More

    ಪ್ರಧಾನಿ ಕಾರ್ಯಕ್ರಮಕ್ಕೆ 1.50 ಲಕ್ಷ ಜನ ಸೇರುವ ನಿರೀಕ್ಷೆ

    ತುಮಕೂರು : ಪ್ರಧಾನಿ ನರೇಂದ್ರಮೋದಿ ತುಮಕೂರಿಗೆ ನಾಳೆ (ಜ.2) ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಸಮಾರಂಭ ನಡೆಯುವ ಸ್ಥಳ ಪರಿಶೀಲನೆ ನಡೆಸಿ, ಅಧಿಕಾರಿಗಳ ಜತೆ ಸಭೆ ನಡೆಸಿದರು.

    ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ವೇದಿಕೆ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು.ಜನಪ್ರತಿನಿಧಿಗಳು, ಅಧಿಕಾರಿಗಳ ಜತೆ ಸಭೆ ನಡೆಸಿದ್ದು ಸೂಚನೆಗಳನ್ನು ನೀಡಿದ್ದೇನೆ. ಐತಿಹಾಸಿಕ ಕಾರ್ಯಕ್ರಮದಲ್ಲಿ 1.50 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದ್ದು ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

    ಮೋದಿ ಅವರು ಸಿದ್ಧಗಂಗಾ ಮಠಕ್ಕೆ ಮಧ್ಯಾಹ್ನ 2.15ಕ್ಕೆ ಬರಲಿದ್ದು ಡಾ.ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಲಿದ್ದಾರೆ. 3.30 ರಿಂದ 5ರವರೆಗೆ ಜೂನಿಯರ್ ಕಾಲೇಜು ಮೈದಾನದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ ಎಂದರು.

    ಅಪಾರ ಜನ ಸಮಾವೇಶಗೊಳ್ಳುವ ಸಾಧ್ಯತೆಯಿದ್ದು ನಗರದ ಪ್ರಮುಖ ರಸ್ತೆಗಳಲ್ಲಿ ಎಲ್ಇಡಿ ಸ್ಕ್ರೀನ್ ಮೂಲಕ ಮೋದಿ ಭಾಷಣ ಪ್ರಸಾರವಾಗಲಿದೆ, ಧ್ವನಿ ವರ್ಧಕ ಕೂಡ ಇರಲಿದೆ ಎಂದರು. ಸಾಂಕೇತಿಕವಾಗಿ ಕೆಲವು ಕೃಷಿ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ಪ್ರಮಾಣಪತ್ರ ನೀಡಲಿದ್ದಾರೆ, ದೇಶದ ವಿವಿಧ ರಾಜ್ಯದ 28 ಪ್ರಗತಿಪರ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ, ಕೇಂದ್ರ ಸಚಿವ ಪುರುಷೋತ್ತಮ್ ರೂಪಾಲ, ಮಣಿಪುರ, ಜಾರ್ಖಂಡ್ ಹಾಗೂ ಉತ್ತರಾಖಂಡ್ ರಾಜ್ಯಪಾಲರು ಆಗಮಿಸುವ ನಿರೀಕ್ಷೆ ಇದೆ ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ವಸತಿ ಸಚಿವ ವಿ.ಸೋಮಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಮಸಾಲ ಜಯರಾಮ್, ಸಂಸದ ಜಿ.ಎಸ್.ಬಸವರಾಜು ಮತ್ತಿತರರು ಇದ್ದರು.

    ವಸ್ತು ಸಂಗ್ರಹಾಲಯಕ್ಕೆ ಶಂಕುಸ್ಥಾಪನೆ: ಸಿದ್ಧಗಂಗಾ ಮಠದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಸಂಬಂಧಿಸಿದಂತೆ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಶ್ರೀಮಠ ಮುಂದಾಗಿದ್ದು ಕಟ್ಟಡ ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿ ಜ.2ರಂದು ನೆರವೇರಿಸಲಿದ್ದಾರೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಮಠದ ಖಾಸಗಿ ಕಾರ್ಯಕ್ರಮದಲ್ಲಿ ಆಯ್ದ ಗಣ್ಯರು ಮಾತ್ರ ಭಾಗವಹಿಸಲಿದ್ದು ಮಕ್ಕಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ ಎಂದರು.

    ಭದ್ರತೆಗೆ 3 ಸಾವಿರ ಪೊಲೀಸರು: ಕೃಷಿ ಸಮ್ಮಾನ್ ಯೋಜನೆ 2ನೇ ಹಂತದ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆಗಾಗಿ 3 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.

    ಜ.2 ರಂದು ಮಧ್ಯಾಹ್ನ 2.15ಕ್ಕೆ ತುಮಕೂರಿನ ವಿಶ್ವವಿದ್ಯಾಲಯ ಹೆಲಿಪ್ಯಾಡ್‌ಗೆ ಬಂದಿಳಿಯುವ ಮೋದಿ ಮೊದಲಿಗೆ ಸಿದ್ದಗಂಗಾಮಠಕ್ಕೆ ಭೇಟಿ ನೀಡುವರು. ಅಲ್ಲಿಂದ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಕೃಷಿ ಸಮ್ಮಾನ್ ಹಾಗೂ ಕೃಷಿ ಕರ್ಮಣ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವರು. ಈ ಕಾರ್ಯಕ್ರಮ ಮಧ್ಯಾಹ್ನ 3.30 ರಿಂದ ಸಂಜೆ 5 ಗಂಟೆವರೆಗೆ ನಡೆಯಲಿದೆ. ನಂತರ ವಿವಿ ಹೆಲಿಪ್ಯಾಡ್‌ಗೆ ಮರಳಿ ಬೆಂಗಳೂರಿನತ್ತ ವಾಯುಮಾರ್ಗದಲ್ಲಿ ತೆರಳುವರು.

    ಕೇಂದ್ರ ವಲಯದ ಜಿಲ್ಲೆಗಳಾದ ತುಮಕೂರು, ರಾಮನಗರ, ಕೆಜಿಎಫ್, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಪೊಲೀಸರನ್ನು ಭದ್ರತಾ ವ್ಯವಸ್ಥೆಗೆ ಬಳಸಿಕೊಳ್ಳಲಾಗುತ್ತಿದೆ. ಕೇಂದ್ರ ವಲಯದ ಐಜಿಪಿ ಶರತ್ ಚಂದ್ರ ತುಮಕೂರಿನಲ್ಲಿ ಮೊಕ್ಕಾಂ ಹೂಡಿದ್ದು ಭದ್ರತಾ ವ್ಯವಸ್ಥೆ ಉಸ್ತುವಾರಿ ಹೊತ್ತುಕೊಂಡಿದ್ದಾರೆ. 6 ಎಸ್ಪಿ, 6 ಎಎಸ್ಪಿ ಸೇರಿದಂತೆ 10 ಡಿಎಸ್‌ಪಿ, 32 ಸಿಪಿಐ, 66 ಪಿಎಸ್‌ಐ, 80 ಟ್ರಾಫಿಕ್ ಪೊಲೀಸರು ಹಾಗೂ 50 ಮಹಿಳಾ ಪೇದೆಗಳು ಸೇರಿದಂತೆ 1321 ಪೊಲೀಸರು ನಗರಕ್ಕೆ ಬಂದಿಳಿದಿದ್ದಾರೆ. ಇನ್ನೂ ಮೂರುದಿನಗಳ ಕಾಲ ಹಗಲಿರುಳು ಪೊಲೀಸರು ಭದ್ರತಾ ವ್ಯವಸ್ಥೆಯಲ್ಲಿ ತೊಡಗಿಕೊಳ್ಳಲಿದ್ದಾರೆ.

    ಪೊಲೀಸ್ ಸರ್ಪಗಾವಲು: ಕೇಂದ್ರ ವಲಯ ಅಲ್ಲದೆ ಚಾಮರಾಜನಗರ, ಮೈಸೂರು ಜಿಲ್ಲೆಗಳಿಂದಲೂ ಪೊಲೀಸರನ್ನು ಭದ್ರತಾ ವ್ಯವಸ್ಥೆಗೆ ಬಳಸಿಕೊಳ್ಳಲಾಗುವುದು. ರಾಜ್ಯ ಹಾಗು ಕೇಂದ್ರ ಗುಪ್ತಚರ ಇಲಾಖೆ ಸಿಬ್ಬಂದಿ ಹಗಲಿರುಳು ಮೋದಿ ಕಾರ್ಯಕ್ರಮಕ್ಕೆ ಶ್ರಮಿಸುತ್ತಿದ್ದು ಕ್ಷಣಕ್ಷಣದ ಮಾಹಿತಿಯನ್ನು ಕಲೆಹಾಕುವಲ್ಲಿ ನಿರತರಾಗಿದ್ದಾರೆ. ಪ್ರಧಾನಿ ಮೋದಿ ಭದ್ರತೆ ಹೊಣೆಗಾರಿಕೆ ನೋಡಿಕೊಳ್ಳಲು ಎಸ್‌ಪಿಜಿ ಐಜಿ ನೇತೃತ್ವದಲ್ಲಿ 47 ಕಮಾಂಡೋಗಳು ಈಗಾಗಲೇ ಆಗಮಿಸುತ್ತಿದ್ದು ಹೆಲಿಪ್ಯಾಡ್, ಸಿದ್ದಗಂಗಾಮಠ ಹಾಗೂ ಕಾರ್ಯಕ್ರಮ ನಡೆಯುವ ಸರ್ಕಾರಿ ಜೂನಿಯರ್ ಕಾಲೇಜು ಮೈದಾನವನ್ನು ಸುಪರ್ದಿಗೆ ಪಡೆದಿದ್ದಾರೆ. ಎಸ್‌ಪಿಜಿ ಸೂಚನೆ ಮೇರೆಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಭದ್ರತಾ ವ್ಯವಸ್ಥೆಗೆ ಸಹಕರಿಸುತ್ತಿದ್ದಾರೆ.

    ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ: ಪ್ರಧಾನಿ ನರೇಂದ್ರಮೋದಿ ಜಿಲ್ಲೆಗೆ ಆಗಮಿಸುತ್ತಿರುವುದು ಹೆಮ್ಮೆಯ ಸಂಕೇತವಾಗಿದ್ದು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಮನವಿ ಮಾಡಿದರು.

    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರ ಮಟ್ಟದ ಕಾರ್ಯಕ್ರಮ ಜಿಲ್ಲೆಗೆ ಹೆಮ್ಮೆಯಾಗಿದ್ದು ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು. ದೇಶದ ಪ್ರಗತಿಪರ ರೈತರಿಗೆ ‘ಕೃಷಿ ಕರ್ಮಣಿ’ ಪ್ರಶಸ್ತಿ ಪ್ರದಾನ ಹಾಗೂ ಕೃಷಿ ಸಮ್ಮಾನ್ 4ನೇ ಕಂತು ಪಾವತಿ ಯೋಜನೆಗೆ ಪ್ರಧಾನಮಂತ್ರಿಗಳು ಚಾಲನೆ ನೀಡಲಿದ್ದು ರೈತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಎಲ್ಲ ಅಗತ್ಯಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ಪ್ರಧಾನಿ ಮೋದಿ ಹಾಗೂ ಗಣ್ಯರ ಭದ್ರತೆಗೆ ಎಲ್ಲ ಸೂಚನೆಗಳನ್ನು ಪಾಲಿಸಲಾಗಿದೆ, ಬುಧವಾರ ಮಧ್ಯಾಹ್ನ ರಿಹರ್ಸಲ್ ನಡೆಯಲಿದ್ದು, ಜನರ ಸಹಕಾರ ಅಗತ್ಯವಾಗಿದೆ, ಸಂಚಾರದಲ್ಲಿ ಕೆಲವು ವ್ಯತ್ಯಯವಾಗಲಿದ್ದು ಎಲ್ಲರೂ ಸಹಕಾರ ನೀಡಬೇಕು ಎಂದರು.ಅಂದಾಜು 4 ಕೋಟಿ ರೂ. ಕಾರ್ಯಕ್ರಮಕ್ಕೆ ಖರ್ಚಾಗುತ್ತಿದ್ದು ಎಲ್ಲದನ್ನು ಕೇಂದ್ರ ಕೃಷಿ ಸಚಿವಾಲಯದಿಂದ ನೀಡಲಾಗುತ್ತಿದೆ, ವೇದಿಕೆಯಲ್ಲಿ 12 ಜನರು ಕೂರುವ ಸಾಧ್ಯತೆಯಿದೆ ಅಂತಿಮವಾಗಿ ಸಂಖ್ಯೆ ಹೆಚ್ಚಾಗಬಹುದು ಎಂದರು. ಜಿಲ್ಲೆಯಲ್ಲಿ ಕೃಷಿ ಸಮ್ಮಾನ್ ಯೋಜನೆಯ ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಕರೆತರಲು 500 ಸರ್ಕಾರಿ ಬಸ್‌ಗಳನ್ನು ಬಳಸಲಾಗುತ್ತಿದೆ, ನೆರೆ, ಹೊರೆ ಜಿಲ್ಲೆಗಳಿಂದಲೂ ರೈತರು ಆಗಮಿಸಲಿದ್ದಾರೆ ಎಂದರು.

    ತುಮಕೂರಿನ ಸರ್ಕಾರಿ ಹೈಸ್ಕೂಲ್, ಮಹಿಳಾ ಪದವಿ ಕಾಲೇಜು, ಎಂಪ್ರೆಸ್ ಕಾಲೇಜುಗಳಿಗೆ ಗುರುವಾರ ರಜೆ ಕೊಟ್ಟು, ಭಾನುವಾರ ತರಗತಿ ನಡೆಸಲು ಸೂಚಿಸಲಾಗಿದೆ, ಇನ್ನುಳಿದ ಶಾಲೆ, ಕಾಲೇಜುಗಳಿಗೆ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ ಎಂದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ ಸಂಚಾರ ಬದಲಾವಣೆ, ಕಾರ್ಯಕ್ರಮಕ್ಕೆ ಆಗಮಿಸುವವರು ಪಾಲಿಸಬೇಕಾದ ಸೂಚನೆಗಳ ಬಗ್ಗೆ ತಿಳಿಸಿದರು. ಎಡಿಸಿ ಚನ್ನಬಸಪ್ಪ ಇದ್ದರು.

    ಮಾರ್ಗ ಬದಲಾವಣೆ: ಜ.2ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ತುಮಕೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರದಲ್ಲಿ ಮಾರ್ಗ ಬದಲಾವಣೆ ಮತ್ತು ಬಸ್ ಹಾಗೂ ಇತರೆ ಭಾರಿ ವಾಹನಗಳ ನಿಲುಗಡೆ ಹಾಗೂ ಸಮಾರಂಭಕ್ಕೆ ಬರುವ ಲಘು ವಾಹನಗಳ ನಿಲುಗಡೆಗೆ ಪೊಲೀಸರು ಕೆಲವು ಸೂಚನೆಗಳನ್ನು ನೀಡಿದ್ದು ಅದನ್ನು ಪಾಲಿಸಲು ಮನವಿ ಮಾಡಿದ್ದಾರೆ.

    ರಿಂಗ್‌ರೋಡ್‌ನಿಂದ ಜೆ.ಸಿ.ರಸ್ತೆ, ಮಂಡಿಪೇಟೆ ರಸ್ತೆ, ಜನರಲ್ ಕಾರಿಯಪ್ಪ ರಸ್ತೆ, ಗಂಗೋತ್ರಿ ರಸ್ತೆ, ಎಸ್‌ಐಟಿ ಮುಖ್ಯರಸ್ತೆ, ಎಸ್‌ಎಸ್ ಪುರಂ ಮುಖ್ಯರಸ್ತೆಯಿಂದ ಉಪ್ಪಾರಹಳ್ಳಿ ಪ್ಲೈಒವರ್ ವರೆಗೆ, ಮಿರ್ಜಿ ಪೆಟ್ರೋಲ್ ಬಂಕ್‌ನಿಂದ ರೋಟಿಘರ್, ಗೆದ್ದಲಹಳ್ಳಿಯಿಂದ ಉಪ್ಪಾರಹಳ್ಳಿ ಪ್ಲೈಒವರ್ ವರೆಗೆ ಸಾರ್ವಜನಿಕ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಬಿ.ಎಚ್.ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಭಂಧಿಸಲಾಗಿದ್ದು ಬೆಂಗಳೂರು ಕಡೆಯಿಂದ ಬರುವ ವಾಹನಗಳು ರಿಂಗ್‌ರಸ್ತೆ ಮೂಲಕ ನಗರ ದಾಟಬಹುದು, ಗುಬ್ಬಿ ಕಡೆಯಿಂದ ಬರುವ ವಾಹನಗಳು ಮಂಡಿಪೇಟೆ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಸಾಧಿಸಲು ಸೂಚಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts