More

    ಪರಿಸರ ಅಸಮತೋಲನವೇ ಬರಗಾಲಕ್ಕೆ ಕಾರಣ

    ಕೊಳ್ಳೇಗಾಲ: ರಾಜ್ಯ ಬರಗಾಲ ಎದುರಿಸಲು ಕಾರಣ ಪರಿಸರ ಅಸಮತೋಲನ ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಲೋಕಪ್ಪ ತಿಳಿಸಿದರು.

    ಪಟ್ಟಣದ ಮರಡಿಗುಡ್ಡ ವೃಕ್ಷವನದ ಮುಂಭಾಗ ಮಲೆಮಹದೇಶ್ವರ ವನ್ಯಜೀವಿ ವಿಭಾಗ ಮತ್ತು ಕಾವೇರಿ ವನ್ಯಜೀವಿ ವಿಭಾಗ ವತಿಯಿಂದ ಆಯೋಜಿಸಿದ್ದ 69ನೇ ವನ್ಯಜೀವಿ ಸಪ್ತಾಹ-2023 ಮ್ಯಾರಥಾನ್ ಸ್ಪರ್ಧೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ಪರಿಸರದಲ್ಲಿ ಸಮತೋಲನ ಕಾಯ್ದುಕೊಳ್ಳದಿದ್ದರೆ ಮನುಷ್ಯ ಕುಲಕ್ಕೆ ಕೇಡಾಗುವುದು ನಿಶ್ಚಿತ. ಅರಣ್ಯ ನಾಶವಾದರೆ ಪ್ರಾಣಿಗಳು ನಾಡಿಗೆ ಬರುತ್ತವೆ. ಇದರಿಂದ ಮನುಷ್ಯರಿಗೆ ಹಾಗೂ ಬೆಳೆಗಳಿಗೆ ತೊಂದರೆಯಾಗುತ್ತದೆ ಎಂದರು.

    ಭೂಮಿ ಮೇಲಿನ ಎಲ್ಲ ಜೀವಿಗಳಿಗೂ ಉತ್ತಮ ಪರಿಸರ ಅಗತ್ಯವಿದೆ. ಪರಿಸರ ಸಮತೋಲನವಾಗಿದ್ದರೆ ಶುದ್ಧ ಗಾಳಿ ಹಾಗೂ ನೀರು ಸಿಗುತ್ತದೆ. ವೈಜ್ಞಾನಿಕವಾಗಿ ನಮ್ಮ ದೇಶ ಮುಂದಿದೆ. ಈ ನಡುವೆ ಜನಸಂಖ್ಯೆ ನಿಯಂತ್ರಣ ಮಾಡುವುದನ್ನು ಮರೆತ್ತಿದ್ದೇವೆ. ಅತಿಯಾದ ನಗರೀಕರಣ, ಕೈಗಾರೀಕರಣದಿಂದ ವನ್ಯಜೀವಿ ಸಂಪತ್ತು ನಾಶವಾಗುತ್ತಿದೆ ಎಂದರು.

    ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಮಾತನಾಡಿ, ನಮ್ಮೆಲ್ಲರ ಅಳಿವು, ಉಳಿವು ವನ್ಯಜೀವಿಗಳ ರಕ್ಷಣೆ ಮೇಲೆ ನಿಂತಿದೆ. ಕಾಡು ಉಳಿಸುವ ಜತೆಗೆ ಪರಿಸರ ಸ್ವಾಸ್ಥ್ಯ ಕಾಪಾಡಿಕೊಳ್ಳಬೇಕು ಎಂದರು.

    ವನ್ಯಜೀವಿ ಸಪ್ತಾಹ ಹಿನ್ನೆಲೆಯಲ್ಲಿ ಮ್ಯಾರಥಾನ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಗೆ ಮರಡಿಗುಡ್ಡ ವೃಕ್ಷವನ ಮುಂಭಾಗ ಚಾಲನೆ ದೊರೆಯಿತು. ಮಧುವನಹಳ್ಳಿ, ಹೊಂಡರಬಾಳು, ಲಕ್ಕರಸನಪಾಳ್ಯ ಮಾರ್ಗವಾಗಿ ಸ್ಪರ್ಧಾಳುಗಳು ಡಿಸಿಎಫ್ ಕಚೇರಿ ಬಂದು ಸೇರಿದರು. ಎನ್‌ಎಸ್‌ಎಸ್ ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 70ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ಮ್ಯಾರಥಾನ್‌ನಲ್ಲಿ ಭಾಗವಹಿಸಿ ಪ್ರಥಮವಾಗಿ ಆಗಮಿಸಿದ ಶಿವಕುಮಾರ್, ಮಧು ಹಾಗೂ ಪ್ರಸನ್ನ ಅವರಿಗೆ ಟ್ರೋಫಿ ವಿತರಿಸಲಾಯಿತು. ಉಳಿದ ಎಲ್ಲ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ನೀಡಲಾಯಿತು.

    ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಸಂತೋಷ್‌ಕುಮಾರ್, ಕಾವೇರಿ ವನ್ಯಜೀವಿ ವಿಭಾಗದ ಡಿಸಿಎಫ್ ಸುರೇಂದ್ರ, ಎಸಿಎಫ್ ಶಶಿಧರ್ ಅಂಕಯ್ಯ, ನಂದಗೋಪಾಲ್, ವಲಯ ಅರಣ್ಯಾಧಿಕಾರಿ ಭರತ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts