More

    ಬ್ರಹ್ಮ ಹೇಳಿದ್ರೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ: ಈಶ್ವರಪ್ಪ

    ಶಿವಮೊಗ್ಗ: ಆ ಬ್ರಹ್ಮನೇ ಬಂದು ಹೇಳಿದರೂ ಲೋಕಸಭಾ ಚುನಾವಣೆ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವುದಿಲ್ಲ. ಅದೃಶ್ಯ ಮತದಾರರು ನನ್ನ ಪರವಾಗಿದ್ದಾರೆ. ನೊಂದ ಬಿಜೆಪಿ ಕಾರ್ಯಕರ್ತರು ನನ್ನೊಂದಿಗಿದ್ದಾರೆ. ಚುನಾವಣೆ ಸ್ಪರ್ಧೆ ನಿರ್ಧಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

    ನನ್ನ ಸ್ಪರ್ಧೆ ಇಡೀ ರಾಜ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರಬೇಕು. ಕಾಂಗ್ರೆಸ್ ಅಭ್ಯರ್ಥಿಗಳು ಸೋಲಬೇಕು. ನರೇಂದ್ರ ಮೋದಿ ಗೆಲ್ಲಬೇಕು ಎಂಬುದು ನನ್ನ ಆಶಯ. ಇಂದಿನಿಂದ ಪ್ರಚಾರ ಆರಂಭಿಸಿದ್ದೇನೆ. ಮುಂದಿನ ವಾರದಿಂದ ಪ್ರಚಾರವು ವೇಗ ಪಡೆದುಕೊಳ್ಳಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಹಲವು ಮಠಾಧೀಶರನ್ನು ಭೇಟಿಯಾಗಿದ್ದೇನೆ. ಹಿಂದುತ್ವದ ಪ್ರತಿಪಾದಕರಾಗಿರುವ ನಿಮಗೆ ಗೆಲುವಾಗಲಿ ಎಂದು ಎಲ್ಲರೂ ಹಾರೈಸಿದ್ದಾರೆ. ಅನೇಕ ಭಾಗಗಳಿಂದ ನೊಂದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕರೆ ಮಾಡಿ ಬೆಂಬಲ ಸೂಚಿಸುತ್ತಿದ್ದಾರೆ. ಕೆಲವರು ಈ ಚುನಾವಣೆಯಲ್ಲಿ ನನ್ನ ಪರವಾಗಿ ನೇರವಾಗಿಯೇ ಕೆಲಸ ಮಾಡಲು ಒಪ್ಪಿದ್ದಾರೆ. ಇನ್ನು ಕೆಲವರು ಪರೋಕ್ಷವಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಜೆಡಿಎಸ್, ಕಾಂಗ್ರೆಸ್, ರಾಷ್ಟ್ರಭಕ್ತ ಮುಸ್ಲಿಮರ ಮತಗಳು ನನಗೆ ಸಿಗಲಿವೆ ಎಂದರು.
    ನಾಡಿದ್ದು ಸಭೆ: ವಿನೋಬನಗರದ ಶುಭಮಂಗಳ ಸಮುದಾಯ ಭವನದಲ್ಲಿ ಮಾ.26ರ ಬೆಳಗ್ಗೆ 11ಕ್ಕೆ ಬೂತ್ ಮಟ್ಟದ ಕಾರ್ಯಕರ್ತರ ಸಭೆ ಕರೆದಿದ್ದೇನೆ. ಲೋಕಸಭಾ ಕ್ಷೇತ್ರದ ಪ್ರತಿ ಬೂತ್‌ನಿಂದ ಇಬ್ಬರು ಕಾರ್ಯಕರ್ತರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
    ರಾಷ್ಟ್ರಭಕ್ತರ ಬಳಗ ಎಂಬ ಹೆಸರಿನಲ್ಲಿ ಚುನಾವಣೆ ನಡೆಸಲಾಗುವುದು. ಮಲ್ಲೇಶ್ವರ ನಗರದಲ್ಲಿ ಮಾ.28ರ ಬೆಳಗ್ಗೆ 11ಕ್ಕೆ ಚುನಾವಣಾ ಕಾರ್ಯಾಲಯ ಆರಂಭಿಸಲಾಗುವುದು. ಅನೇಕ ಪ್ರಮುಖರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹಿಂದು ಸಂಪ್ರದಾಯದಂತೆ ಐದು ಮಂದಿ ಮುತ್ತೈದೆಯರು ಪಾಲ್ಗೊಳ್ಳುತ್ತಾರೆ ಎಂದರು.
    ಮಾಜಿ ಮೇಯರ್‌ಗಳಾ ಸುವರ್ಣಾ ಶಂಕರ್, ಏಳುಮಲೈ, ಮಾಜಿ ಉಪಮೇಯರ್‌ಗಳಾದ ಗನ್ನಿ ಶಂಕರ್, ಲಕ್ಷ್ಮೀ ಶಂಕರನಾಯ್ಕ, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ವೀರಶೈವ ಸಮಾಜದ ಮುಖಂಡ ಮಹಾಲಿಂಗಯ್ಯ ಶಾಸ್ತ್ರಿ ಇತರರಿದ್ದರು.
    ಮತ್ತೆ ಬಿಎಸ್‌ವೈ ವಿರುದ್ಧ ವಾಗ್ದಾಳಿ: ಕುಟುಂಬ ರಾಜಕಾರಣವನ್ನು ಪ್ರಧಾನಿ ನರೇಂದ್ರ ಮೋದಿ ವಿರೋಧಿಸಿದ್ದರು. ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎಂದಿದ್ದರು. ಆದರೆ ಅದನ್ನು ಬಿ.ಎಸ್.ಯಡಿಯೂರಪ್ಪ ಉಲ್ಲಂಘಿಸಿದ್ದಾರೆ. ಪಕ್ಷ ಅವರ ಹಿಡಿತದಲ್ಲಿದೆ. ಒಬ್ಬ ಮಗ ಸಂಸದ, ಮತ್ತೋರ್ವ ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ. ಹೀಗಾದರೆ ಸಾಮಾನ್ಯ ಕಾರ್ಯಕರ್ತರಿಗೆ ಅಧಿಕಾರ ಸಿಗುವುದು ಯಾವಾಗ? ಎಂದು ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು. ರಾಜ್ಯ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಬಿ.ವೈ.ವಿಜಯೇಂದ್ರ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡರು. ಕೋರ್‌ಕಮಿಟಿ ಸಭೆಯಲ್ಲೂ ಚರ್ಚಿಸಲಿಲ್ಲ. ಹಿಂದುತ್ವಕ್ಕಾಗಿ ಹೋರಾಟ ಮಾಡಿದವರನ್ನೇ ಯಡಿಯೂರಪ್ಪ ಕುಟುಂಬ ಕಡೆಗಾಣಿಸಿದೆ. ಸಿ.ಟಿ.ರವಿ, ಬಸನಗೌಡ ಪಾಟೀಲ್ ಯತ್ನಾಳ್, ಸದಾನಂದ ಗೌಡ, ಪ್ರತಾಪ್ ಸಿಂಹ ಮುಂತಾದವರನ್ನೆಲ್ಲ ಕೈಬಿಟ್ಟಿದ್ದಾರೆ. ಕಾಂತೇಶ್‌ಗೆ ನೀಡಿದ್ದ ಟಿಕೆಟ್ ಭರವಸೆ ಹುಸಿಯಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts