More

    ಮೂಡಿಗೆರೆ ಗ್ರಾಮಠಾಣಾ ಜಾಗ ಒತ್ತುವರಿ

    ಚಿಕ್ಕಮಗಳೂರು: ಮೂಡಿಗೆರೆ ಪಟ್ಟಣದಲ್ಲಿ ಗ್ರಾಮಠಾಣಾ ಜಾಗ ಕಬಳಿಕೆ ಮಾಡಿರುವ ಬಗ್ಗೆ ಸೂಕ್ತ ದಾಖಲೆ ನೀಡಿದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ರೈತರ ಸಂಘದಿಂದ ಹೋರಾಟ ರೂಪಿಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಉಪಾಧ್ಯಕ್ಷ ಎಂ.ಮಹೇಶ್ ತಿಳಿಸಿದರು.

    ನಕಲಿ ದಾಖಲೆ ಸೃಷ್ಟಿಸಿ ಮೂಡಿಗೆರೆ ಗ್ರಾಮಠಾಣಾ ಜಾಗವನ್ನು ಮಂಚೇಗೌಡ ಎಂಬುವರು ಒತ್ತುವರಿ ಮಾಡಿದ್ದಾರೆ. ಈ ಕುರಿತ ಎಲ್ಲ ದಾಖಲೆಗಳನ್ನು ಡಿಸಿ, ಎಸ್ಪಿ ಸೇರಿ ಸಂಬಂಧಿಸಿದ ಅಧಿಕಾರಿಗಳಿಗೆ ನೀಡಿದರೂ ಈವರೆಗೆ ಕ್ರಮ ಕೈಗೊಂಡಿಲ್ಲ. ಜಾಗ ಕಬಳಿಕೆ ಮಾಡಿರುವುದನ್ನು ಪ್ರಶ್ನಿಸುವ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಅಧಿಕಾರಿಗಳು ಭ್ರಷ್ಟರ ಪರ ನಿಂತಿದ್ದಾರೆ. ಹೀಗಾಗಿ ಅಧಿಕಾರಿಗಳ ವಿರುದ್ಧವೇ ಹೋರಾಟ ರೂಪಿಸಲು ನಿರ್ಧರಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
    ಮೂಡಿಗೆರೆ ತಾಲೂಕಿನಲ್ಲಿ 1984ರಲ್ಲಿ ದಲಿತ ಕುಟುಂಬಗಳಿಗೆ ಮಂಜೂರಾಗಿರುವ ಜಾಗವನ್ನೂ ಬಲಾಢ್ಯರು ಕಬಳಿಸಿದ್ದಾರೆ. ಹೀಗಾಗಿ ದಲಿತ ಕುಟುಂಬಗಳು ಕೂಲಿ ಮಾಡುವ ಸ್ಥಿತಿ ಬಂದಿದೆ. ಕೂಡಲೇ ಸರ್ಕಾರಿ ಜಾಗ ಹಾಗೂ ದಲಿತರ ಜಾಗ ಕಬಳಿಕೆ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
    ಸುದ್ದಿಗೋಷ್ಠಿಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ದುಗ್ಗಪ್ಪ ಗೌಡ, ಪ್ರಮುಖರಾದ ಮಂಜೇಗೌಡ, ನಿರಂಜನಮೂರ್ತಿ, ತುಳಸೇಗೌಡ ಇತರರಿದ್ದರು.
    ಹಣ ಕೇಳಿದ್ದಕ್ಕೆ ಆರೋಪ: ರೈತ ಸಂಘದ ದುಗ್ಗಪ್ಪ ಗೌಡ ಅವರೇ ನನ್ನ ಜಾಗವನ್ನು ಒತ್ತುವರಿ ಮಾಡಿ ಕಟ್ಟಡ ಕಟ್ಟಿದ್ದಾರೆ. ಒತ್ತುವರಿ ಮಾಡಿದ ಜಾಗ ತೆರವು ಮಾಡಿ ಎಂದಿದ್ದಕ್ಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಮೂಡಿಗೆರೆಯ ಮಂಚೇಗೌಡ ದೂರಿದ್ದಾರೆ. ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ವಿಷಯಕ್ಕೆ ಸಂಬಂಧಿಸಿ ಈ ಹಿಂದೆ ಪಂಚಾಯಿತಿಯೂ ಆಗಿತ್ತು. ಆಗ ಒತ್ತುವರಿ ಮಾಡಿದ ಜಾಗವನ್ನು ನಾನೇ ಖರೀದಿ ಮಾಡುತ್ತೇನೆ ಎಂದು ದುಗ್ಗಪ್ಪ ಗೌಡ ಒಪ್ಪಿದ್ದರು. ಆದರೆ ಈಗ ಹಣ ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಜಾಗ ಒತ್ತುವರಿ ಮಾಡಿದ್ದನ್ನು ಪ್ರಶ್ನಿಸಿದ್ದರಿಂದಲೇ ನಮ್ಮ ಮೇಲೆ ಉದ್ದೇಶಪೂರ್ವಕವಾಗಿ ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts