More

    ಖರ್ಗೆ ಭೇಟಿ ಮಾಡಿದ ಎಸ್ಪಿಎಂ ಕೈ ಸೇರ್ಪಡೆ ಖಚಿತ

    ತುಮಕೂರು: ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಮರಳಲು ಸಿದ್ಧರಾಗಿರುವ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

    ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹಿತ ಜಿಲ್ಲೆಯ ಪ್ರಭಾವಿ ಸಚಿವರುಗಳಾದ ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ ರನ್ನೆಲ್ಲ ಭೇಟಿಯಾಗಿದ್ದ ಮುದ್ದಹನುಮೇಗೌಡ ಎಐಸಿಸಿ ಅಧ್ಯಕ್ಷರನ್ನೂ ಭೇಟಿಯಾಗುವ ಮೂಲಕ ಬಿಜೆಪಿ ತೊರೆಯುವುದನ್ನು ಖಚಿತಪಡಿಸಿದ್ದಾರೆ.

    ಖರ್ಗೆ ಜತೆ ಸಂಸತ್‌ನಲ್ಲಿದ್ದ ಎಸ್ಪಿಎಂ: 2013 ರಿಂದ 18ರ ವರೆಗಿನ ಅವಧಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಂಸದೀಯ ನಾಯಕರಾಗಿದ್ದಾಗ ಎಸ್.ಪಿ.ಮುದ್ದಹನುಮೇಗೌಡ ಸಂಸದರಾಗಿದ್ದರು. ಎಸ್ಪಿಎಂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗಲೂ ಮಲ್ಲಿಕಾರ್ಜುನ ಖರ್ಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಹಾಗಾಗಿ, ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಬಯಸಿರುವ ಎಸ್ಪಿಎಂಗೆ ಖರ್ಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.

    ಜನವರಿ ಕೊನೆಗೆ ಕಾಂಗ್ರೆಸ್ ಸೇರ್ಪಡೆ: ಸಂಕ್ರಾಂತಿ ಬಳಿಕ ಎಸ್ಪಿಎಂ ಕಾಂಗ್ರೆಸ್ ಸೇರ್ಪಡೆ ಖಚಿತ ಎನ್ನಲಾಗಿತ್ತು. ಜನವರಿ ಕೊನೆ ವಾರ ಅಥವಾ ಪೆಬ್ರವರಿ ಮೊದಲ ವಾರ ಸೇರಲಿದ್ದು ಯಾವುದೇ ಅಡೆತಡೆಗಳು ಇಲ್ಲದೇ ಇದ್ದು ಕಾಂಗ್ರೆಸ್ ಹೈಕಮಾಂಡ್‌ನ ಸಂಪೂರ್ಣ ಬೆಂಬಲವಿರುವುದರಿಂದ ಲೋಕಾ ಚುನಾವಣೆಯಲ್ಲಿ ಕೈ ಪಾಳಯದ ಅಭ್ಯರ್ಥಿಯಾಗುವುದು ಬಹುತೇಕ ನಿಶ್ಚಿತವಾದಂತಾಗಿದೆ.

    ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪರಮೇಶ್ವರ್ ಹಾಗೂ ನನ್ನನ್ನು ಮುದ್ದಹನುಮೇಗೌಡ ಎಲ್ಲರನ್ನೂ ಭೇಟಿ ಮಾಡಿದ್ದಾರೆ. ಹೈಕಮಾಂಡ್ ಟಿಕೆಟ್ ಯಾರಿಗೆ ಕೊಡುತ್ತಾರೆ ಅವರೇ ಅಭ್ಯರ್ಥಿ ಆಗಲಿದ್ದಾರೆ. ಮುದ್ದಹನುಮೇಗೌಡರಿಗೆ ಬಿಜೆಪಿಗೆ ಹೋಗಬೇಡಪ್ಪ, ನಿನ್ನ ಜೊತೆಯಲಿ ನಾವು ಇರುತ್ತೀವಿ ಅಂತ ಹೇಳಿದ್ವಿ. ನಮ್ಮ ಮಾತನ್ನು ತಿರಸ್ಕರಿಸಿ ಹೋಗಿದ್ದ ಬೇಸರ ಇದೆ. ಹಾಗಂತ ರಾಜಕಾರಣದಲ್ಲಿ ಯಾರೂ ಶಾಶ್ವತ ಸ್ನೇಹಿತರು ಅಲ್ಲ. ಶತ್ರುಗಳು ಅಲ್ಲ. ನಾಳೆ ಮಾಧುಸ್ವಾಮಿ ಕಾಂಗ್ರೆಸ್ ಅಭ್ಯರ್ಥಿ ಅಂತ ಹೈಕಮಾಂಡ್ ಹೇಳಿದರೆ ನಾವೆಲ್ಲಾ ಮಾಧುಸ್ವಾಮಿ ಪರ ಕೆಲಸ ಮಾಡಬೇಕು. ತುಮಕೂರಿನಲ್ಲಿ ಕಾಂಗ್ರೆಸ್ ಗೆದ್ದೆ ಗೆಲ್ಲುತ್ತೆ.
    ಕೆ.ಎನ್.ರಾಜಣ್ಣ
    ಸಹಕಾರ ಸಚಿವ (ತುಮಕೂರಿನಲ್ಲಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts