More

  ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿ

  ಮೈಸೂರು: ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

  ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯಿಂದ ಬುಧವಾರ ನಗರದ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದ್ದ ಅಸಂಘಟಿತ ಮಹಿಳಾ ಕಾರ್ಮಿಕರ ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

  ರಾಜೀವ್‌ಗಾಂಧಿ ಪ್ರಧಾನಿಯಾಗಿದ್ದಾಗ ಸ್ಥಳೀಯ ಸಂಸ್ಥೆಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಲು ಸಂವಿಧಾನಕ್ಕೆ ತಿದ್ದುಪಡಿ ಮಾಡಿದರು. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ರಾಜಕೀಯಕ್ಕೆ ಬರಲು ಸಾಧ್ಯವಾಯಿತು. ಸೋನಿಯಾ ಅವರ ನಿರ್ದೇಶನದ ಮೇರೆಗೆ ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ವಿಧಾನಸಭೆ, ಲೋಕಸಭೆಯಲ್ಲಿ ಶೇ.33 ರಷ್ಟು ಮೀಸಲಾತಿ ಜಾರಿಗೆ ಪ್ರಯತ್ನಪಟ್ಟಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ ಎಂದರು.

  ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯವರು ಮಹಿಳೆಯರಿಗಾಗಿ ಮಹತ್ವವಾದ ಯಾವುದೇ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಪೌರತ್ವ ತಿದ್ದುಪಡಿ ಮಾಡಲು ತೋರಿರುವ ಉತ್ಸಾಹವನ್ನು ಬಿಜೆಪಿಯವರು ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಲು ತೋರಲಿ ಎಂದು ಸವಾಲು ಹಾಕಿದರು.

  ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದ ನಮ್ಮ ಸರ್ಕಾರ ಪ್ರತಿಯೊಬ್ಬರಿಗೆ 7 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುತ್ತಿತ್ತು. ಈಗ ಬಿಜೆಪಿ ಸರ್ಕಾರ ಅಕ್ಕಿಯ ಪ್ರಮಾಣವನ್ನು 5 ಕೆ.ಜಿ.ಗೆ ಇಳಿಸಿದೆ. ಜತೆಗೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಆರು ವರ್ಷಗಳಾಗಿದ್ದರೂ ಹೆಣ್ಣು ಮಕ್ಕಳಿಗೆ ನಿರ್ದಿಷ್ಟವಾದ ಯಾವುದೇ ಕಾರ್ಯಕ್ರಮ ಕೊಟ್ಟಿಲ್ಲ ಎಂದು ಆರೋಪಿಸಿದರು.

  ಆದರೂ ಬಿಜೆಪಿಯವರು ಮನೆ ಮನೆಗೆ ಹೋಗಿ ಸುಳ್ಳು ಹೇಳುತ್ತಾರೆ. ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳಿ ಸತ್ಯವನ್ನು ಹೇಳಿ ಎಂದರು.
  ಇಂದಿರಾಗಾಂಧಿ ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿದ್ದರಿಂದ ಬಡವರು ಬ್ಯಾಂಕ್‌ಗಳ ಮೆಟ್ಟಿಲು ಹತ್ತಿ ಸಾಲ ಸೌಲಭ್ಯ ಪಡೆಯುವಂತಾಗಿತ್ತು. ಆದರೆ ನರೇಂದ್ರಮೋದಿ ಬ್ಯಾಂಕ್‌ಗಳ ವಿಲೀನ, ನೋಟು ಅಮಾನ್ಯೀಕರಣ ಮಾಡುವ ಮೂಲಕ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ. ಆರ್ಥಿಕ ಹಿಂಜರಿತದಿಂದ ಬ್ಯಾಂಕ್‌ಗಳೂ ಸಂಕಷ್ಟಕ್ಕೆ ಸಿಲುಕಿದ್ದು, ಬಡವರಿಗೆ ಸಾಲ ದೊರೆಯದಂತಾಗಿದೆ ಎಂದು ಟೀಕಿಸಿದರು.
  ನೋಟು ಅಮಾನ್ಯೀಕರಣದಿಂದ ದೇಶದ ಆರ್ಥಿಕ ವ್ಯವಸ್ಥೆ ಹಾಳಾಗಿದೆ. ಜಿಎಸ್‌ಟಿ ಜಾರಿಯಿಂದ ಕೈಗಾರಿಕೆಗಳು ನಾಶವಾಗುತ್ತಿದೆ. ಜಿಡಿಪಿ ಪಾತಾಳಕ್ಕೆ ಹೋಗುತ್ತಿದ್ದು, ಯುವಜನರಿಗೆ, ಮಹಿಳೆಯರಿಗೆ ಉದ್ಯೋಗ ಕೊಡುವುದಿರಲಿ, ಇರುವ ಉದ್ಯೋಗಗಳೇ ಕಡಿತವಾಗುತ್ತಿದೆ. ಈ ಎಲ್ಲ ವೈಫಲ್ಯವನ್ನು ಮುಚ್ಚಿಕೊಂಡು ಜನರ ಗಮನ ಬೇರೆಡೆ ಸೆಳೆಯಲು ಸಿಎಎ, ಎನ್‌ಆರ್‌ಸಿ ಜಾರಿಗೆ ತಂದಿದೆ. ಸಿಎಎ ಜಾರಿ ಹೆಸರಲ್ಲಿ ದೇಶದ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.

  ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರ ಜಾರಿಗೆ ತರುವ ಅನೇಕ ಕಾರ್ಯಕ್ರಮಗಳಲ್ಲಿ ರಾಜ್ಯದ ಪಾಲೂ ಇರುತ್ತೆ. ಆದರೆ ಸಂಪೂರ್ಣ ಕ್ರೆಡಿಟ್‌ಅನ್ನು ಪ್ರಧಾನಿ ನರೇಂದ್ರ ಮೋದಿ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
  ನಾನು ಅಧಿಕಾರದಲ್ಲಿ ಇದ್ದಾಗ ಹೆಣ್ಣು ಮಕ್ಕಳಿಗೆ ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ಉಚಿತ ಶಿಕ್ಷಣ ನೀಡುವ ಘೋಷಣೆ ಮಾಡಿದ್ದೆ. ಆದರೆ, ಎಚ್.ಡಿ.ಕುಮಾರಸ್ವಾಮಿ ಆ ಕಾರ್ಯಕ್ರಮವನ್ನು ಜಾರಿ ಮಾಡಲಿಲ್ಲ. ಈಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅದನ್ನು ಕಸದ ಬುಟ್ಟಿಗೆ ಹಾಕಿದ್ದಾರೆ ಎಂದು ಟೀಕಿಸಿದರು.

  ಆದರೂ ಬಿಜೆಪಿಯವರು ಸುಳ್ಳನ್ನೇ ಸತ್ಯವೆಂದು ಜನರನ್ನು ನಂಬಿಸಲು ಮನೆ, ಮನೆಗೆ ತೆರಳಿ ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆ ಅಗತ್ಯ. ಬಹಳ ಜನ ಹೆಣ್ಣು ಮಕ್ಕಳು ದೇವರನ್ನು ನಂಬಿ ಭಯ, ಭಕ್ತಿ ಪ್ರದರ್ಶಿಸುತ್ತಾರೆ. ಇದನ್ನೇ ಬಿಜೆಪಿಯವರು ಲಾಭ ಮಾಡಿಕೊಂಡು ಜನರನ್ನು ಸೆಳೆಯುತ್ತಿದ್ದಾರೆ. ದೇವರನ್ನು ಪೂಜಿಸಿ. ಆದರೆ, ಪುರೋಹಿತಶಾಹಿ ಮೌಢ್ಯಾಚರಣೆ ಮಾಡಬೇಡಿ ಎಂದು ಸಲಹೆ ನೀಡಿದರು.
  ಕಾಂಗ್ರೆಸ್‌ನ ರಾಷ್ಟ್ರೀಯ ಮಹಿಳಾ ಘಟಕ ಅಧ್ಯಕ್ಷೆ ಸುಶ್ಮಿತಾ ದೇವ್ ಮಾತನಾಡಿ, ದೇಶದ ಶೇ.65ರಷ್ಟು ಮಹಿಳೆಯರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಿದ್ದು, ಸಾಮಾನ್ಯ ಮಹಿಳೆಯರು ಜೀವನ ನಡೆಸುವುದು ದುಸ್ತರವಾಗಿದೆ ಎಂದು ಟೀಕಿಸಿದರು.

  ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿಸಬೇಕು. ಆಗ ಪಕ್ಷದ ಸಂಘಟನೆ ಬಲಗೊಂಡು ಅಧಿಕಾರಕ್ಕೆ ಬರಲು ನೆರವಾಗುತ್ತದೆ ಎಂದರು.

  ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಮಾತನಾಡಿ, ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಹೆಣ್ಣು ಮಕ್ಕಳಿಗೆ ಆರೋಗ್ಯ, ಕಾನೂನು ಮತ್ತು ಕೌಶಲದ ಬಗ್ಗೆ ಅರಿವು ಮೂಡಿಸುವ ಈ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲೂ ಆಯೋಜಿಸಲಾಗುವುದು ಎಂದು ಹೇಳಿದರು.

  ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಂಸದ ಆರ್.ಧ್ರುವನಾರಾಯಣ, ಶಾಸಕರಾದ ಎಚ್.ಪಿ.ಮಂಜುನಾಥ್, ಶಾಸಕಿ ಸೌಮ್ಯಾರೆಡ್ಡಿ, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ಕಳಲೆ ಕೇಶವಮೂರ್ತಿ, ಜಿ.ಪಂ. ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಮಹಿಳಾ ಕಾಂಗ್ರೆಸ್ ಮುಖಂಡರಾದ ಜೆನಿತ್ ಡಿಸೋಜಾ, ಚಮನ್ ಫರ್ಜಾನ್, ಶಿಜು ಫರ್ನಾಂಡಿಸ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts