More

    ಸಾವಯವ ಕೃಷಿಯಲ್ಲಿ ಖುಷಿ

    ಸಂತೋಷ ಮುರಡಿ ಮುಂಡರಗಿ

    ಕೆಲೂರ ಗ್ರಾಮದ ಮಳ್ಳಪ್ಪ ಬೂದಿಹಾಳ ಹಾಗೂ ಯಲ್ಲಮ್ಮ ಬೂದಿಹಾಳ ದಂಪತಿ ಸಾವಯವ ಕೃಷಿಯಲ್ಲಿ ನೆಮ್ಮದಿ ಕಂಡಿದ್ದಾರೆ.

    ತೋಟಗಾರಿಕೆ ಇಲಾಖೆಯ ಸಹಾಯಧನ ಪಡೆದು ಉತ್ತಮ ಬೆಳೆ ಬೆಳೆಯುವ ಮೂಲಕ ಮಾದರಿಯಾಗಿದ್ದಾರೆ.

    ದಂಪತಿ 4ಎಕರೆ ಜಮೀನಿನಲ್ಲಿ ತೋಟಗಾರಿಕೆ, ಮಿಶ್ರ ಬೆಳೆ ಬೆಳೆದಿದ್ದಾರೆ. ಮೊದಲಿಗೆ ಒಣಬೇಸಾಯ ಮಾಡುತ್ತಿದ್ದ ಈ ದಂಪತಿ ತೋಟಗಾರಿಕೆಯತ್ತ ಆಸಕ್ತಿ ಹೊಂದಿ, ತೋಟಗಾರಿಕೆ ಇಲಾಖೆಯ ಸಹಕಾರ ದಿಂದ ಬೋರ್​ವೆಲ್ ಹಾಕಿಸಿ, ಹನಿ ನೀರಾವರಿ ಮೂಲಕ 2010 ರಿಂದ ವಿವಿಧ ಬೆಳೆ ಬೆಳೆಯುತ್ತಿದ್ದಾರೆ.

    2 ಎಕರೆಯಲ್ಲಿ ಬಾಳೆ, 2 ಎಕರೆಯಲ್ಲಿ ಮಾವು ಬೆಳೆಸಿದ್ದಾರೆ. ಸುತ್ತಲೂ 80 ತೆಂಗು, 20 ಗೋಡಂಬಿ, 40 ಸಾಗವಾನಿ, 10 ಲಿಂಬೆ ಗಿಡ ಹಚ್ಚಿದ್ದಾರೆ. ಮಾವಿನ ತೋಟದಲ್ಲಿ ನುಗ್ಗೆ, ಕರಿಬೇವು, ಟೊಮ್ಯಾಟೊ, ಹೀರೆಕಾಯಿ, ಬೆಂಡೆ, ಬೀನ್ಸ್, ಮೆಣಸಿನಕಾಯಿ ಹಾಗೂ ಶೇಂಗಾ ಸಹ ಬೆಳೆಯುತ್ತಾರೆ. ಶೇಂಗಾ ಬೆಳೆ ತೆಗೆದ ನಂತರ ಚಂಡು ಹೂ ಬೆಳೆಯುತ್ತಾರೆ. ದನಕರುಗಳಿಗೆ ಹುಲ್ಲು ಸಹ ಬೆಳೆಯುತ್ತಿದ್ದಾರೆ.

    ಕಳೆದ ವಾರ ಒಟ್ಟು 28 ಟನ್ ಬಾಳೆ ಕಟಾವು ಮಾಡಲಾಗಿದೆ. ಪ್ರತಿ ಟನ್ ಬಾಳೆಗೆ 7 ಸಾವಿರ ರೂ.ನಂತೆ ಒಟ್ಟು 1.96ಲಕ್ಷ ರೂ. ಆದಾಯ ಬಂದಿದೆ. ಒಟ್ಟು 42 ಆಪೂಸ್ ಮತ್ತು ಬೇನಿಷ್ ಜಾತಿಯ ಮಾವಿನ ಗಿಡಗಳಿದ್ದು, ಕಳೆದ 3 ವರ್ಷಗಳಿಂದ ಫಲ ನೀಡುತ್ತಿವೆ. ಪ್ರತಿವರ್ಷ 25 ರಿಂದ 30 ಕ್ವಿಂಟಾಲ್ ಮಾವು ಬರುತ್ತಿದ್ದು ಪ್ರತಿ ಕ್ವಿಂಟಾಲ್​ಗೆ 2500 ಸಾವಿರ ರೂ.ನಂತೆ ಮಾರಾಟ ಮಾಡುತ್ತಿದ್ದಾರೆ.

    ಏಪ್ರಿಲ್​ನಿಂದ ಜುಲೈ ಮಧ್ಯ ಚಂಡು ಹೂ ಬೆಳೆಯುತ್ತಾರೆ. ಕಳೆದ ವರ್ಷ 13 ಟನ್ ಚಂಡು ಹೂವು ಬೆಳೆದು ಪ್ರತಿಟನ್​ಗೆ 5,500ರೂ.ಗೆ ಮಾರಾಟ ಮಾಡಿದ್ದಾರೆ. ಕೃಷಿಯೊಂದಿಗೆ ಜೇನು ಸಾಕಣೆ ಮಾಡುತ್ತಿದ್ದು, ವರ್ಷಕ್ಕೆ ಸುಮಾರು 15 ಕೆ.ಜಿ. ಜೇನುತುಪ್ಪ ಪಡೆಯುತ್ತಾರೆ. ರಾಸಾಯನಿಕ ಗೊಬ್ಬರ ಬಳಸುವುದಿಲ್ಲ. ಬದಲಿಗೆ ತಾವೇ ಜಮೀನಿನಲ್ಲಿ ಸಾವಯವ ಗೊಬ್ಬರ ತಯಾರಿಸಿ ಬಳಸುತ್ತಾರೆ.

    ಏಕ ಬೆಳೆ ಪದ್ಧತಿಯಿಂದ ಹೆಚ್ಚು ಲಾಭ ಸಿಗುವುದಿಲ್ಲ. ಹೀಗಾಗಿ ಮಿಶ್ರ ಬೆಳೆ ಬೆಳೆಯುತ್ತಿದ್ದೇವೆ. ತೋಟಗಾರಿಕೆ ಇಲಾಖೆ ಸಹಕಾರ, ಮಾರ್ಗದರ್ಶನದಲ್ಲಿ ವಿವಿಧ ಬೆಳೆ ಬೆಳೆಯಲಾಗಿದೆ. ಮನೆಯವರೆಲ್ಲ ಸೇರಿ ತೋಟದಲ್ಲಿ ಕೆಲಸ ಮಾಡುತ್ತೇವೆ. ಮಿಶ್ರ ಬೆಳೆಯಿಂದ ಹೆಚ್ಚು ಲಾಭ ಸಿಗುತ್ತದೆ ಎನ್ನುವುದಕ್ಕಿಂತ ಉತ್ತಮ ಆರೋಗ್ಯ, ನೆಮ್ಮದಿ ಜೀವನ ದೊರೆಯುತ್ತದೆ.

    | ಮಳ್ಳಪ್ಪ-ಯಲ್ಲಮ್ಮ ದಂಪತಿ ಕೆಲೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts