More

    620 ಆಶ್ರಯ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

    ಶಿವಮೊಗ್ಗ: ಬಡವರಿಗೆ ಮನೆಗಳನ್ನು ಹಂಚುವುದು ನನ್ನ ಸೌಭಾಗ್ಯ. ಫೆ .8ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು 620 ಲಾನುಭವಿಗಳಿಗೆ ಆಶ್ರಯ ಮನೆಗಳ ಹಕ್ಕುಪತ್ರ ವಿತರಿಸುವರು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
    ನಗರದ ಹೊರವಲಯದ ಗೋವಿಂದಾಪುರದಲ್ಲಿ ಸೋಮವಾರ ರಾಜೀವ್‌ಗಾಂಧಿ ವಸತಿ ನಿಗಮ ನಿಯಮಿತ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ, ಆಶ್ರಯ ಯೋಜನೆಯಡಿ ಮೊದಲ ಹಂತದಲ್ಲಿ ಸಂಪೂರ್ಣ ವಂತಿಕೆ ಹಣ ಪಾವತಿಸಿದ ಹಾಗೂ ಬ್ಯಾಂಕ್‌ನಿಂದ ಸಂಪೂರ್ಣ ಸಾಲ ಮಂಜೂರಾತಿಯಾದ ಫಲಾನುಭವಿಗಳಿಗೆ ಹಾಗೂ ಲಾಟರಿ ಮೂಲಕ ಗುಂಪು ಮನೆ ಆಯ್ಕೆ ಮಾಡುವ ಪ್ರಕ್ರಿಯೆ ಉದ್ಘಾಟಿಸಿ ಮಾತನಾಡಿದರು.
    ನನ್ನ ತಾಯಿ ಅಡಕೆ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಆತ್ಮಕ್ಕೆ ಈ ವಸತಿ ಹಂಚಿಕೆ ಕಾರ್ಯ ಶಾಂತಿ ತಂದಿರಬಹುದು ಎಂದು ಭಾವಿಸುತ್ತೇನೆ. ಈಗ 620 ಮನೆಗಳು ಸಿದ್ಧವಾಗಿದ್ದು, ಲಾಟರಿ ಮೂಲಕ ಹಂಚಿಕೆ ಪ್ರಕ್ರಿಯೆ ನಡೆಸಲಾಗಿದೆ. ಎನ್‌ಇಎಸ್ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ 620 ಫಲಾನುಭವಿಗಳಿಗೂ ಹಕ್ಕುಪತ್ರ ನೀಡಲಾಗುವುದು ಎಂದರು.
    ಬ್ಯಾಂಕ್ ಸಾಲ ಲಭ್ಯಗೊಂಡು ಅವರೊಂದಿಗೆ ಅಗ್ರಿಮೆಂಟ್ ಆದ ತಿಂಗಳಿಂದಲೇ ಮಾಸಿಕ ಕಂತು ಕಟ್ಟಲು ಪ್ರಾರಂಭವಾಗುತ್ತದೆ. ಉಳಿದ ಮನೆಗಳ ನಿರ್ಮಾಣ ಕಾರ್ಯ ಕೂಡ ವೇಗವಾಗಿ ನಡೆಯಲಿದೆ. ಈ ಮೂಲಕ ಬಹು ದಿನಗಳ ಆಶ್ರಯ ಫಲಾನುಭವಿಗಳ ಕನಸು ಈಡೇರುತ್ತಿದೆ ಎಂದು ಹೇಳಿದರು.
    ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ಮಾತನಾಡಿದರು. ಶಾಸಕ ಆಯನೂರು ಮಂಜುನಾಥ್, ಮೇಯರ್ ಎಸ್.ಶಿವಕುಮಾರ್, ಉಪಮೇಯರ್ ಲಕ್ಷ್ಮೀಶಂಕರ್ ನಾಯ್ಕ, ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್, ಆಶ್ರಯ ಸಮಿತಿ ಅಧ್ಯಕ್ಷ ಎಚ್.ಶಶಿಧರ್, ಪಾಲಿಕೆ ಸದಸ್ಯರಾದ ಎಸ್.ಎನ್.ಚನ್ನಬಸಪ್ಪ, ಧೀರರಾಜ್ ಹೊನ್ನವಿಲೆ, ಅನಿತಾ ರವಿಶಂಕರ್, ಇ.ವಿಶ್ವಾಸ್, ಪ್ರತಿಪಕ್ಷ ನಾಯಕಿ ರೇಖಾ ರಂಗನಾಥ್, ಬಿಜೆಪಿ ನಗರ ಅಧ್ಯಕ್ಷ ಎನ್.ಕೆ.ಜಗದೀಶ್, ಯೋಜನಾಧಿಕಾರಿ ಕರಿಭೀಮಣ್ಣನವರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts