More

    ಉತ್ಕೃಷ್ಟ ದೇಶಕ್ಕಾಗಿ ಸಂಘಟಿತರಾಗೋಣ

    ಖಾನಾಪುರ: ತಾಲೂಕಿನ ತೋಪಿನಕಟ್ಟಿ ಗ್ರಾಮದ ಶ್ರೀ ಮಹಾಲಕ್ಷ್ಮೀ ವಿವಿಧೋದ್ದೇಶಗಳ ಸಹಕಾರಿ ಸಂಸ್ಥೆಯ ಬೆಳ್ಳಿ ಹಬ್ಬದ ನಿಮಿತ್ತ ಪಟ್ಟಣದ ಶಾಂತಿನಿಕೇತನ ಶಾಲೆಯ ಆವರಣದಲ್ಲಿ ಸೋಮವಾರ ಜರುಗಿದ ವಿಶೇಷ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ತಾಲೂಕಿನ ಒಂಬತ್ತು ಸಾಧಕರಿಗೆ ‘ಶ್ರೀ ಮಹಾಲಕ್ಷ್ಮೀ ಗೌರವ ಪುರಸ್ಕಾರ’ ನೀಡಿ ಗೌರವಿಸಲಾಯಿತು.

    ಬೆಳಗಾವಿಯ ಹಿರಿಯ ಶಿಕ್ಷಣ ತಜ್ಞ ಹಾಗೂ ಆರ್‌ಎಸ್‌ಎಸ್ ಮುಖಂಡ ಅರವಿಂದ ದೇಶಪಾಂಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತವನ್ನು ಜಗತ್ತಿನ ಉತ್ಕೃಷ್ಟ ದೇಶವನ್ನಾಗಿಸುವ ನಿಟ್ಟಿನಲ್ಲಿ ದೇಶವಾಸಿಗಳೆಲ್ಲರೂ ಸಂಘಟಿತರಾಗಬೇಕು. ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ವಿಜನ್-2020 ಆಶಯದ ಈಡೇರಿಕೆಗಾಗಿ ಪ್ರತಿ ಗ್ರಾಮ, ಹೋಬಳಿ, ತಾಲೂಕು ಮತ್ತು ಜಿಲ್ಲಾಮಟ್ಟಗಳಲ್ಲಿ ನಿರಂತರವಾಗಿ ಪ್ರಯತ್ನಗಳು ನಡೆಯಬೇಕು ಎಂದರು.

    ಈ ನಿಟ್ಟಿನಲ್ಲಿ ಅರಣ್ಯ ಪ್ರದೇಶದಿಂದ ಸುತ್ತುವರಿದ ತಾಲೂಕಿನ ಪುಟ್ಟ ಹಳ್ಳಿ ತೋಪಿನಕಟ್ಟಿಯ ಸಾಧನೆ ಮೆಚ್ಚುವಂತಹುದು. 25 ವರ್ಷಗಳ ಹಿಂದೆ ಸಣ್ಣ ಸಂಸ್ಥೆ ಹುಟ್ಟುಹಾಕಿ ಕಾಳಜಿಯಿಂದ ಬೆಳೆಸಿದ ಪರಿಣಾಮ ಇಂದು ಶಿಕ್ಷಣ, ಸಹಕಾರ ಮತ್ತು ಉದ್ಯಮ ಕ್ಷೇತ್ರದಲ್ಲಿ ಮಿಂಚಿದೆ. ಇದು ಇತರರಿಗೆ ಆದರ್ಶಪ್ರಾಯವಾಗಿದೆ ಎಂದು ಶ್ಲಾಘಿಸಿದರು. ಮಾಜಿ ಶಾಸಕ ಅರವಿಂದ ಪಾಟೀಲ, ಕ್ರೀಡಾಭಾರತಿ ಸಂಯೋಜಕ ರಾಘವೇಂದ್ರ ಕಾಗವಾಡ, ಅಶೋಕ ಶಿಂತ್ರಿ, ಸಹಕಾರ ಸಂಸ್ಥೆ ಸಹಾಯಕ ರಿಜಿಸ್ಟ್ರಾರ್ ಗೌಡಪ್ಪನವರ, ಸಂಸ್ಥೆಯ ಸಿಇಒ ಅಜಿತಕುಮಾರ ಮಂಗಸೂಳಿ ಸೇರಿ ತಾಲೂಕಿನ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು. ಮಲ್ಲಪ್ಪ ಮಾರಿಹಾಳ ನಿರ್ವಹಿಸಿದರು. ನಾರಾಯಣ ಗುರವ ಸ್ವಾಗತಿಸಿದರು. ವಿಠ್ಠಲ ಕರಂಬಳಕರ ವಂದಿಸಿದರು.

    ಸಾಧಕರಿಗೆ ಮಹಾಲಕ್ಷ್ಮೀ ಗೌರವ ಪುರಸ್ಕಾರ

    ಸಾಧಕರ ಸತ್ಕಾರ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕ (ಮರಾಠಿ ಮಾಧ್ಯಮ) ಗೌರವಕ್ಕೆ ಗರ್ಲಗುಂಜಿ ಗ್ರಾಮದ ಮಾವುಲಿ ಪ್ರೌಢಶಾಲೆ ಶಿಕ್ಷಕ ಸಯ್ಯಜಿ ಪಾಟೀಲ, ಉತ್ತಮ ಶಿಕ್ಷಕ (ಕನ್ನಡ ಮಾಧ್ಯಮ) ಗೌರವಕ್ಕೆ ಪಟ್ಟಣದ ಶಾಸಕರ ಮಾದರಿ ಕನ್ನಡ ಶಾಲೆ ಶಿಕ್ಷಕಿ ತುಳಸಿ ಎಸ್. ಕುಲಕರ್ಣಿ, ಆದರ್ಶ ಕೃಷಿಕ ಗೌರವಕ್ಕೆ ಬೀಡಿ ಗ್ರಾಮದ ಪ್ರಗತಿಪರ ರೈತ ಉಮೇಶ ಹೊಸೂರ, ಸಹಕಾರ ಕ್ಷೇತ್ರದ ಸಾಧನೆಗೆ ಇಟಗಿ ಗ್ರಾಮದ ಮಹಾರುದ್ರಯ್ಯ ಹಿರೇಮಠ, ಉದ್ಯಮ ಕ್ಷೇತ್ರದ ಸಾಧನೆಗೆ ನಿಡಗಲ್ ಗ್ರಾಮದ ಪ್ರಮೋದ ಕದಂ, ಶಿಕ್ಷಣ ಕ್ಷೇತ್ರದ ಸಾಧನೆಗೆ ಪುಣೆಯಲ್ಲಿ ನೆಲೆಸಿರುವ ತಾಲೂಕಿನ ಪಡಲವಾಡಿ (ಮಾಚಿಗಡ) ನಿವಾಸಿ ಪೀಟರ್ ಡಿಸೋಜಾ, ಧಾರ್ಮಿಕ ಕ್ಷೇತ್ರದ ಸಾಧನೆಗೆ ತಾಲೂಕಿನ ಕಿರಹಲಸಿ ಗ್ರಾಮದ ಕೀರ್ತನಕಾರ ವಿಠ್ಠಲ ಪಾಟೀಲ ಮತ್ತು ಮಾಧ್ಯಮ ಕ್ಷೇತ್ರದ ಸಾಧನೆಗೆ ಹಿರಿಯ ಪತ್ರಕರ್ತ ಪ್ರಕಾಶ ದೇಶಪಾಂಡೆ ಅವರಿಗೆ 2020ರ ಮಹಾಲಕ್ಷ್ಮೀ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts