More

    ಎತ್ತಿನಹೊಳೆ ಯೋಜನೆ ನಾಲೆ ಕಾಮಗಾರಿಗೆ ವಿಘ್ನ!

    ತುಮಕೂರು: ಬಯಲುಸೀಮೆ ಜಿಲ್ಲೆಗಳಿಗೆ ನೀರು ಪೂರೈಸುವ ರಾಜ್ಯದ ಮಹತ್ವಾಕಾಂಕ್ಷಿ ‘ಎತ್ತಿನಹೊಳೆ’ ನೀರಾವರಿ ಯೋಜನೆಗೆ ನಾಲೆ ನಿರ್ಮಾಣಕ್ಕೆ ವಿಘ್ನ ಎದುರಾಗಿದ್ದು, ಕಾಮಗಾರಿ ನಿಲ್ಲಿಸಲು ಸೂಚಿಸಲಾಗಿದೆ.

    ತಿಪಟೂರು ತಾಲೂಕು ಕೊನೇಹಳ್ಳಿ ಅಮೃತ್ ಮಹಲ್ ಕಾವಲಿನಲ್ಲಿ ಅವೈಜ್ಞಾನಿಕವಾಗಿ ನಾಲೆ ಕಾಮಗಾರಿ ನಡೆಯುತ್ತಿದೆ, ಸಂಬಂಧಿಸಿದ ಇಲಾಖೆಯಿಂದ ಅನುಮತಿ ಕೂಡ ಪಡೆಯದೇ ಕೆಲಸ ಆರಂಭಿಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಕೆಲಸ ನಿಲ್ಲಿಸಲಾಗಿದೆ.

    ಅಮೃತ್ ಮಹಲ್ ಕಾವಲ್‌ನಲ್ಲಿ ನಡೆಯುತ್ತಿರುವ ನಾಲೆ ನಿರ್ಮಾಣ ಕಾಮಗಾರಿ ಹಸಿರು ಪೀಠ, ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದ್ದು, ವನ್ಯಜೀವಿಗಳಿಗೆ ಅಪಾಯ ತಂದೊಡ್ಡಲಿದೆ ಎಂದು ಪರಿಸರವಾದಿಗಳೂ ಅಪಸ್ವರ ಎತ್ತಿದ್ದು ಯೋಜನೆಗೆ ಹಿನ್ನಡೆಯಾಗಿದೆ, ಕೊನೆಹಳ್ಳಿ ಕಾವಲ್‌ನಲ್ಲಿ ಅರಣ್ಯ ವಲಯವಿದ್ದು ವನ್ಯಜೀವಿಗಳ ತಾಣವಾಗಿದೆ. ಹಾಗಿದ್ದರೂ ಪರಿಸರ ಇಲಾಖೆ ಅನುಮತಿ ಪಡೆದಿಲ್ಲ ಎಂಬುದು ಪರಿಸರವಾದಿಗಳ ಆಕ್ಷೇಪ. ಕಾಮಗಾರಿ ತುರ್ತಾಗಿ ಮುಗಿಸುವ ಉದ್ದೇಶದಿಂದ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂಬ ದೂರುಗಳಿವೆ.

    ಅರಣ್ಯ ಇಲಾಖೆ ಮೌನ: ಕಾವಲ್‌ನಲ್ಲಿ ಕೃಷ್ಣಮೃಗ ಸೇರಿ ಅಪರೂಪದ ಪ್ರಾಣಿ ಹಾಗೂ ಅರಣ್ಯ ಸಂಪತ್ತು ಇದೆ. ಹಾಳಾಗುವ ಮರಕ್ಕೆ 2.86 ಕೋಟಿ ರೂ. ಪರಿಹಾರ ಪಡೆದು ಸುಮ್ಮನಾಗಿರುವ ಅರಣ್ಯ ಇಲಾಖೆ ಕೃಷ್ಣಮೃಗಗಳ ಬಗ್ಗೆ ಕಾಳಜಿ ವಹಿಸದಿರುವುದು ಆಶ್ಚರ್ಯ ಮೂಡಿಸಿದೆ.
    ಕಾಮಗಾರಿ ನಿಲ್ಲಿಸಿ ವಿವಿ ರಿಜಿಸ್ಟರ್ ಪತ್ರ!: 1357 ಎಕರೆ ಪ್ರದೇಶದಲ್ಲಿರುವ ಕೊನೆಹಳ್ಳಿ ಅಮೃತ್ ಮಹಲ್ ಕಾವಲ್ ರಾಜ್ಯ ಪಶು ವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿವಿಗೆ ಸೇರಿದ್ದು ನಾಲೆ ನಿರ್ಮಾಣಕ್ಕೆ ಸರ್ಕಾರದ ಹಂತದಲ್ಲಿ ಭೂಮಿ ಹಸ್ತಾಂತರವಾಗಬೇಕು. ವಿವಿ ಕುಲಸಚಿವರು ಎತ್ತಿನಹೊಳೆ ಯೋಜನೆಯ ಕಾರ್ಯಪಾಲಕ ಅಭಿಯಂತರಿಗೆ ಪತ್ರ ಬರೆದಿದ್ದು, ವಿವಿ ಜತೆ ಒಪ್ಪಂದ ಮಾಡಿಕೊಂಡ ನಂತರವಷ್ಟೆ ಕಾಮಗಾರಿ ಆರಂಭಿಸಬೇಕು ಎಂದು ಪತ್ರ ಬರೆದಿದ್ದರೂ ಕಾಮಗಾರಿ ಮಾತ್ರ ನಿಂತಿಲ್ಲ.

    ನಾಲೆಯಾದರೆ ಏನು ತೊಂದರೆ?: ರಾಜ್ಯದಲ್ಲಿ ಉಳಿದಿರುವ ಕೆಲವೇ ಕೆಲವು ಹುಲ್ಲುಗಾವಲುಗಳ ಪೈಕಿ ಕೊನೆಹಳ್ಳಿ ಕಾವಲ್ ಕೂಡ ಒಂದು, ಇಲ್ಲಿ ದೇಸಿ ರಾಸುಗಳ ಸಂತಾನೋತ್ಪತ್ತಿ ಕೇಂದ್ರವಿದ್ದು, ನಾಲೆ ನಿರ್ಮಾಣದಿಂದ ಈ ಕೇಂದ್ರ ಮತ್ತು ಹುಲ್ಲುಗಾವಲಿಗೆ ಧಕ್ಕೆ ಆಗಲಿದೆ ಎಂಬ ವಿಷಯವನ್ನು ತಡವಾಗಿ ಮನವರಿಕೆ ಮಾಡಿಕೊಂಡಿರುವ ಪಶುವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಞಾನಿಗಳ ತಂಡ ವಿವಿ ಕಾಮಗಾರಿ ನಿಲ್ಲಿಸಲು ಹರಸಾಹಸ ಪಡುತ್ತಿದೆ.

    82 ಎಕರೆ 2 ಕಿಮೀ ನಾಲೆ!: ಅಮೃತ್ ಮಹಲ್ ಕಾವಲ್ ಅರಣ್ಯ ಪ್ರದೇಶದ 82 ಎಕರೆಯಲ್ಲಿ 2ಕಿಮೀ ನಾಲೆ ಹಾದು ಹೋಗುತ್ತಿದೆ, ತಿಪಟೂರು ತಾಲೂಕಿನಲ್ಲಿ 53 ಕಿಮೀ ನಾಲೆ ನಿರ್ಮಾಣವಾಗಲಿದ್ದು, 1103 ಎಕರೆ ಕೃಷಿ ಭೂಮಿ ಸಾಧೀನ ಪಡಿಸಿಕೊಳ್ಳಲಾಗಿದೆ. ರೈತರಿಂದ ಪಡೆದಿರುವ ಭೂಮಿಗೆ ಪರಿಹಾರ ನೀಡದೇ ಮುಂದೆ ನೀರುವ ಭರವಸೆಯಷ್ಟೇ ನೀಡಿ ಕಾಮಗಾರಿ ಆರಂಭಿಸಿರುವುದು ರೈತ ಕುಟುಂಬಗಳ ನೆಮ್ಮದಿ ಕಿತ್ತುಕೊಂಡಿದೆ.

    ಕೃಷ್ಣಮೃಗ ಸಂರಕ್ಷಣಾ ತಾಣವಾಗಬೇಕು: ವನ್ಯಜೀವಿ ಸಂರಕ್ಷಣೆ ಕಾಯ್ದೆಯ ವ್ಯಾಪ್ತಿ ಅಳಿವಿನಂಚಿನಲ್ಲಿರುವ ಕೃಷ್ಣಮೃಗಗಳು ಇರುವ ಕಾರಣಕ್ಕೆ ಈ ಭೂಮಿಯನ್ನು ಪರಭಾರೆ ಮಾಡಬಾರದು ಹಾಗೂ ಯಾವುದೇ ಕಾಮಗಾರಿ ನಡೆಸಬಾರದು ಎಂಬ ಹೈಕೋರ್ಟ್ ಆದೇಶವನ್ನೂ ಉಲ್ಲಂಘಿಸಿ ವನ್ಯಜೀನಿಗಳಿಗೆ ಕಂಟಕವಾಗುವಂತೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಪರಿಸರವಾದಿ ಕೆಳಹಟ್ಟಿ ಶ್ರೀಕಾಂತ್ ದೂರಿದ್ದಾರೆ.

    ಎತ್ತಿನಹೊಳೆ ನಾಲೆ ತಿಪಟೂರು ತಾಲೂಕಿನಲ್ಲಿ ಹಾದು ಹೋಗಿದೆ. ಆದರೆ, ಅದರ ನೀರಿನ ಪಾಲು ನಮಗೆ ಇಲ್ಲ. ರೈತ ಅಥವಾ ಸರ್ಕಾರದ ಭೂಮಿಯಾಗಲಿ ಈ ನೆಲದ ಕಾನೂನಿಗೆ ಗೌರವಕೊಟ್ಟು ಕಾಮಗಾರಿ ನಡೆಸಬೇಕು.
    ತಿಮ್ಲಾಪುರ ದೇವರಾಜು ಅಧ್ಯಕ್ಷ, ಎತ್ತಿನಹೊಳೆ ನೀರಾವರಿ ಹೋರಾಟ ಸಮಿತಿ

    ವಿವಿ ಜತೆ ಒಪ್ಪಂದ ಮಾಡಿಕೊಂಡ ನಂತರವಷ್ಟೇ ಕಾಮಗಾರಿ ನಡೆಸಬೇಕು ಎಂಬ ನಮ್ಮ ಸೂಚನೆಯ ನಂತರವೂ ಕಾಮಗಾರಿ ನಡೆಯುತ್ತಿದೆ. ಈ ಬಗ್ಗೆ ವಿವಿ ಆಡಳಿತ ಮಂಡಳಿಗೆ ಮಾಹಿತಿ ನೀಡಲಾಗಿದೆ ಶೀಘ್ರದಲ್ಲಿಯೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ.
    ಡಾ.ರುದ್ರಸ್ವಾಮಿ ಸಂಶೋಧನಾ ಕೇಂದ್ರದ ಮುಖ್ಯಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts