More

    ಅಭಿವೃದ್ಧಿ ಕಾರ್ಯಗಳಿಗಷ್ಟೇ ಜನಮನ್ನಣೆ : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ

    ಬಿಡದಿ: ಅಭಿವೃದ್ಧಿ ಕೆಲಸಗಳಿಗೆ ಜನಮನ್ನಣೆ ಸಿಗುತ್ತದೆಯೇ ವಿನಾ, ಸುಳ್ಳಿಗೆ ಜನ ಸೊಪ್ಪು ಹಾಕುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದರು.

    ಬಿಡದಿ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಶುಕ್ರವಾರ ಪ್ರಚಾರ ನಡೆಸಿ ಮಾತನಾಡಿ, ನಾನು ಏನು ಅಭಿವೃದ್ಧಿ ಮಾಡಿದ್ದೇನೆ ಎಂಬುದು ಜಿಲ್ಲೆಯ ಜನತೆಯ ಕಣ್ಮುಂದೆ ಇದೆ. ಅದನ್ನು ನೋಡಿ ಜನ ಜೆಡಿಎಸ್‌ಗೆ ಮತ ನೀಡಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದರು.

    ಪುರಸಭೆಯ 23 ವಾರ್ಡ್‌ಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವ ಅವಕಾಶಗಳ ವಾತಾವರಣ ಪ್ರಚಾರ ಸಮಯದಲ್ಲಿ ಕಂಡು ಬರುತ್ತಿದೆ. ಈ ಚುನಾವಣೆಯ ಫಲಿತಾಂಶ ರಾಜ್ಯದ ರಾಜಕಾರಣದ ದಿಕ್ಕು ಬದಲಿಸಲಿದೆ ಎಂದರು. ಬಿಡದಿ ಪಟ್ಟಣ ವೇಗವಾಗಿ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರವನ್ನಾಗಿ ಮಾಡಲು ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಈ ಭಾಗದಲ್ಲಿ ನಾನು ಸಿಎಂ ಆಗಿದ್ದ ಸಮಯದಲ್ಲಿ ನೀಡಿದ 300 ಕೋಟಿ ರೂ,ಗಳಿಗೂಗೂ ಹೆಚ್ಚು ಅನುದಾನ ಮತ್ತು ಕಂಪನಿಗಳ ಸಿಎಸ್‌ಆರ್ ಅನುದಾನದಲ್ಲಿ ಶಾಸಕ ಎ.ಮಂಜುನಾಥ್ ಉತ್ತಮ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹಾಗಾಗಿ ಮತ್ತಷ್ಟು ಕೆಲಸ ಮಾಡಲು ಪಕ್ಷವನ್ನು ಆಶೀರ್ವದಿಸಿ ಎಂದರು.

    ಜೆಡಿಎಸ್ ಮುಳುಗುತ್ತೋ ಅಥವಾ ಏಳುತ್ತೋ ಜನ ತೀರ್ಮಾನ ಮಾಡುತ್ತಾರೆ ಎಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣಗೆ ಟಾಂಗ್ ನೀಡಿದರು. ಶಾಸಕ ಎ.ಮಂಜುನಾಥ್ ಮಾತನಾಡಿ, ಕುಮಾರಸ್ವಾಮಿ ಸಿಎಂ ಅಗಿದ್ದಾಗ ನೀಡಿದ್ದ ಅನುದಾನದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ದಿ ಕೆಲಸಗಳು ವೇಗವಾಗಿ ನಡೆಯುತ್ತಿದೆ. ಜೆಡಿಎಸ್ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಮತ್ತಷ್ಟು ಕೆಲಸ ಮಾಡಲು ಉತ್ಸಾಹ ನೀಡಬೇಕೆಂದು ಮನವಿ ಮಾಡಿದರು.

    ಪುರಸಭೆ ಮಾಜಿ ಅಧ್ಯಕ್ಷೆ ವೆಂಕಟೇಶಮ್ಮರಾಮಕೃಷ್ಣಯ್ಯ, ಮಾಜಿ ಉಪಾಧ್ಯಕ್ಷೆ ವೈಶಾಲಿಚನ್ನಪ್ಪ, ಜಿಪಂ ಮಾಜಿ ಸದಸ್ಯ ಎಚ್.ಎಲ್‌ಚಂದ್ರು, ಅಭ್ಯರ್ಥಿಗಳಾದ ಸರಸ್ವತಮ್ಮ, ರಮ್ಯಾ, ಯಲ್ಲಮ್ಮ, ನಾಗರಾಜು, ಶ್ರೀಧರ್ ಸೇರಿ ಪಕ್ಷದ ಮುಖಂಡರು ಭಾಗವಹಿಸಿದ್ದರು.
    ಸ್ಥಳೀಯ ಸಂಸ್ಥೆ ಚುನಾವಣೆಗೆ ಎಚ್.ಡಿ.ಕುಮಾರಸ್ವಾಮಿ ಆಗಮಿಸಿ ಎರಡು ದಿನ ನಡೆಸಿದ ಪ್ರಚಾರದ ವೇಳೆ ಮಹಿಳೆಯರು ಆರತಿ ಬೆಳಗಿ ಸ್ವಾಗತ ಕೋರಿದರು. ಯುವಕರಲ್ಲಿ ಮತ್ತು ಅಭ್ಯರ್ಥಿಗಳು, ಮುಖಂಡರಲ್ಲಿ ಉತ್ಸಾಹದ ಚೆಲುಮೆ ಹೊಡೆದಂತೆ ಪ್ರಚಾರದಲ್ಲಿ ಎಲ್ಲೆಡೆ ಕಂಡು ಬಂದಿತು.

    ರಾಜ್ಯದಲ್ಲಿ ಈ ಹಿಂದೆ ಐದು ವರ್ಷ ಕಾಂಗ್ರೆಸ್ ಆಡಳಿತವಿತ್ತು. ಜಿಲ್ಲೆಯ ಕೆರೆಗಳನ್ನು ತುಂಬಿಸುವ ಸತ್ಯಗಾಲ ನೀರಾವರಿ ಯೋಜನೆಯನ್ನು ಅಂದು ಏಕೆ ಮಾಡಲಿಲ್ಲ. ನಾನು ಸಿಎಂ ಆದ ನಂತರ ಯೋಜನೆಗೆ ಚಾಲನೆ ನೀಡಿದ್ದೇನೆ. 580 ಕೋಟಿ ರೂ. ಹಣವನ್ನು ಸಂಪುಟದಲ್ಲಿ ಮಂಜೂರು ಮಾಡಿಸಿದ್ದೇನೆ. ಕಾಂಗ್ರೆಸ್ ಮುಖಂಡರ ರೀತಿ ನಾನು ಬೊಗಳೆ ಬಿಡಲ್ಲ, ಕಾಂಗ್ರೆಸ್‌ನವರ ರೀತಿ ಬೇರೆಯವರ ಜಮೀನಿಗೆ ಬೇಲಿ ಹಾಕಲ್ಲ. ಆದರೆ ಆ ಸತ್ಯಗಾಲ ಯೋಜನೆಯ ಬಗ್ಗೆ ಜಿಲ್ಲೆಯಲ್ಲಿ ಕೆಲವು ನಾಯಕರು ದೊಡ್ಡ ನೀರಾವರಿ ತಜ್ಞರೆಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts