More

    ಶ್ರೀ ಹನುಮಂತ ದೇವಾಲಯದ ಜಾಗ ಅತಿಕ್ರಮಣ

    ಚಿಕ್ಕಮಗಳೂರು: ನಗರದ ಹೊರವಲಯದ ಶಾಂತಿನಗರದ (ಕಲ್ದೊಡ್ಡಿ) ಶ್ರೀ ಹನುಮಂತ ದೇವರ ಜಾಗವನ್ನು ಅತಿಕ್ರಮಣ ಮಾಡಿ ನಿವೇಶನವಾಗಿ ಪರಿವರ್ತಿಸಲಾಗುತ್ತಿದ್ದು, ಕೂಡಲೇ ಈ ಜಾಗ ತೆರವುಗೊಳಿಸಬೇಕು ಎಂದು ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಆರ್.ರಾಜು ಒತ್ತಾಯಿಸಿದರು.
    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದ ಸರ್ವೇ ನಂ.23ರಲ್ಲಿ 1 ಎಕರೆ 2 ಗುಂಟೆ ಜಾಗ ಹನುಮಂತ ದೇವರಿಗೆ ಸಂಬಂಧಿಸಿದೆ. ಆದರೆ ಆ ಜಾಗವನ್ನು ಅಪರಿಚಿತ ಭೂಗಳ್ಳರು ಅತಿಕ್ರಮಣ ಮಾಡಿದ್ದಾರೆ. ಸರ್ವೇ ಅಧಿಕಾರಿಗಳು ಸರ್ವೇ ಮಾಡಿ ಗಡಿ ಗುರುತಿಸಿದ ನಂತರ ಕಾನೂನು ಬಾಹಿರವಾಗಿ ಆ ಜಾಗವನ್ನು ಸ್ವಚ್ಛ ಮಾಡಿ ನಿವೇಶನವಾಗಿ ಪರಿವರ್ತಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.
    ಪ್ರಭಾವಿ ರಾಜಕಾರಣಿಯೊಬ್ಬರ ಸಂಬಂಧಿಕರು ದೇವಾಲಯದ ಜಾಗ ಅತಿಕ್ರಮಣ ಮಾಡಿದ್ದಾರೆ. ಈ ಬಗ್ಗೆ ಸಂಬಂಧಿಸಿದವರ ವಿರುದ್ಧ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
    ಕೂಡಲೇ ಲೇಔಟ್ ಕಾಮಗಾರಿ ರದ್ದುಮಾಡಿ ಪರಿಶಿಷ್ಟ ಜಾತಿ ನಿವೇಶನ ರಹಿತರಿಗೆ ನಿವೇಶನಗಳನ್ನು ವಿತರಿಸಬೇಕು. ಇದೇ ಸರ್ವೇ ನಂಬರ್‌ನಲ್ಲಿ ಕಸಕನಾಯಕನಹಟ್ಟಿ ಗ್ರಾಮ ಇರುವುದು ದಾಖಲೆಗಳಲ್ಲಿ ನಮೂದಾಗಿದೆ. ಮಜರೆ ಗ್ರಾಮಠಾಣಾ ಜಾಗವೆಂದು ಉಲ್ಲೇಖವಾಗಿದೆ. ಇದೂ ಸಹ ಭೂಗಳ್ಳರ ಪಾಲಾಗಿದ್ದು, ಕೂಡಲೇ ಎಲ್ಲ ಒತ್ತುವರಿ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
    ಈ ಜಾಗ ತೆರವು ಮಾಡಿ ಇದೇ ಜಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರೌಢಶಾಲೆ ಮತ್ತು ಉಪ ಅಂಚೆ ಕಚೇರಿ ನಿರ್ಮಿಸಬೇಕು. ವಿಳಂಬ ಮಾಡಿದರೆ ಸಂಬಂಧಿಸಿದವರ ವಿರುದ್ಧ ನ್ಯಾಯಾಲಯದಲ್ಲಿ ಧಾವೆ ಹೂಡುವುದಾಗಿ ಎಚ್ಚರಿಕೆ ನೀಡಿದರು.
    ಒಂದೇ ಮಾತರಂ ಟ್ರಸ್ಟ್‌ನ ಪ್ರೀತೇಶ್, ಗಿರೀಶ್, ವಿನುತಾ, ಗೋವಿಂದ ಶೆಟ್ಟಿ, ಪುಟ್ಟಸ್ವಾಮಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts