More

    ಕಾವೇರಿ 2.0ನಲ್ಲಿ ಬೆರಳಚ್ಚು ಕದ್ದು ಬ್ಯಾಂಕ್ ಖಾತೆಗೆ ಕನ್ನ; ಸೈಬರ್ ಕಳ್ಳರು ಮಾರ್ಗ ರೋಚಕ

    ಬೆಂಗಳೂರು: ಕಾವೇರಿ 2.0 ವೆಬ್‌ಸೈಟ್‌ನಿಂದ ದಸ್ತಾವೇಜುಗಳನ್ನು ಡೌನ್‌ಲೋಡ್ ಮಾಡಿಕೊಂಡು ಆಧಾರ್, ಬೆರಳಚ್ಚು ಕದ್ದು ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದ ಇಬ್ಬರನ್ನು ಈಶಾನ್ಯ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

    ಬಿಹಾರ ಮೂಲದ ಅಬುಜರ್ ಮತ್ತು ಪರ್ವೇಜ್ ಬಂಧಿತರು. ಆರೋಪಿಗಳಿಂದ 1.05 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ 2 ಲ್ಯಾಪ್‌ಟಾಪ್, 2 ಮೊಬೈಲ್, 3 ಬೆರಳಚ್ಚು ಸ್ಕಾೃನರ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
    ಬ್ಯಾಂಕ್‌ಗೆ ಖಾತೆದಾರನ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೆ ಸಾಕು. ಖಾತೆ ನಂಬರ್ ಅಥವಾ ಒಟಿಪಿ, ಕೋಡ್ ನಂಬರ್ ಯಾವುದೂ ಇಲ್ಲದೆ ಕೇವಲ ಆಧಾರ್ ನಂಬರ್ ಮತ್ತು ಬೆರಳಚ್ಚು ಬಳಸಿ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (ಎಇಪಿಎಸ್)ನಲ್ಲಿ ಗರಿಷ್ಠ 10 ಸಾವಿರ ರೂ. ಡ್ರಾ ಮಾಡಬಹುದು. ಕೇಂದ್ರ ಸರ್ಕಾರವೇ ಎಲ್ಲೆಡೆ ಮಿನಿ ಎಟಿಎಂ ಮೇಷಿನ್ ವಿತರಿಸಿದೆ. ಇದನ್ನೇ ದುರುಪಯೋಗ ಪಡಿಸಿಕೊಂಡ ಸೈಬರ್ ವಂಚಕರು, ಸಾರ್ವಜನಿಕರ ಆಧಾರ್ ನಂಬರ್ ಮತ್ತು ಬೆರಳಚ್ಚು ಕಳವು ಮಾಡುತ್ತಿದ್ದರು. ಅದಕ್ಕಾಗಿ ಕಾವೇರಿ 2.0 ಪೋರ್ಟಾಲ್‌ಗೆ ಕನ್ನ ಹಾಕುತ್ತಿದ್ದರು.

    ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಾವೇರಿ 2.0 ತಂತ್ರಾಂಶವನ್ನು ಅಳವಡಿಸಿಕೊಂಡು ಸಾರ್ವಜನಿಕರಿಗೆ ಆನ್‌ಲೈನ್‌ನಲ್ಲಿ ದಸ್ತಾವೇಜುಗಳ ನೋಂದಣಿ ಪ್ರಕ್ರಿಯೆಗೆ ಅವಕಾಶ ಕಲ್ಪಿಸಿದೆ. ಜನರೇ ಪೋರ್ಟಾಲ್‌ನಲ್ಲಿ ಲಾಗಿನ್ ಐಡಿ ತೆಗೆದು ಕ್ರಯ, ದಾನ, ಕರಾರು ಒಪ್ಪಂದ ಸೇರಿ ತಮ್ಮ ದಸ್ತಾವೇಜುಗಳನ್ನು ಅಪ್‌ಲೋಡ್ ಮಾಡಿ ನೋಂದಣಿ ಪ್ರಕ್ರಿಯೆ ಮುಗಿಸಿಕೊಳ್ಳುತ್ತಾರೆ. ದಸ್ತಾವೇಜುಗಳಲ್ಲಿ ಆಸ್ತಿ ಮಾರಾಟಗಾರ ಮತ್ತು ಖರೀದಿದಾರನ ಆಧಾರ್ ನಂಬರ್ ಉಲ್ಲೇಖ ಮಾಡಲಾಗುತ್ತಿದೆ. ಇದನ್ನು ತಿಳಿದ ಸೈಬರ್ ವಂಚಕರು, ಕಾವೇರಿ 2.0 ಪೋರ್ಟಾಲ್ ಹ್ಯಾಕ್ ಮಾಡಿ ಅದರಿಂದ ನೋಂದಣಿ ಆಗಿರುವ ದಸ್ತಾವೇಜುಗಳನ್ನು ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿನ ಆಧಾರ್ ನಂಬರ್ ಮತ್ತು ಬೆರಳಚ್ಚು ಪಡೆಯುತ್ತಿದ್ದರು. ಆನಂತರ ಎಇಪಿಎಸ್‌ನಲ್ಲಿ ಆಧಾರ್ ನಂಬರ್ ಮತ್ತು ಬೆರಳಚ್ಚು ಬಳಸಿ ಸಾರ್ವಜನಿಕರ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದರು.

    ಒಟಿಪಿ ಅಥವಾ ಮತ್ಯಾವುದೇ ಮಾಹಿತಿ ಇಲ್ಲದೆ ಹಣ ವರ್ಗಾವಣೆ ಆಗುತ್ತಿದ್ದ ಕಾರಣಕ್ಕೆ ಬ್ಯಾಂಕ್ ಖಾತೆದಾರನ ಗಮನಕ್ಕೆ ಬರುತ್ತಿರಲಿಲ್ಲ. ಇತ್ತೀಚೆಗೆ ಯಲಹಂಕದ ವ್ಯಕ್ತಿಯೊಬ್ಬರ ಖಾತೆಯಿಂದ ಹಂತ ಹಂತವಾಗಿ 48 ಸಾವಿರ ರೂ. ಕಡಿತವಾಗಿತ್ತು. ಈ ಬಗ್ಗೆ ಈಶಾನ್ಯ ಸಿಇಎನ್ ಠಾಣೆಗೆ ನೊಂದ ವ್ಯಕ್ತಿ ದೂರು ಸಲ್ಲಿಸಿದ್ದರು. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ಎಂ. ಮಲ್ಲಿಕಾರ್ಜುನ್ ನೇತೃತ್ವದ ತಂಡ ತಾಂತ್ರಿಕ ಮಾಹಿತಿ ಆಧರಿಸಿ ಬಿಹಾರದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.

    ಬೆರಳಚ್ಚು ಸಿದ್ದಪಡಿಸಿ ಕನ್ನ

    ಕಾವೇರಿ 2.0 ವೆಬ್‌ಸೈಟ್‌ನಲ್ಲಿ ನೋಂದಣಿ ಆಗಿರುವ ದಾಖಲೆಗಳನ್ನು ಡೌನ್‌ಲೋಡ್ ಮಾಡಿ ಅದರಲ್ಲಿನ ಆಧಾರ್ ನಂಬರ್ ಮತ್ತು ಬೆರಳಚ್ಚು ಪಡೆಯುತ್ತಿದ್ದರು. ಬಳಿಕ ಬಯೋಮೆಟ್ರಿಕ್ ಮಿಷನ್ ಬಳಸಿ ಸ್ಕಾೃನ್ ಮಾಡಿಕೊಂಡು ಸ್‌ಟಾವೇರ್ ಬಳಸಿ ಸಿಲಿಕಾನ್ ಪೇಪರ್ ಮೇಲೆ ಮುದ್ರೆ ಹಾಕಿ ಮೈಕ್ರೋ ಎಟಿಎಂಗಳ ಮೂಲಕ ಹಣ ಡ್ರಾ ಮಾಡುತ್ತಿದ್ದರು. ಇದಕ್ಕಾಗಿ ವಿಶೇಷ ಮೇಷಿನ್‌ಗಳ ಬಳಕೆ ಮಾಡಿರುವುದು ಸಹ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    4 ತಿಂಗಳಲ್ಲಿ 116 ಕೇಸ್

    ಸಿಲಿಕಾನ್ ಸಿಟಿಯಲ್ಲಿ ಕೇವಲ 4 ತಿಂಗಳ ಅವಧಿಯಲ್ಲಿ ಕಾವೇರಿ 2.0 ವೆಬ್‌ಸೈಟ್‌ಗೆ ಕನ್ನ ಹಾಕಿ ಅದರಿಂದ ಸಿಕ್ಕ ಬೆರಳಚ್ಚು ಮತ್ತು ಆಧಾರ್ ಬಳಸಿ ಎಇಪಿಎಸ್ ಮೂಲಕ ಬ್ಯಾಂಕ್ ಖಾತೆಗೆ ಕನ್ನ ಸಂಬಂಧ 116 ಪ್ರಕರಣಗಳು ದಾಖಲಾಗಿವೆ. ಸಾರ್ವಜನಿಕರು ಸಹ ತಮ್ಮ ಆಧಾರ್ ನಂಬರ್ ಗೌಪ್ಯವಾಗಿ ಇಟ್ಟುಕೊಳ್ಳಬೇಕು. ಜತೆಗೆ ಎಂಆಧಾರ್‌ನಲ್ಲಿ ಹೋಗಿ ಬಯೋಮೆಟ್ರಿಕ್ ಸೇವೆಯನ್ನು ಲಾಕ್ ಮಾಡಿಕೊಳ್ಳುವುದು ಒಳಿತು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

    ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರ ಗಮನಕ್ಕೂ ತರಲಾಗಿದೆ. ದಸ್ತಾವೇಜುಗಳಲ್ಲಿ ಆಧಾರ್ ನಂಬರ್ ಕೊನೆಯ 4 ಸಂಖ್ಯೆ ಮುದ್ರಿಸಲು ಮತ್ತು ಬರೋಮೆಟ್ರಿಕ್ ಯಾರಿಗೂ ಸಿಗದಂತೆ ಮಾಡಲು ಸಲಹೆ ನೀಡಲಾಗಿದೆ.
    ಬಿ. ದಯಾನಂದ್- ನಗರ ಪೊಲೀಸ್ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts