More

    ಕಾಂಗ್ರೆಸ್ ರಕ್ತದಲ್ಲಿದೆ ಹಿಂದು ವಿರೋಧಿ

    ಗಂಗಾವತಿ: ಮತ ಬ್ಯಾಂಕ್ ರಾಜಕಾರಣಕ್ಕಾಗಿ ಅಯೋಧ್ಯೆ ಶ್ರೀರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ವಿರೋಧಿಸುತ್ತಿದೆ. ಮತ್ತು ಹಿಂದು ವಿರೋಧಿ ನೀತಿ ಪ್ರದರ್ಶಿಸುತ್ತಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದರು.

    ಅಂಜನಾದ್ರಿ ಬೆಟ್ಟಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. ಜನರಿಂದಲೇ ನಿರ್ಮಾಣವಾದ ರಾಮಮಂದಿರ ವಿರೋಧಿಸುವ ಕಾಂಗ್ರೆಸ್‌ನ ಹಿಂದು ವಿರೋಧಿ ನೀತಿ ಹೊಸದಲ್ಲ. ದೇಶ ಇಬ್ಭಾಗದ ಒಪ್ಪಂದಕ್ಕೆ ಸಹಿ ಹಾಕಿತ್ತಲ್ಲದೆ, ತುಂಡಾದ ಭಾರತದಲ್ಲೂ ಹಿಂದುಗಳು ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ. ಹಿಂದು ವಿರೋಧಿ ಬುದ್ಧಿ ಕಾಂಗ್ರೆಸ್ ರಕ್ತದಲ್ಲಿದೆ ಎಂದು ದೂರಿದರು.

    ಕಾಂಗ್ರೆಸ್ ಆಡಳಿತಾವಧಿಯಲ್ಲಾದ ತಪ್ಪುಗಳ ಸಮರ್ಥನೆಗೆ ಸುಳ್ಳುಗಳ ಸಬೂಬ ಹೇಳುತ್ತಿದೆ. ರಾಮಮಂದಿರ ಉದ್ಘಾಟನೆ ಅರಗಿಸಿಕೊಳ್ಳದ ಕಾಂಗ್ರೆಸ್, 30 ವರ್ಷಗಳ ಹಿಂದೆ ನಡೆದ ಘಟನೆ ಮುಂದಿಟ್ಟುಕೊಂಡು ಕರಸೇವಕರನ್ನು ಬಂಧಿಸುತ್ತಿದೆ. ಕೆಲ ಜಿಲ್ಲೆಗಳಲ್ಲಿ ಕರಸೇವಕರನ್ನು ಬಂಧಿಸಿದ್ದು, ಹಳೇ ಪ್ರಕರಣ ಹುಡುಕುವ ಸಣ್ಣತನ ಪ್ರದರ್ಶಿಸುತ್ತಿದೆ ಎಂದರು.

    ಕಾರ್ಯಕರ್ತರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿದರೂ ರಕ್ಷಣೆಗೆ ನಾವಿದ್ದೇವೆ. ಕಾಂಗ್ರೆಸ್ ಸರ್ಕಾರದ ಸವಾಲು ಸ್ವೀಕರಿಸಿ ನ್ಯಾಯಯುತ ಹೋರಾಟ ನಡೆಸಲಾಗುವುದು. ಜೈಲು ಭರೋ ನಮಗೇನೂ ಹೊಸದಲ್ಲ, ಪ್ರಕರಣ ದಾಖಲಿಸಿದರೆ ನಾವೇ ಜೈಲಿಗೆ ಹೋಗಲು ಸಿದ್ಧರಿದ್ದೇವೆ. ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದಗೆ ಸಿಎಂ ಸಿದ್ದರಾಮಯ್ಯ ಒಳಸುಳಿವು ಗೊತ್ತಿದ್ದು, ಇದೇ ಕಾರಣಕ್ಕೆ ಗೋದ್ರಾ ಮಾದರಿ ಗಲಭೆ ಪ್ರಸ್ತಾಪಿಸಿದ್ದಾರೆ. ಹಿಂದು ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿದ ಆರೋಪಿಗಳ ಪ್ರಕರಣವನ್ನು ಕಾಂಗ್ರೆಸ್ ಹಿಂಪಡೆದಿದೆ. ಬಿ.ಕೆ.ಹರಿಪ್ರಸಾದ ಹೇಳಿಕೆಯನ್ನು ಸರ್ಕಾರ ಗಂಭೀರ ಪರಿಗಣಿಸಿ, ತನಿಖೆ ನಡೆಸಬೇಕು ಎಂದರು.

    ಅಭಿವೃದ್ಧಿ ಏಕೆ ಮಾಡಲಿಲ್ಲ?

    ಅಂಜನಾದ್ರಿ ಬೆಟ್ಟವನ್ನು 60 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಏಕೆ ಅಭಿವೃದ್ಧಿ ಮಾಡಲಿಲ್ಲ ? ಅಂಜನಾದ್ರಿ ವಿಚಾರದಲ್ಲಿ ಸಚಿವ ಶಿವರಾಜ ತಂಗಡಗಿ ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ ಎಂದು ಸಿ.ಟಿ.ರವಿ ಹೇಳಿದರು. ರಾಮಭಕ್ತಿ ವಿಚಾರದಲ್ಲಿ ಪಕ್ಷದ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಲಿ. ಸಚಿವರ ರಾಮಭಕ್ತಿ ಸ್ವಾರ್ಥದಿಂದ ಕೂಡಿದ್ದು, ರಾಷ್ಟ್ರಭಕ್ತಿ ಅಲ್ಲ. ದತ್ತ ಪೀಠದ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಹಿಂದುಗಳಿಗೆ ಅನ್ಯಾಯವಾಗಿದೆ. ಕೇಸರಿ ಕಂಡರೆ ಸಿದ್ದರಾಮಯ್ಯಗೆ ಆಗಲ್ಲ. ಕಂದಾಯ ಇಲಾಖೆ ಪ್ರಕಾರ ದತ್ತಪೀಠ ಬೇರೆ, ಬಾಬಾಬುಡನ್‌ಗಿರಿ ಬೇರೆ. ದತ್ತಪೀಠ ಪೂರ್ಣ ಪ್ರಮಾಣದಲ್ಲಿ ಹಿಂದುಗಳ ವಶಕ್ಕೆ ಪಡೆಯಲು ಹೋರಾಟ ಮಾಡುತ್ತಿದ್ದೇವೆ ಎಂದರು.

    ಕಾಂಗ್ರೆಸ್ ಮುಖಂಡ ಲಕ್ಷ್ಮಣ ಸವದಿ ಹೇಳಿಕೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ದೇಣಿಗೆ ಕೊಟ್ಟಿದ್ದನ್ನೂ ಯಾವತ್ತಿಗೂ ಹೇಳಿಕೊಳ್ಳಬಾರದು. ದೇಣಿಗೆ ಆಧಾರದಡಿ ಯಾರಿಗೂ ರಾಮಮಂದಿರ ಉದ್ಘಾಟನೆಗೆ ಆಹ್ವಾನ ನೀಡಿಲ್ಲ. ನಾನು ಅಯೋಧ್ಯೆಗೆ ಹೋಗುತ್ತಿದ್ದೇನೆ, ಬೇಕಿದ್ದರೆ ನಮ್ಮೊಮ್ಮದಿಗೆ ಬನ್ನಿ ಎಂದು ಆಹ್ವಾನ ನೀಡಿದರು. ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಬಜರಂಗ ದಳ ಜಿಲ್ಲಾ ಕಾರ್ಯದರ್ಶಿವಿನಯ ಪಾಟೀಲ್, ಬಿಜೆಪಿ ಮುಖಂಡ ಯರಿಸ್ವಾಮಿಗೌಡ ಇತರರಿದ್ದರು.

    ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಕೆ

    ಹೊಸಪೇಟೆಯಿಂದ ಅಂಜನಾದ್ರಿ ಬೆಟ್ಟಕ್ಕೆ ಬಂದ ಸಿ.ಟಿ. ರವಿ ಮತ್ತು ಬೆಂಬಲಿಗರು, ಪಾದಗಟ್ಟೆಯಲ್ಲಿ ಪೂಜೆ ಸಲ್ಲಿಸಿದರು. ನಂತರ 525 ಮೆಟ್ಟಿಲು ಹತ್ತಿ ಬೆಟ್ಟದಲ್ಲಿರುವ ಆಂಜನೇಯ ಮೂರ್ತಿ ದರುಶನ ಪಡೆದುಕೊಂಡರು. ವಿಶೇಷ ಪೂಜೆಯೊಂದಿಗೆ ಮಂಗಳಾರತಿ ನೆರವೇರಿಸಿದರು. ನಂತರ ಬೆಟ್ಟದ ಮೇಲಿಂದ ಕ್ಷೇತ್ರದ ಪ್ರಕೃತಿ ಸೌಂದರ್ಯ ಸವಿದು, ಸಂತಸ ಪಟ್ಟರು. ಮುಜರಾಯಿ ಇಲಾಖೆಯಿಂದ ವ್ಯವಸ್ಥಾಪಕ ಎಂ.ವೆಂಕಟೇಶ ಸನ್ಮಾನಿಸಿದರು. ಜಿಲ್ಲೆಯ ಪಕ್ಷದ ಚಟುವಟಿಕೆಗಳ ಕುರಿತು ಸ್ಥಳೀಯ ಕಾರ್ಯಕರ್ತರಿಗೆ ಅಭಿಪ್ರಾಯ ಸಂಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts