More

    ಆಂಗ್ಲ ಭಾಷೆ ಸರಳ, ಸುಲಭ

    ಚಿತ್ರದುರ್ಗ: ಆಂಗ್ಲ ಭಾಷೆಯನ್ನು ಸರಳ, ಸುಲಭ ವಿಧಾನದಲ್ಲಿ ಕಲಿಸುವ ಮೂಲಕ ವಿದ್ಯಾರ್ಥಿಗಳ ಮನಸ್ಸಿಗೆ ನಾಟುವಂತೆ ಮಾಡುವ ಕಲೆ ಶಿಕ್ಷಕರು ರೂಢಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾ ಪ್ರಭು ಸಲಹೆ ನೀಡಿದರು.

    ಸಾರ್ವಜನಿಕ ಶಿಕ್ಷಣ, ಸಾಕ್ಷರತಾ ಇಲಾಖೆಯಿಂದ ತರಾಸು ರಂಗಮಂದಿರದಲ್ಲಿ ಜಿಲ್ಲೆಯ ಪ್ರೌಢಶಾಲಾ ಆಂಗ್ಲ ಶಿಕ್ಷಕರಿಗಾಗಿ ಬುಧವಾರ ಆಯೋಜಿಸಿದ್ದ ಒಂದು ದಿನದ ಪುನಶ್ಚೇತನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಇಂಗ್ಲೀಷ್ ಕಷ್ಟವಲ್ಲ ಎಂಬುದನ್ನು ಮೊದಲು ಮಕ್ಕಳಲ್ಲಿ ಮನವರಿಕೆ ಮಾಡಿಕೊಡಬೇಕು. ಅರ್ಥವಾಗುವ ರೀತಿಯಲ್ಲಿ ಹೇಳಿಕೊಟ್ಟರೆ ಬಹುಬೇಗ ಕಲಿಯುತ್ತಾರೆ. ಜ್ಞಾಪಕ ಶಕ್ತಿ ಹೆಚ್ಚಿರುವ ಪ್ರಾಥಮಿಕ ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ಓದುವ, ಬರೆಯುವ, ಮಾತನಾಡುವ ನೈಪುಣ್ಯತೆ ಬೆಳೆಸಬೇಕು ಎಂದು ತಿಳಿಸಿದರು.

    ಶಿಕ್ಷಣದಿಂದ ಮಾತ್ರ ಜಿಲ್ಲೆ ಅಭಿವೃದ್ಧಿ ಕಾಣಲು ಸಾಧ್ಯ. ಆದ್ದರಿಂದ ಪ್ರತಿ ವಿದ್ಯಾರ್ಥಿ ಕನಸು ನನಸಾಗಿಸಿಕೊಳ್ಳಲು ಕಠಿಣ ಪರಿಶ್ರಮ ಮುಖ್ಯವಾಗಿದ್ದು, ಚಟುವಟಿಕೆಯಲ್ಲಿ ಬದಲಾವಣೆ ಕಂಡುಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಬೇಕು. ಎಲ್ಲ ವಿಷಯವೂ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಬೋಧಿಸಬೇಕು. ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯದಲ್ಲೇ ಜಿಲ್ಲೆ ಮೊದಲ ಸ್ಥಾನ ಪಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎಂದು ಸೂಚಿಸಿದರು.

    ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸುವ ಕೆಲಸ ಶಿಕ್ಷಕರು ಮಾಡುವ ಮೂಲಕ ಪ್ರೋತ್ಸಾಹಿಸಬೇಕು. ಆತ್ಮವಿಶ್ವಾಸ ತುಂಬಿ, ನಕಾರಾತ್ಮಕ ಚಿಂತನೆ ಕೈಬಿಡುವಂತೆ ಮನವೊಲಿಸಿ, ಕುಂದುಕೊರತೆ ಆಲಿಸಿ ಪರಿಹರಿಸುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಿ ಎಂದು ಸಲಹೆ ನೀಡಿದರು.

    ಜಿಪಂ ಸಿಇಒ ಎಂ.ಎಸ್.ದಿವಾಕರ್ ಮಾತನಾಡಿ, ಜಿಲ್ಲೆಯ ಕೆಲ ಶಾಲೆಗಳಿಗೆ ಭೇಟಿ ನೀಡಿದ ವೇಳೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದು ಕಂಡುಬಂದಿದೆ. ಇದಕ್ಕೆ ಗ್ರಾಮೀಣ ಪ್ರದೇಶಗಳಲ್ಲಿನ ಬಹುತೇಕರು ತಮ್ಮ ಮಕ್ಕಳು ಇಂಗ್ಲೀಷ್ ಕಲಿಯಲಿ ಎನ್ನುವ ಆಸೆಯಿಂದ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇದು ನೋವಿನ ಸಂಗತಿ ಎಂದರು.

    ಸರ್ಕಾರ ಮಕ್ಕಳಿಗೆ ಎಲ್ಲ ರೀತಿಯ ಸವಲತ್ತು ಒದಗಿಸುತ್ತಿದೆ. ಇದನ್ನು ಅರಿತು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸಂಖ್ಯೆ ಹೆಚ್ಚಾಗಲು ಆಂಗ್ಲ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

    ಡಿಡಿಪಿಐ ರವಿಶಂಕರ ರೆಡ್ಡಿ, ಸಿಟಿಇ ಪದನಿಮಿತ್ತ ಸಹ ನಿರ್ದೇಶಕ ಮಂಜುನಾಥ್, ಬಿಇಒ ತಿಪ್ಪೇಸ್ವಾಮಿ, ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ, ಶಿಕ್ಷಣಾಧಿಕಾರಿ ಮಂಜುನಾಥಸ್ವಾಮಿ, ಸಂಪನ್ಮೂಲ ವ್ಯಕ್ತಿ ಕಿಶೋರ್‌ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts