More

    ಎಕ್ಸಪೋದಲ್ಲಿ ವಿದ್ಯಾರ್ಥಿಗಳ ಕುತೂಹಲ ತಣಿಸುತ್ತಿರುವ ವಿಜ್ಞಾನ ಮಾದರಿಗಳ ವಸ್ತು ಪ್ರದರ್ಶನ | ಅಗಸ್ತ್ಯ – ಫೌಂಡೇಷನ್ ಆಯೋಜನೆ


    ಅಶೋಕ ಶೆಟ್ಟರ – ವಿಜಯಪುರ : ಪರೀಕ್ಷೆಗಳು ಹತ್ತಿರ ಬಂದಂತೆಲ್ಲ ಅನೇಕ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ವಿಷಯಗಳ ಬಗ್ಗೆ ಹೆಚ್ಚು ಆತಂಕ ಶುರುವಾಗುತ್ತದೆ. ಆದರೆ, ಅದು ಸತ್ಯವಲ್ಲ ಎನ್ನುವುದನ್ನು ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಮಾಡಿ, ಅದರಲ್ಲಿ ಯಶಸ್ವಿ ಹೆಜ್ಜೆ ಇಟ್ಟಿರುವುದು ಅಗಸ್ತ್ಯ – ಫೌಂಡೇಷನ್ ಸಂಸ್ಥೆಯ ಮುಖಾಂತರ ಲಕ್ಷಾಂತರ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿದೆ.

    ಇದಕ್ಕೆ ಪೂರಕವಾಗಿಯೇ ಇಲ್ಲಿನ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ವಿಜಯವಾಣಿ ಹಾಗೂ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತಿರುವ ಮೂರು ದಿನಗಳ ಶಿಕ್ಷಣ ಮೇಳದಲ್ಲಿ ಅಗಸ್ತ್ಯ – ಫೌಂಡೇಷನ್ ನ ವಿಜ್ಞಾನ ಮತ್ತು ಗಣಿತ ಮಾದರಿಗಳ ಪ್ರದರ್ಶನ ಹೆಚ್ಚು ಗಮನ ಸೆಳೆಯುತ್ತಿದೆ.

    ಶಿಕ್ಷಣ ಮೇಳಕ್ಕೆ ಹರಿದು ಬರುತ್ತಿರುವ ಸಾವಿರಾರು ವಿದ್ಯಾರ್ಥಿಗಳು ಶೈಕ್ಷಣಿಕ ಮಾಹಿತಿ ನೀಡುವ ಮಳಿಗೆಗೆ ಭೇಟಿ ಕೊಟ್ಟು ವಿಜ್ಞಾನ ಮತ್ತು ಗಣಿತ ವಿಷಯಗಳ ಬಗ್ಗೆ ತಮ್ಮಲ್ಲಿರುವ ಅನೇಕ ಗೊಂದಲಗಳನ್ನು ಪರಿಹರಿಸಿಕೊಂಡು ಆತ್ಮವಿಶ್ವಾಸದಿಂದ ಹೊರಬರುತ್ತಿದ್ದಾರೆ. ಮಳಿಗೆಯಲ್ಲಿ 120ಕ್ಕೂ ಹೆಚ್ಚು ಮಾದರಿಗಳನ್ನು ಪ್ರದರ್ಶನದಲ್ಲಿ ಕಾಣಬಹುದಾಗಿದೆ. ಪ್ರತಿಯೊಂದು ಮಾದರಿ ಬಗ್ಗೆ ಸ್ವತಃ ವಿದ್ಯಾರ್ಥಿಗಳು ಸಂಪೂರ್ಣವಾಗಿ ತಿಳಿದುಕೊಂಡು ಅದನ್ನು ವೀಕ್ಷಿಸಲು ಬರುವ ಪ್ರತಿಯೊಬ್ಬರಿಗೂ ಮನದಟ್ಟಾಗುವಂತೆ ತಿಳಿಸಿಕೊಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.

    ಮೂರು ದಿನಗಳ ಈ ಮೇಳದಲ್ಲಿ ಮೊದಲ ಎರಡು ದಿನಗಳಾದ ಸೋಮವಾರ ಹಾಗೂ ಮಂಗಳವಾರ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕ, ಪೋಷಕರು ಇದರ ಪ್ರಯೋಜನ ಪಡೆದುಕೊಳ್ಳುತ್ತಿರುವುದು ಕಂಡು ಬಂದಿತು. ಬುಧವಾರವೂ ಸಹ ಇದಕ್ಕೆ ಅವಕಾಶ ಇರುವುದರಿಂದ ಶಿಕ್ಷಕರು ತಮ್ಮ ಶಾಲೆಯ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆದುಕೊಂಡು ಬರುವುದಾಗಿ ಅನೇಕ ಶಿಕ್ಷಕರು ತಿಳಿಸಿದ್ದಾರೆ.

    ಅಗಸ್ತ್ಯ – ಫೌಂಡೇಷನ್​ನವರು ವಸ್ತು ಪ್ರದರ್ಶನವಿದೆ ಎನ್ನುವ ಮಾಹಿತಿ ತಿಳಿದು ಬರಿ ವಿಜಯಪುರ ಜಿಲ್ಲೆ ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳಿಂದ ಅನೇಕ ವಿಜ್ಞಾನ ಮತ್ತು ಗಣಿತ ಶಿಕ್ಷಕರು ಆಗಮಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದ ದೃಶ್ಯಕ್ಕೆ ವಿಜಯವಾಣಿ ಹಾಗೂ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದ ಎಜುಕೇಷನ್ ಎಕ್ಸ್ಪೋ ಸಾಕ್ಷಿಯಾಗಿದ್ದಲ್ಲದೇ ಬಂದವರೆಲ್ಲವರೂ ಈ ಒಂದು ಅವಕಾಶ ಕಲ್ಪಿಸಿದ್ದಕ್ಕಾಗಿ ವಿಜಯವಾಣಿ ಪತ್ರಿಕೆಗೆ ಅಭಿನಂದನೆ ಹೇಳುತ್ತಿದ್ದರು.

    ಪ್ರದರ್ಶನದಲ್ಲಿ ಏನೇನಿವೆ.

    ಖಗೋಳದ ಮಾದರಿಗಳಾದ ಗ್ರಹಣಗಳು, ಹಗಲು ರಾತ್ರಿ, ಕಾಲಗಳು, ಚಂದ್ರನ ಮುಖಗಳು, ಅಮವಾಸ್ಯೆ, ಹುಣ್ಣಿಮೆ ಉಂಟಾಗುವ ಮಾದರಿಗಳು. ರಾಸಾಯನಶಾತ್ರದ ಬಗ್ಗೆ 20ಕ್ಕೂ ಹೆಚ್ಚು ಮಾದರಿಗಳು, ಮಾನವ ದೇಹದ ಅಂಗಾಂಗಗಳು ಮೂಳೆಗಳು ಪೀನ ದರ್ಪಣ ನಿಮ್ನ ದರ್ಪಣ, ಮಸೂರಗಳು, ವಿದ್ಯುತ್ ಶಕ್ತಿ, ಆಯಸ್ಕಾಂತದ ಮಾದರಿಗಳು, ಗಣಿತದ ಪ್ರಮೇಯಗಳು, ಎಸಿಡಿಸಿ ಡೈನಮೋ, ಮೋಟರ್‌ಗಳು ಸೇರಿದಂತೆ 120ಕ್ಕೂ ಹೆಚ್ಚು ಮಾದರಿಗಳನ್ನು ನೋಡುವುದಷ್ಟೆ ಅಲ್ಲದೇ 120ಕ್ಕೂ ಹೆಚ್ಚು ವೈಐಎಲ್ ಮಕ್ಕಳಿಂದ ವಿಜ್ಞಾನ ಮತ್ತು ಗಣಿತ ವಿಷಯಗಳ ಬಗ್ಗೆ ತಮಗಿರುವ ಗೊಂದಲವನ್ನು ಬಗೆಹರಿಸಿಕೊಳ್ಳಬಹುದಾಗಿದೆ. ವಿಜಯಪುರದ ಅಗಸ್ತ್ಯ – ಫೌಂಡೇಷನ್ ಮುಖ್ಯಸ್ಥೆ ಗೀತಾ ಪಾಟೀಲ ಅವರ ನೇತೃತ್ವದಲ್ಲಿ 14 ಸಿಬ್ಬಂದಿ ಸಹ ಮಾರ್ಗದರ್ಶನ ನೀಡುತ್ತಿದ್ದಾರೆ.

    ಪವಾಡ ಬಯಲು

    ವಿಜ್ಞಾನದ ಕೆಲವು ವಿಸ್ಮಯಗಳು ಹಾಗೂ ರಾಸಾಯನಿಕ ಪ್ರಕ್ರಿಯೆಗಳು ನಡೆಯುವಂತದ್ದನ್ನು ಕೆಲವರ ಮನೋದೌರ್ಬಲ್ಯವನ್ನು ಬಳಕೆ ಮಾಡಿಕೊಂಡು ಮುಗ್ದ ಜನರನ್ನು ಪವಾಡ, ಮಾಟ, ತಂತ್ರ ಎದುರಿಸುವುದನ್ನು ನಾವೆಲ್ಲ ನೋಡಿದ್ದೇವೆ. ಇದಕ್ಕೂ ಸಹ ವಿಜ್ಞಾನ ಮಾದರಿಗಳ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿಯೇ ಸತ್ಯವನ್ನು ತಿಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಚೌಕಾಕಾರದ ಬಾಕ್ಸ್ನಲ್ಲಿ ಕ್ವಾಯಿನ್ ಹಾಕಿದಾಗ ಅದು ಕಾಣದಿರುವುದಕ್ಕೆ ದರ್ಪಣದ ಪ್ರತಿಫಲನ ಎನ್ನುವ ಸತ್ಯವನ್ನು ವಿದ್ಯಾರ್ಥಿಗಳು ತಿಳಿಸಿಕೊಡುತ್ತಾರೆ. ಲಿಂಬೆ ಹಣ್ಣು ಕಟ್ ಮಾಡಿದಾಗ ರಕ್ತ ಬರುತ್ತದೆ ಎಂದು, ಅರಿಷಿಣದಲ್ಲೂ ರಕ್ತ ತೋರಿಸುವ ಬಗೆ ಹೇಗೆ ಎನ್ನುವುದನ್ನು ಹಾಗೆಯೇ ಇದ್ದಿಲಿಗೆ ನೀರು ಹಾಕಿದಾಗ ಬೆಂಕಿ ಏಕೆ ಕಾಣಿಸುತ್ತದೆ ಎನ್ನುವುದು ಹೀಗೆ ಅನೇಕ ವಿಚಾರಗಳಿಗೆ ವೈಜ್ಞಾನಿಕ ಕಾರಣವನ್ನು ಎಲ್ಲರಿಗೂ ಮನದಟ್ಟಾಗುವಂತೆ ಎಳೆಎಳೆಯಾಗಿ ತಿಳಿಸಿಕೊಡುತ್ತಿದ್ದಾರೆ.

    ಅಗಸ್ತ್ಯ ಕೋರ್ ವಿಜ್ಞಾನ ಚಟುವಟಿಕೆ ಕೇಂದ್ರದಲ್ಲಿ ಮಕ್ಕಳಿಗೆ ಪ್ರಾಯೋಗಿಕ ಕಲಿಕೆಗೆ ಉಚಿತ ವೀಕ್ಷಣೆಗೆ ಅವಕಾಶವಿದೆ. ಇದೀಗ ಮೂರು ದಿನ ವಿಜಯವಾಣಿ ಪತ್ರಿಕೆ ಏರ್ಪಡಿಸಿರುವ ಶಿಕ್ಷಣ ಮೇಳದಲ್ಲಿ ಮಾದರಿಗಳ ಪ್ರದರ್ಶನಕ್ಕೆ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗುತ್ತಿದೆ. ಬುಧವಾರವೂ ಸಹ ಪ್ರದರ್ಶನ ಇರುತ್ತದೆ. ಸಾವಿರಾರು ವಿದ್ಯಾರ್ಥಿಗಳು ಮೇಳಕ್ಕೆ ಬಂದು ವಿಜ್ಞಾನ ಮತ್ತು ಗಣಿತ ವಿಷಯಗಳ ಬಗ್ಗೆ ಇರುವ ಗೊಂದಲ ನಿವಾರಿಸಿಕೊಂಡು ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಏರ್ಪಡಿಸಿರುವ ವಿಜಯವಾಣಿ ಪತ್ರಿಕೆಗೆ ವಿಶೇಷ ಅಭಿನಂದನೆಗಳು.
    ಆಕಾಶ ಅಂಗಡಿ, ಅಗಸ್ತ್ಯ - ಫೌಂಡೇಷನ್ ಮಾರ್ಗದರ್ಶಕರು, ವಿಜಯಪುರ
    ವಿಜ್ಞಾನ ಹಾಗೂ ಗಣಿತ ವಿಷಯಗಳಲ್ಲಿ ನನಗೂ ಹಲವು ಗೊಂದಲಗಳಿದ್ದವು. ವಿಜಯವಾಣಿ ಪತ್ರಿಕೆ ಆಯೋಜಿಸಿರುವ ಶಿಕ್ಷಣ ಮೇಳದಲ್ಲಿ ಅಗಸ್ತ್ಯ - ಫೌಂಡೇಷನ್ ಏರ್ಪಡಿಸಿರುವ ಮಾದರಿಗಳ ಪ್ರದರ್ಶನದಲ್ಲಿ ನಾನು ಎಲ್ಲ ಮಾಹಿತಿ ಗ್ರಹಿಸಿಕೊಂಡು ಅದನ್ನು ನನ್ನ ಸಮವಯಸ್ಕ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಅವಕಾಶ ಸಿಕ್ಕಿದ್ದು ಸೌಭಾಗ್ಯ. ವಿಜಯವಾಣಿ ಹಾಗೂ ಆಗಸ್ತ್ಯ -ಫೌಂಡೇಷನ್  ಗೆ ಧನ್ಯವಾದಗಳು.
    ಸಂತೋಷ ಬಿಸನಾಳ, 8ನೇ ತರಗತಿ ವಿದ್ಯಾರ್ಥಿ, ಹೇಮರಡ್ಡಿ ಮಲ್ಲಮ್ಮ ಪ್ರೌಢಶಾಲೆ, ವಿಜಯಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts