ನವದೆಹಲಿ: ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಈಗ ವೀಕ್ಷಕವಿವರಣೆಕಾರರಾಗಿ ಪ್ರಸಿದ್ಧಿ ಪಡೆದಿದ್ದು, ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ಸಕ್ರಿಯರಾಗಿರುತ್ತಾರೆ. ಆದರೆ ಕಳೆದ ಕೆಲ ದಿನಗಳಿಂದ ಅವರಿಗೆ ಸಾಮಾಜಿಕ ಜಾಲತಾಣದಿಂದಲೇ ಹೊರನಡೆಯುವಷ್ಟು ಬೇಸರವಾಗಿದೆ. ಇದಕ್ಕೆ ಕಾರಣ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರ ಅಭಿಮಾನಿಗಳ ಕಾಟ! ಹೌದು, ಧೋನಿ ಅಭಿಮಾನಿಗಳಿಂದ ಬರುತ್ತಿರುವ ನಿಂದನೆ ಮತ್ತು ಕೆಟ್ಟ ಭಾಷೆಯ ಬೈಗುಳದಿಂದಾಗಿ ಆಕಾಶ್ ಚೋಪ್ರಾ ಬೇಸತ್ತು ಹೋಗಿದ್ದಾರೆ.
ಇದನ್ನೂ ಓದಿ: ರೂಫ್ ಟಾಪ್ನಲ್ಲಿ ಚುಂಬನ, ಕ್ರೀಡಾಪಟು ಬಂಧನ!
‘ಕಳೆದ ಕೆಲದಿನಗಳಿಂದ ನಾನು ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದೆ. ಜನರಿಂದ ಸಾಕಷ್ಟು ನಿಂದನಾತ್ಮಕ ಕಮೆಂಟ್‌ಗಳು ಬರುತ್ತಿದ್ದವು. ನನ್ನ ಮಕ್ಕಳನ್ನೂ ಅವರು ಬಯ್ಯುತ್ತಿದ್ದರು. ಆದದ್ದು ಆಗಿ ಹೋಯಿತು, ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ ಎಂದರೂ ಅವರು ಕೇಳುತ್ತಿಲ್ಲ’ ಎಂದು ಆಕಾಶ್ ಚೋಪ್ರಾ, ಮತ್ತೋರ್ವ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಜತೆಗಿನ ವಿಡಿಯೋ ಚಾಟ್ ವೇಳೆ ಅಳಲು ತೋಡಿಕೊಂಡಿದ್ದಾರೆ.
ಧೋನಿ ಅಭಿಮಾನಿಗಳು ಸಿಟ್ಟಾಗಿದ್ದು ಯಾಕೆ?
ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ನಿಗದಿಯಂತೆಯೇ ನಡೆದರೆ, ಅದರಲ್ಲಿ ಆಡುವ 14 ಸದಸ್ಯರ ಭಾರತ ತಂಡ ಹೇಗಿರಬೇಕು ಎಂದು ಆಕಾಶ್ ಚೋಪ್ರಾ ಇತ್ತೀಚೆಗೆ ಅಭಿಪ್ರಾಯ ಹಂಚಿಕೊಂಡಿದ್ದರು. ಅದರಲ್ಲಿ ಅವರು ವಿಕೆಟ್ ಕೀಪರ್ ಸ್ಥಾನಕ್ಕೆ ಎಂಎಸ್ ಧೋನಿ ಅವರನ್ನು ಆಯ್ಕೆ ಮಾಡಿರಲಿಲ್ಲ. ಅದಕ್ಕೆ ಬದಲಾಗಿ ರಿಷಭ್ ಪಂತ್ ಮತ್ತು ಕನ್ನಡಿಗ ಕೆಎಲ್ ರಾಹುಲ್ ಅವರನ್ನು ವಿಕೆಟ್ ಕೀಪರ್‌ಗಳನ್ನಾಗಿ ಹೆಸರಿಸಿದ್ದರು. 38 ವರ್ಷದ ಧೋನಿ ಮತ್ತೆ ಭಾರತ ತಂಡಕ್ಕೆ ಮರಳುವುದು ಕಠಿಣ ಎಂದೂ ಅವರು ಅಭಿಪ್ರಾಯ ಹಂಚಿಕೊಂಡಿದ್ದರು. ಇದರಿಂದ ಸಿಟ್ಟಾಗಿರುವ ಧೋನಿ ಅಭಿಮಾನಿಗಳು, ಆಕಾಶ್ ಚೋಪ್ರಾರನ್ನು ಪೀಡಿಸುತ್ತಿದ್ದಾರೆ.
ಇದನ್ನೂ ಓದಿ: ನಿಲ್ಲದ ಕಬಡ್ಡಿ ಗೊಂದಲ, ಮತ್ತೆ ತಿಕ್ಕಾಟಕ್ಕೆ ಕಾರಣವೇನು?
‘ನಿವೃತ್ತಿಯಾಗುವುದು, ಬಿಡುವುದು ಧೋನಿಗೆ ಬಿಟ್ಟ ವಿಚಾರ. ಅವರನ್ನು ಆಯ್ಕೆ ಮಾಡುವುದು ಅಥವಾ ಬಿಡುವುದು ಕೂಡ ಆಯ್ಕೆಗಾರರಿಗೆ ಬಿಟ್ಟ ವಿಚಾರ. ಕಳೆದ ಒಂದು ವರ್ಷದಿಂದ ಯಾವುದೇ ಪಂದ್ಯವನ್ನೂ ಆಡದಿರುವ ಆಟಗಾರನನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುವುದು ನಿಜಕ್ಕೂ ಕಠಿಣ ಕೆಲಸ’ ಎಂದು ಧೋನಿಯ ಮತ್ತೋರ್ವ ಪ್ರಮುಖ ಟೀಕಾಕಾರ ಅಗರ್ಕರ್ ಚಾಟ್ ಶೋನಲ್ಲಿ ಆಕಾಶ್ ಚೋಪ್ರಾ ಅಭಿಮತವನ್ನು ಬೆಂಬಲಿಸಿದ್ದಾರೆ.