More

    ವಂದೇ ಭಾರತ ರೈಲು ಸೇವೆ ವಿಸ್ತರಿಸಿ

    ವಿಜಯಪುರ: ಭಾರತದ ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಅಂಗವಾಗಿ ಪ್ರಾರಂಭಿಸಲಾಗಿರುವ ವಂದೇ ಭಾರತ ರೈಲು ಸೇವೆಯನ್ನು ವಿಜಯಪುರದಿಂದ ಬಾಗಲಕೋಟೆ ಮಾರ್ಗವಾಗಿ ಬೆಂಗಳೂರಿಗೆ ಮತ್ತು ಮುಂಬೈ- ಸೋಲಾಪುರ ರೈಲನ್ನು ವಿಜಯಪುರದವರೆಗೆ ವಿಸ್ತರಿಸುವಂತೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವಗೆ ಪತ್ರ ಬರೆದಿದ್ದಾರೆ.

    ವಿಜಯಪುರದಿಂದ ಬಾಗಲಕೋಟೆ ಮಾರ್ಗವಾಗಿ ಬೆಂಗಳೂರಿಗೆ ಹೋಗಲು ರೈಲು ಸೇವೆ ಇದ್ದರೂ ಈ ರೈಲುಗಳ ಸಂಚಾರದ ಸಮಯ ಅನುಕೂಲವಾಗಿಲ್ಲ. ಅಲ್ಲದೇ, ಈ ರೈಲುಗಳು ಸರಿಯಾದ ಸಮಯಕ್ಕೆ ನಿಗದಿತ ಸ್ಥಳಗಳನ್ನು ತಲುಪುತ್ತಿಲ್ಲ. ಇದರಿಂದ ಕೆಲಸ ಕಾರ್ಯಗಳಿಗಾಗಿ ಮತ್ತು ದಿನನಿತ್ಯದ ವ್ಯವಹಾರ ಸಂಬಂಧಿ ಕೆಲಸಗಳಿಗಾಗಿ ಹಾಗೂ ಸರ್ಕಾರಿ ಕಚೇರಿ ಕೆಲಸಗಳಿಗಾಗಿ ಬೆಂಗಳೂರಿಗೆ ಹೋಗಿ- ಬರುವ ಜನರಿಗೆ ತೊಂದರೆಯಾಗಿದೆ. ಅಲ್ಲದೇ, ಬೆಂಗಳೂರಿನಿಂದ ವಿಜಯಪುರಕ್ಕೆ ಬರುವ ರೈಲುಗಳ ಸಂಚಾರ ಸಮಯವೂ ಸಹ ಹೆಚ್ಚಾಗಿದೆ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

    ಹೀಗಾಗಿ ವಿಜಯಪುರದಿಂದ ಪ್ರತಿದಿನ ರಾತ್ರಿ 9ಕ್ಕೆ ರೈಲು ಸಂಚಾರ ಪ್ರಾರಂಭಿಸಿ ಮರುದಿನ ಬೆಳಗ್ಗೆ 6 ಕ್ಕೆ ಬೆಂಗಳೂರು ತಲುಪುವಂತಾಗಬೇಕು. ಅದೇ ರೀತಿ ಬೆಂಗಳೂರಿನಿಂದಲೂ ಪ್ರತಿದಿನ ರಾತ್ರಿ 9 ಕ್ಕೆ ರೈಲು ಹೊರಟು ಮರುದಿನ ಬೆಳಗ್ಗೆ 6 ಕ್ಕೆ ವಿಜಯಪುರ ತಲುಪುವ ವ್ಯವಸ್ಥೆ ಮಾಡಬೇಕು. ವಿಜಯಪುರ ಜಿಲ್ಲೆ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿದ್ದು, ಗಡಿ ಭಾಗದ ಜನರು ಮುಂಬೈ ಮತ್ತು ಸೋಲಾಪೂರ ಪಟ್ಟಣಗಳಿಗೆ ಉದ್ಯೋಗ ಹಾಗೂ ವ್ಯಾಪಾರ ವಹಿವಾಟುಗಳಿಗಾಗಿ ಸಂಚರಿಸುತ್ತಾರೆ.

    ಈ ಭಾಗದ ರೈತರು ಬೆಳೆದಿರುವ ಉತ್ಪನ್ನಗಳನ್ನೂ ಸಾಗಿಸುತ್ತಾರೆ. ಜನರ ವಹಿವಾಟುಗಳು ಸಾಕಷ್ಟು ಸಂಖ್ಯೆಯಲ್ಲಿ ಇರುವುದರಿಂದ ಮುಂಬೈ- ಸೋಲಾಪೂರ ನಡುವೆ ಸಂಚರಿಸುವ ಒಂದೇ ಭಾರತ ರೈಲು ವಿಜಯಪುರದವರೆಗೂ ವಿಸ್ತರಿಸಿದರೆ ಈ ಭಾಗದ ರೈತರಿಗೆ, ಉದ್ಯಮಿಗಳಿಗೆ, ವ್ಯಾಪಾರ ವಹಿವಾಟುದಾರರಿಗೆ ಮತ್ತು ಉದ್ಯೋಗಸ್ಥರಿಗೆ ಬಹಳಷ್ಟು ಅನಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಮುಂಬೈ- ಸೋಲಾಪೂರದವರೆಗೆ ಸಂಚರಿಸುವ ವಂದೇ ಭಾರತ ರೈಲನ್ನು ವಿಜಯಪುರದವರೆಗೆ ಓಡಿಸಲು ಆದೇಶ ಹೊರಡಿಸಬೇಕು ಎಂದು ಸುನೀಲಗೌಡ ಪಾಟೀಲ ಪತ್ರ ಮುಖೇನ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts