More

    ಇವಿಎಂ ಶೇಖರಣೆಗೆ ಸುಸಜ್ಜಿತ ಗೋದಾಮು

    ಭರತ್ ಶೆಟ್ಟಿಗಾರ್ ಮಂಗಳೂರು
    ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಮತಯಂತ್ರದ ವಿವಿಧ ವಿಭಾಗಗಳಾದ ಇವಿಎಂ, ವಿವಿಪ್ಯಾಟ್ ಮತ್ತು ಕಂಟ್ರೋಲ್ ಯುನಿಟ್‌ಗಳನ್ನು ಸಂಗ್ರಹಿಸಿಡಲು ಸುಸಜ್ಜಿತ ವೇರ್‌ಹೌಸ್ (ಗೋದಾಮು) ನಿರ್ಮಾಣವಾಗುತ್ತಿದೆ.

    ಪಡೀಲ್‌ನಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಹಿಂಭಾಗದಲ್ಲಿ ಈ ವೇರ್‌ಹೌಸ್ ತಲೆ ಎತ್ತಲಿದೆ. ಒಂದೂವರೆ ತಿಂಗಳಿಂದ ಕಾಮಗಾರಿ ನಡೆಯುತ್ತಿದ್ದು, 2022ರ ಫೆಬ್ರವರಿ ವೇಳೆಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ದ.ಕ ಜಿಲ್ಲಾ ನಿರ್ಮಿತಿ ಕೇಂದ್ರ ಕಾಮಗಾರಿ ಉಸ್ತುವಾರಿ ವಹಿಸಿಕೊಂಡಿದೆ.
    ಸ್ಟೇಟ್‌ಬ್ಯಾಂಕ್ ಬಳಿಯ ಈಗಿನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಸ್ಟ್ರಾಂಗ್ ರೂಮ್‌ನಲ್ಲಿ ಪ್ರಸ್ತುತ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಮತಯಂತ್ರ ಇರಿಸಲಾಗಿದೆ. ಪಡೀಲ್‌ನಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣವಾದ ಬಳಿಕ ಎಲ್ಲವೂ ಅಲ್ಲಿಗೆ ಶಿಫ್ಟ್ ಆಗುವುದರಿಂದ ಅದರ ಪಕ್ಕದಲ್ಲೇ ಮತಯಂತ್ರಗಳಿಗೂ ಸ್ಟ್ರಾಂಗ್ ರೂಮ್ ನಿರ್ಮಾಣವಾಗುತ್ತಿದೆ. ತಳ ಅಂತಸ್ತು ಮತ್ತು ಎರಡು ಮಹಡಿ ಹೊಂದಿರುವ ಕಟ್ಟಡವಾಗಿದ್ದು, ಒಟ್ಟು 5.19 ಕೋಟಿ ರೂ. ವೆಚ್ಚವಾಗಲಿದೆ. ಮುಂದಿನ 30 ವರ್ಷಗಳ ಅವಧಿಗೆ ಲೆಕ್ಕಾಚಾರ ಮಾಡಿ, ಎಷ್ಟು ಮತಯಂತ್ರಗಳನ್ನು ಇರಿಸಬಹುದು ಎಂದು ಅಂದಾಜಿಸಿ, ಚುನಾವಣಾ ಆಯೋಗದ ನಿಯಮಾವಳಿಯಂತೆ ಕಟ್ಟಡ ನಿರ್ಮಿಸಲಾಗುತ್ತಿದೆ.

    ಸುಸಜ್ಜಿತ ವ್ಯವಸ್ಥೆ: ಇವಿಎಂ ಸಹಿತ ಅದಕ್ಕೆ ಸಂಬಂಧಿಸಿದ ಉಪಕರಣಗಳಿಗೆ ಹೆಚ್ಚಿನ ಭದ್ರತೆ ಅವಶ್ಯಕತೆ ಇರುವುರಿಂದ ಎಲ್ಲ ರೀತಿಯ ಸುಸಜ್ಜಿತ ವ್ಯವಸ್ಥೆ ಹೊಸ ವೇರ್‌ಹೌಸ್‌ನಲ್ಲಿ ಇರಲಿದೆ. ಒಂದೇ ಪ್ರವೇಶ ದ್ವಾರ, ಕಿಟಕಿ ಬಾಗಿಲುಗಳು ಸೀಲ್ ಆಗಿರುವುದು, ಗಾಳಿ ಅಡ್ಡಾಡಲು ಸಣ್ಣ ವೆಂಟಿಲೇಷನ್ ವ್ಯವಸ್ಥೆ, ಸೇಫ್ಟಿ ಅಲರಾಮ್, ಸಿಸಿಟಿವಿ, ಅಗ್ನಿಶಮನ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತದೆ. ಜತೆಗೆ ಪ್ರಸ್ತುತ ಇವಿಎಂ ಸಂಗ್ರಹಣಾ ಕೊಠಡಿಗೆ ಇರುವ 24 ಗಂಟೆ ಪೊಲೀಸ್ ಕಾವಲು ವ್ಯವಸ್ಥೆಯೂ ಇರಲಿದೆ.

    ಜಿಲ್ಲಾ ಕೇಂದ್ರದಲ್ಲೇ ಮತಯಂತ್ರ: ಕೇಂದ್ರ ಚುನಾವಣಾ ಆಯೋಗದ ಸೂಚನೆ ಪ್ರಕಾರ ಎಲ್ಲ ಇವಿಎಂ ಮತ್ತು ವಿವಿಪ್ಯಾಟ್, ಕಂಟ್ರೋಲ್ ಯುನಿಟ್‌ಗಳು ಜಿಲ್ಲಾ ಕೇಂದ್ರದಲ್ಲೇ ಸಂಗ್ರಹಿಸಿ ಇಡಬೇಕು. ಮತಯಂತ್ರಗಳನ್ನು ಸಂಗ್ರಹಿಸಿಡುವ ಕೊಠಡಿ, ಎರಡು ಬೀಗ ವ್ಯವಸ್ಥೆ ಹೊಂದಿರಬೇಕು. ಅದರಲ್ಲಿ ಒಂದು ಬೀಗದ ಎಲ್ಲ ಬೀಗದ ಕೀ ಜಿಲ್ಲಾ ಚುನಾವಣಾಧಿಕಾರಿ (ಜಿಲ್ಲಾಧಿಕಾರಿ) ಮತ್ತು ಎರಡನೇ ಬೀಗದ ಎಲ್ಲ ಕೀಲಿಗಳು ಉಪ ಚುನಾವಣಾಧಿಕಾರಿಯ ಕಸ್ಟಡಿಯಲ್ಲಿ ಇರಬೇಕು.

    ಇವಿಎಂ ವೇರ್‌ಹೌಸ್ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಚುನಾವಣಾ ಆಯೋಗದ ನಿಯಮಾವಳಿಯಂತೆ ಕಾಮಗಾರಿ ನಡೆಯಲಿದ್ದು, ಅದರಂತೆ ಕಟ್ಟಡ ನಿರ್ಮಾಣವಾಗಲಿದೆ.
    ನಿವಿತ್ ಕೆ, ಸಹಾಯಕ ಇಂಜಿನಿಯರ್, ನಿರ್ಮಿತಿ ಕೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts