More

    ಸರ್ಕಾರಿ ಸವಲತ್ತುಗಳಿಂದ ಮಾಜಿ ಸೈನಿಕರು ವಂಚಿತ

    ಮಡಿಕೇರಿ: ಜಿಲ್ಲೆಯ ಮಾಜಿ ಸೈನಿಕರು ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿದ್ದಾರೆ ಎಂದು ನಿವೃತ್ತ ಮೇಜರ್ ಜನರಲ್ ಬಿ.ಎ.ಕಾರ್ಯಪ್ಪ ಆರೋಪಿಸಿದರು.


    ಮಾಜಿ ಸೈನಿಕರಿಗೆ ಸರ್ಕಾರಿ ಜಾಗ ಮಂಜೂರಾತಿ ಸಂಬಂಧಿಸಿದಂತೆ ಸರ್ಕಾರ ಮತ್ತು ಉಚ್ಚ ನ್ಯಾಯಾಲಯದ ಆದೇಶವಿದೆ. ಆದರೆ, ಜಿಲ್ಲೆಯ ಸುಮಾರು 500ಕ್ಕೂ ಅಧಿಕ ಅರ್ಜಿಗಳು ವಿಲೇವಾರಿಯಾಗದೇ ಬಾಕಿ ಉಳಿದಿದೆ. ಜತೆಗೆ ಕಂದಾಯ ಇಲಾಖೆಯಡಿ ಭೂಮಿಯಿಲ್ಲ ಎಂಬ ಮಾತುಗಳು ಅಧಿಕಾರಿಗಳಿಂದ ಬರುತ್ತಿವೆ. ಆದ್ದರಿಂದ ವಿಲೇವಾರಿಯಾಗದ ಅರ್ಜಿಗಳನ್ನು ಶೀಘ್ರದಲ್ಲೇ ವಿಲೇವಾರಿ ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.


    ಜಿಲ್ಲಾಧಿಕಾರಿ ಕಳೆದ ಮೂರು ತಿಂಗಳಿನಿಂದ ತಾಲೂಕು ಮಾಜಿ ಸೈನಿಕರ ಮತ್ತು ಅವರ ಅವಲಂಬಿತರ ಕುಂದುಕೊರತೆಗಳನ್ನು ಅದಾಲತ್ ಮುಖಾಂತರ ನಡೆಸುತ್ತಿದ್ದಾರೆ. ಇದು ಮಾಜಿ ಸೈನಿಕರ ಮತ್ತು ಅವರ ಅವಲಂಬಿತರಿಗೆ ಒಳ್ಳೆಯ ವಿಷಯ. ಅದೇ ರೀತಿ ಬಾಕಿ ಉಳಿದಿರುವ ತಾಲೂಕುಗಳಲ್ಲಿ ಅದಾಲತ್ ನಡೆಸುವಂತಾಗಬೇಕು. ಜತೆಗೆ ನಿವೇಶನವಿಲ್ಲದ ಮಾಜಿ ಸೈನಿಕರು ಮತ್ತು ವಿಧವೆಯವರಿಗೆ ಪಂಚಾಯಿತಿಯಲ್ಲಿ ನಿವೇಶನ ನೀಡುವಂತೆ ಸರ್ಕಾರದ ಆದೇಶವಿದ್ದರೂ ಈವರೆಗೆ ಒಂದು ಮನೆಯನ್ನು ಮಂಜೂರಾತಿ ಮಾಡಿರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


    ರಾಜ್ಯ ಸರ್ಕಾರ ಹೊರಡಿಸಿದ ಆದೇಶದಂತೆ ಕೃಷಿ ಸಾಲ ಮನ್ನಾ ಯೋಜನೆಯಡಿ ಎಲ್ಲ ರೈತರಿಗೆ ಸಿಗುವ 1 ಲಕ್ಷ ರೂ. ವರೆಗಿನ ಸಾಲ ಮನ್ನಾ ಯೋಜನೆಯಲ್ಲಿ ಮಾಜಿ ಸೈನಿಕರು ಮತ್ತು ಸರ್ಕಾರಿ ನೌಕರರಿಗೆ ವಂಚನೆಯಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಮಾಜಿ ಸೈನಿಕರಿಗೂ ಕೂಡ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.


    ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ಉತ್ತಮವಾಗಿದೆ ಎಂದ ಅವರು, ಜಿಲ್ಲೆಯ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಅಗ್ನಿಪಥ್‌ಗೆ ಸೇರುವಂತಾಗಬೇಕು. ಆದರೆ, ಇತ್ತೀಚೆಗೆ ಮೋದಿ ವಿರುದ್ಧ ಹಾಗೂ ಯೋಜನೆ ವಿರುದ್ಧ ತೆಗಳುವ ಕೆಲಸವಾಗುತ್ತಿದೆ. ಜಿಲ್ಲೆಯ ಸೈನಿಕ ಶಾಲೆಯಲ್ಲಿ ಜಿಲ್ಲೆಯವರಿಗೆ ಶೇ.50 ರಷ್ಟು ಮೊದಲ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

    ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಗೌರವ ಕಾರ್ಯದರ್ಶಿ ಹಾಗೂ ನಿವೃತ್ತ ಮೇಜರ್ ಓ.ಎಸ್.ಚಿಂಗಪ್ಪ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸುಮಾರು ಹದಿನೈದು ಸಾವಿರ ಮಾಜಿ ಸೈನಿಕರು, ವಿಧವೆಯವರು, ಸೈನಿಕರ ಅವಲಂಬಿತರು ವಾಸವಾಗಿದ್ದಾರೆ. ಮಾಜಿ ಸೈನಿಕರು 15 ವರ್ಷದಿಂದ 40 ವರ್ಷದವರೆಗೆ ಸೇವೆ ಸಲ್ಲಿಸಿ ಜಿಲ್ಲೆಗೆ ಬಂದು ನೆಲೆಸಿರುತ್ತಾರೆ. ಆದರೆ, ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿದ್ದೇವೆ ಎಂದು ಹೇಳಿದರು.

    ಪ್ರಶಸ್ತಿ ಪುರಸ್ಕಾರ ಮತ್ತು ಯುದ್ಧದಲ್ಲಿ ಮರಣ ಹೊಂದಿದ ಸೈನಿಕ ಮತ್ತು ಅವರ ಕುಟುಂಬದವರಿಗೆ ಜಿಲ್ಲೆಯಲ್ಲಿ ಅಭ್ಯವಿರುವ ಸರ್ಕಾರಿ ಜಾಗ ಗುರುತಿಸಿ ಮಂಜೂರಾತಿ ಮಾಡಲು ಸರ್ಕಾರದ ಆದೇಶವಿದ್ದರೂ ಈವರೆಗೆ ಕಂದಾಯ ಇಲಾಖೆಯಿಂದ ಯಾವುದೇ ಒಂದು ಜಾಗ ಮಂಜೂರಾತಿ ಆಗಿಲ್ಲ. ಸಮುದಾಯ ಭವನ ನಿರ್ಮಾಣ ಮಾಡಿಲ್ಲ ಎಂದು ದೂರಿದರು.

    ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಸದಸ್ಯರಾದ ಕೆ.ಡಿ.ಚಂದ್ರಪ್ಪ, ಬಿ.ಎನ್.ಗಂಗಾಧರ್, ಮಾದಪ್ಪ, ಕರ್ನಲ್ ಚಿಣ್ಣಪ್ಪ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts