More

    ಸಿದ್ದರಾಮಯ್ಯ ಜತೆ ಮೈತ್ರಿ ಮಾಡಿಕೊಳ್ಳಲು ತಲೆ ಕೆಟ್ಟಿಲ್ಲ ; ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ

    ಕೋಲಾರ : ಮೈತ್ರಿಗಾಗಿ ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರಾಗಲಿ, ನಾನಾಗಲಿ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿಲ್ಲ. ಆ ಪಕ್ಷದವರೇ ನಮ್ಮ ಮನೆಗೆ ಬಂದು ಮೈತ್ರಿ ಮಾಡಿಕೊಂಡು ಅವರೇ ನನ್ನನ್ನು ಅಧಿಕಾರದಿಂದ ಕೆಳಗೆ ಇಳಿಸಿದರು. ಇಂತಹ ಪಕ್ಷದವರ ಜತೆ ಮತ್ತೆ ಮೈತ್ರಿ ಮಾಡಿಕೊಳ್ಳಲು ನಮಗೆ ತಲೆ ಕೆಟ್ಟಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

    ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೋಮವಾರ ಕೋಲಾರಕ್ಕೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾರ್ಯಕರ್ತರ ಪರಿಶ್ರಮದಿಂದ ಬೆಳೆಯುತ್ತಿರುವ ಪಕ್ಷ ಜೆಡಿಎಸ್. ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದಾಗಿ ನಾವೆಲ್ಲಾದರೂ ಹೇಳಿಕೆ ನೀಡಿದ್ದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜೆಡಿಎಸ್ ಜತೆ ಮೈತ್ರಿ ಇಲ್ಲ ಎಂದು ಹೇಳಬಹುದಿತ್ತು. ಆದರೆ ಅಂತಹ ಅನಿವಾರ್ಯ ನಮಗಿಲ್ಲ ಎಂದು ತಿರುಗೇಟು ನೀಡಿದರು.

    ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೈತ್ರಿ ಮುಗಿದ ಆಧ್ಯಾಯ. ಪದೇಪದೆ ಈ ಮೈತ್ರಿ ವಿಚಾರ ಏಕೆ ಪ್ರಸ್ತಾಪಿಸುತ್ತಾರೋ ಅರ್ಥವಾಗುತ್ತಿಲ್ಲ. ಒಂದು ವೇಳೆ ಸಿದ್ದರಾಮಯ್ಯ ಜತೆ ಮೈತ್ರಿ ಮಾಡಿಕೊಳ್ಳುವ ಪರಿಸ್ಥಿತಿ ಎದುರಾದಲ್ಲಿ ನಾನು ರಾಜಕೀಯದಿಂದ ನಿವತ್ತಿ ಹೊಂದುವೆ ಎಂದು ತಿಳಿಸಿದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ಕೇಂದ್ರ ಸರ್ಕಾರ ಹಲವು ಬಾರಿ ದಾಳಿ ನಡೆಸಿದರೂ ದಿಟ್ಟತನದಿಂದ ಹೋರಾಟ ಮಾಡುತ್ತಿದ್ದಾರೆ. ವಿಧಾನಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆಗಾಗಿ ರಚಿಸಿರುವ ಎಸ್‌ಐಟಿಯಿಂದ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸುವುದು ಅನುಮಾನ. ಸಿಡಿ ಪ್ರಕರಣದ ಬಗ್ಗೆ ಜನರಲ್ಲಿರುವ ಕುತೂಹಲ, ಆತಂಕವನ್ನು ಮರೆಮಾಚಲು ಗಡಿ ವಿವಾದಕ್ಕೆ ಮರು ಜೀವ ನೀಡಿರಬಹುದೆಂದು ಶಂಕೆ ವ್ಯಕ್ತಪಡಿಸಿದರು. ಎಂಎಲ್‌ಸಿ ಇಂಚರ ಗೋವಿಂದರಾಜು, ರಾಜ್ಯ ಒಕ್ಕಲಿಗರ ಸಂದ ನಿರ್ದೇಶಕ ವಕ್ಕಲೇರಿ ರಾಮು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts