More

    ಪ್ರತಿ ಹಳ್ಳಿಯಲ್ಲೂ ಕಡ್ಡಾಯ ಗ್ರಾಮಸಭೆ

    ಬೆಳಗಾವಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಸಂಬಂಧಿತ ಮೂರು ಮಸೂದೆ ಕುರಿತು ರೈತರು, ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ಹಳ್ಳಿಯಲ್ಲೂ ಗ್ರಾಮಸಭೆ ನಡೆಸಲಾಗುವುದು ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾಹಿತಿ ನೀಡಿದರು.

    ಬೆಳಗಾವಿ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಬಿಜೆಪಿ ನಗರ ಮತ್ತು ಗ್ರಾಮೀಣ ಘಟಕ ಸೋಮವಾರ ಆಯೋಜಿಸಿದ್ದ ರೈತ ಮೋರ್ಚಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಪಕ್ಷ ನಾಯಕರು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಜಾಗೃತಿ ಕಾರ್ಯ: ಮಸೂದೆಗಳ ಕುರಿತು ತಿಳಿವಳಿಕೆ ನೀಡಲು ಪಕ್ಷದ ಎಲ್ಲ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಸಂಘಟಿತರಾಗಿ ಜನಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಮಸೂದೆ, ರೈತರಿಗೆ ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆ ಹಾಗೂ ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನುಕೂಲವಾಗಲಿದೆ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಯಾವುದೇ ರೈತರಿಗೆ ಅನ್ಯಾಯವಾಗುವುದಿಲ್ಲ. ಒಂದು ಕುಟುಂಬವು ಕೃಷಿ ಉದ್ದೇಶಕ್ಕಾಗಿ 54 ಎಕರೆ ವರಗೆ ಕೃಷಿ ಭೂಮಿ ಖರೀದಿಸಲು ಮಾತ್ರ ಅವಕಾಶ ಇದೆ. ಕೃಷಿ ಭೂಮಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಕಲ್ಪಿಸಿಲ್ಲ ಎಂದು ಹೇಳಿದರು.

    ಮನೆ-ಮನೆಗೆ ಜಾಗೃತಿ: ಬೆಳಗಾವಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ದೇಶದಲ್ಲಿ 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ಗೆ ಮತ್ತು ಅವರ ಹಿರಿಯ ನಾಯಕರುಗಳಿಗೆ ರೈತರಿಗಿರುವ ಸಮಸ್ಯೆಗಳು ಗೊತ್ತಾಗಲೇ ಇಲ್ಲ. ಇದೀಗ ರೈತರಿಗೆ ಅನುಕೂಲವಾಗಲೆಂದು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಮೂಸದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆಲ್ಲ ನಮ್ಮ ಕಾರ್ಯಕರ್ತರು ಮಹತ್ವ ಕೊಡಬೇಕಿಲ್ಲ. ರೈತಪರವಾಗಿರುವ ಮಸೂದೆಗಳ ಕುರಿತು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡೋಣ ಎಂದು ಹೇಳಿದರು.

    ಶಾಸಕ ಅನಿಲ ಬೆನಕೆ, ಮಾಜಿ ಶಾಸಕ ಡಾ.ವಿ.ಐ.ಪಾಟೀಲ, ಮಹಾನಗರ ಜಿಲ್ಲಾ ಅಧ್ಯಕ್ಷ ಶಶಿಕಾಂತ ಪಾಟೀಲ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ, ಉಪಾಧ್ಯಕ್ಷ ದುಂಡಪ್ಪ ಬೆಂಡವಾಡ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಲ್ಲಪ್ಪ ಶಾಪುರಕರ, ಶ್ರೀಕರ ಕುಲಕರ್ಣಿ, ಗಿರೀಶ ಧೂಗಡಿ, ರಾಜು ಚಿಕ್ಕನಗೌಡ್ರು ಇನ್ನಿತರರು ಇದ್ದರು.

    ರೈತರಿಗಿಲ್ಲ ಯಾವುದೇ ರೀತಿ ತೊಡಕು

    ಕರ್ನಾಟಕದಲ್ಲಿ 190.5 ಲಕ್ಷ ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣದಲ್ಲಿ ಕೃಷಿಗೆ 118 ಲಕ್ಷ ಹೆಕ್ಟೇರ್ ಭೂಮಿ ಮಾತ್ರ ಯೋಗ್ಯವಾಗಿದೆ. 4 ಲಕ್ಷ ಹೆಕ್ಟೇರ್ ಕೃಷಿ ಮಾಡಬಹುದಾದ ತ್ಯಾಜ್ಯ ಭೂಮಿ ಇದೆ.15.35 ಲಕ್ಷ ಹೆಕ್ಟೇರ್ ಭೂಮಿ ಬೀಳು ಬಿದ್ದಿದೆ. ಇಂತಹ ಭೂಮಿಯಲ್ಲಿ ಕೃಷಿ ಕ್ಷೇತ್ರಕ್ಕೆ ಒಳಪಡಿಸುವುದು ಮತ್ತು ಬಂಜರು ಭೂಮಿಯನ್ನೂ ಸದುಪಯೋಗ ಮಾಡಿಕೊಳ್ಳುವಂತಾಗಲು ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆಯೇ ವಿನಹ ಕೈಗಾರಿಕೆಗಳ ಸ್ಥಾಪನೆಗಾಗಿ ನೀರಾವರಿ ಕೃಷಿ ಭೂಮಿ ಖರೀದಿಸಲು ಅವಕಾಶ ಇಲ್ಲ. ಯಾವುದೇ ರೈತರು ಆತಂಕ ಪಡುವ ಅಗತ್ಯ ಇಲ್ಲ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಕೃಷಿ ಸಂಬಂಧಿತ ಮಸೂದೆಗಳು ರೈತರ ಪರವಾಗಿವೆ. ಇದರಿಂದ ರೈತ ಸಮುದಾಯಕ್ಕೆ ಸಾಕಷ್ಟು ಅನುಕೂಲವಾಗಲಿದೆ. ನಾವೆಲ್ಲರೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಬೇಕು. ಆದರೆ, ಪ್ರತಿ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ.
    | ಮಹಾಂತೇಶ ಕವಟಗಿಮಠ, ವಿ.ಪ. ಆಡಳಿತ ಪಕ್ಷದ ಮುಖ್ಯ ಸಚೇತಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts