಶ್ನೆಗೆ ನಾಚಿ ನೀರಾದ ‘ಖಿಲಾಡಿ’

    ಬಿಳಿ ರಂಜಕವನ್ನು ಹೇಗೆ ಹರಡಬಹುದು?
    ಬಿಳಿ ರಂಜಕ ಯುದ್ಧಸಾಮಾಗ್ರಿಗಳು ಗಂಭೀರ ಸ್ವರೂಪವಾದ ಹಾನಿಯನ್ನು ಉಂಟು ಮಾಡುತ್ತದೆ. ಇದಕ್ಕೆ ಒಡ್ಡಿಕೊಂಡರೆ ಸುಟ್ಟ ಗಾಯಗಳಾಗುತ್ತವೆ ಮತ್ತು ಅಧಿಕ ಹೊಗೆ ಹೊರಸೂಸುವುದರಿಂದ ಉಸಿರಾಡುವುದು ಕಷ್ಟವಾಗುತ್ತದೆ. ಅಲ್ಲದೆ, ಇದನ್ನು ಉಸಿರಾಡುವಾಗ ಅಥವಾ ಚರ್ಮದ ಸಂಪರ್ಕದ ಮೂಲಕ ರಾಸಾಯನಿಕವೂ ದೇಹವನ್ನು ಸೇರಿಕೊಳ್ಳಬಹುದು. ಇದು ಚರ್ಮ ಮತ್ತು ಬಟ್ಟೆ ಸೇರಿದಂತೆ ಹಲವು ಮೇಲ್ಮೈಗಳಿಗೆ ಅಂಟಿಕೊಳ್ಳುತ್ತದೆ. ಇದನ್ನು ಹೊಗೆಯ ರೂಪದಲ್ಲಿ ಹೊರಗಿನ ಗಾಳಿಗೆ ಬಿಡುಗಡೆ ಮಾಡುಬಹುದು ಆದರೆ, ಇದನ್ನು ಜಲಮೂಲಗಳು ಸಂಪರ್ಕಿಸಿದರೆ, ಕಲುಷಿತಗೊಂಡು ಲಕ್ಷಾಂತರ ಜನರು ಮತ್ತು ಪ್ರಾಣಿಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ)ದ ವರದಿಯ ಪ್ರಕಾರ ಬಿಳಿ ರಂಜಕವನ್ನು ಆಹಾರವನ್ನು ಕಲುಷಿತಗೊಳಿಸಲು ಬಳಸಲಾಗುವುದಿಲ್ಲ ಎಂದು ಉಲ್ಲೇಖಿಸಿದೆ. ಅಲ್ಲದೆ, ಬಿಳಿ ರಂಜಕವನ್ನು ಹೊಗೆಯಾಗಿ ಬಿಡುಗಡೆ ಮಾಡಿದರೆ, ಅದು ಕೃಷಿ ಉತ್ಪನ್ನಗಳನ್ನು ಕಲುಷಿತಗೊಳಿಸುವುದಿಲ್ಲ ಎಂದು ಹೇಳಿದೆ. ಆದರೆ ಗಾಳಿಯೊಂದಿಗೆ ಪ್ರತಿಕ್ರಿಯಿಸದ ಬಿಳಿ ರಂಜಕದ ಕಣಗಳು ಕೃಷಿ ಉತ್ಪನ್ನಗಳನ್ನು ಕಲುಷಿತಗೊಳಿಸಬಹುದು ಎಂದು ಸಿಡಿಸಿ ತಿಳಿಸಿದೆ.

    ಬಿಳಿ ರಂಜಕ ಬಾಂಬ್​ಗಳನ್ನು ಬ್ಯಾನ್​ ಮಾಡಲಾಗಿದೆಯೇ?
    ಈ ಬಿಳಿ ರಂಜಕವು ಸ್ವಾಭಾವಿಕವಾಗಿ ಉತ್ಪತಿಯಾಗುವುದಿಲ್ಲ. ಇದನ್ನು ಫಾಸ್ಪೇಟ್​ ಕಲ್ಲುಗಳನ್ನು ಬಳಸಿ ತಯಾರಿಸಲಾಗುತ್ತದೆ. ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಬಿಳಿ ರಂಜಕ ಕೋಶಗಳನ್ನು ಅತಿ ಹೆಚ್ಚು ನಾಗರಿಕರು ಇರುವ ಪ್ರದೇಶಗಳಲ್ಲಿ ಬಳಸುವುದನ್ನು ನಿಷೇಧಿಸಲಾಗಿದೆ. ಆದಾಗ್ಯೂ ತೆರೆದ ಸ್ಥಳಗಳಲ್ಲಿ ಅದರ ಬಳಕೆಯನ್ನು ಸೈನ್ಯದ ರಕ್ಷಣೆಯಾಗಿ ಬಳಸಲು ಕಾನೂನು ಅನುಮತಿಸುತ್ತದೆ. ಈ ಬಿಳಿ ರಂಜಕ ಬಾಂಬ್​ ಅನ್ನು ನಿಷೇಧಿಸಲಾಗಿಲ್ಲ. ಆದರೆ, ನಾಗರಿಕ ಪ್ರದೇಶಗಳಲ್ಲಿ ಅವುಗಳ ಬಳಕೆಯನ್ನು ಯುದ್ಧ ಅಪರಾಧವೆಂದು ಪರಿಗಣಿಸಲಾಗುತ್ತದೆ. ಮಾನವ ಹಕ್ಕುಗಳ ಆಯೋಗದ ಕಣ್ಗಾವಲಿನಲ್ಲಿ ಇರುವ ದೇಶಗಳಾದ ಸಿರಿಯಾ, ಅಫ್ಘಾನಿಸ್ತಾನ ಮತ್ತು ಗಾಜಾದಂತಹ ಪ್ರದೇಶಗಳ ಯುದ್ಧ ವಲಯಗಳಲ್ಲಿ ಬಿಳಿ ರಂಜಕದ ಬಳಕೆಯಿಂದ ನಾಗರಿಕ ಸಾವುಗಳು ಈಗಾಗಲೇ ದಾಖಲಾಗಿವೆ ಎಂದು ಹೇಳಿದೆ.

    ಬಿಳಿ ರಂಜಕವನ್ನು ಎಲ್ಲೆಲ್ಲಿ ಬಳಸುತ್ತಾರೆ?
    ಈ ಬಿಳಿ ರಂಜಕವನ್ನು ರಸಗೊಬ್ಬರಗಳು, ಆಹಾರ ಸಂಯೋಜಕ ಮತ್ತು ಶುಚಿಗೊಳಿಸುವ ಸಂಯುಕ್ತಗಳಲ್ಲಿ ಒಂದು ಅಂಶವಾಗಿ ಬಳಸಲಾಗುತ್ತದೆ. ಆರಂಭದಲ್ಲಿ ಇದನ್ನು ಕ್ರಿಮಿನಾಶಕ ಮತ್ತು ಪಟಾಕಿಗಳಲ್ಲಿ ಬಳಸಲಾಗುತ್ತಿತ್ತು. ಅನೇಕ ದೇಶಗಳು ಅನೇಕ ವಲಯಗಳನ್ನು ಬಿಳಿ ರಂಜಕ ಬಳಕೆಯನ್ನು ನಿಷೇಧಿಸಿವೆ.

    ಇಸ್ರೇಲ್​ ಈ ಹಿಂದೆ ಈ ಬಾಂಬ್​ಗಳನ್ನು ಬಳಸಿತ್ತಾ?
    ಮಾನವ ಹಕ್ಕುಗಳ ಆಯೋಗದ ವರದಿಯ ಪ್ರಕಾರ, 2008ರ ಡಿಸೆಂಬರ್ 27 ರಿಂದ 2009ರ ಜನವರಿ 18ರವರೆಗೆ ನಡೆದ ‘ಆಪರೇಷನ್ ಕ್ಯಾಸ್ಟ್ ಲೀಡ್’ ಎಂದು ಕರೆಯಲ್ಪಡುವ ಗಾಜಾದಲ್ಲಿ ನಡೆದ 22 ದಿನಗಳ ಮಿಲಿಟರಿ ಕಾರ್ಯಾಚರಣೆಯ ವೇಳೆ ಇಸ್ರೇಲ್ ಬಿಳಿ ರಂಜಕದ ಯುದ್ಧಸಾಮಗ್ರಿಗಳನ್ನು ವ್ಯಾಪಕವಾಗಿ ಬಳಸಿದೆ. ಆದರೆ, ಕ್ಷಿಪಣಿಗಳು, ಬಾಂಬ್‌ಗಳು, ಫಿರಂಗಿಗಳು, ಟ್ಯಾಂಕ್ ಶೆಲ್‌ಗಳು ಮತ್ತು ಸಣ್ಣ ಶಸ್ತ್ರಾಸ್ತ್ರಗಳ ಬೆಂಕಿಯಿಂದ ಜನರು ಮೃತಪಟ್ಟ ಕಾರಣ, ಬಿಳಿ ರಂಜಕದ ಯುದ್ಧಸಾಮಗ್ರಿಗಳು ಗಾಜಾದಲ್ಲಿ ಹೆಚ್ಚಿನ ನಾಗರಿಕರನ್ನು ಕೊಲ್ಲಲಿಲ್ಲ ಎಂದು ವರದಿ ಸ್ಪಷ್ಟಪಡಿಸಿದೆ. ಆದರೆ, ಜನಸಾಂದ್ರತೆ ಇರುವ ಪ್ರದೇಶದಲ್ಲಿ ಇದರ ಬಳಕೆಯು ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಉಲ್ಲಂಘಿಸಿದೆ ಎಂದು ಆಯೋಹ ಹೇಳಿದೆ. (ಏಜೆನ್ಸೀಸ್​)

    ಇಸ್ರೇಲ್​-ಹಮಾಸ್​ ಯುದ್ಧ: ನಿಜವಾಗುತ್ತಾ ಬಲ್ಗೇರಿಯನ್ ನಿಗೂಢ ಮಹಿಳೆ ಬಾಬಾ ವಂಗಾರ ಭವಿಷ್ಯವಾಣಿ?

    ಹಮಾಸ್​ ಉಗ್ರರಿಂದ ಗಾಜಾ ಗಡಿ ಪ್ರದೇಶಗಳನ್ನು ಮತ್ತೆ ವಶಕ್ಕೆ ಪಡೆದ ಇಸ್ರೇಲ್​: 3000 ದಾಟಿದ ಸಾವಿನ ಸಂಖ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts