More

    ಮೋದಿ ಆಳ್ವಿಕೆಯಲ್ಲಿ ಮಹಿಳೆಯರ ಸಬಲೀಕರಣ

    ಶಿವಮೊಗ್ಗ: ದೇಶದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ ಬಡತನ ಪ್ರೀತಿಸುವ ಕೆಲಸ ಮಾಡಿದೆಯೇ ವಿನಃ ಬಡತನ ನಿರ್ಮೂಲನೆಗೆ ಯಾವತ್ತೂ ಕೆಲಸ ಮಾಡಲಿಲ್ಲ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಕಿಡಿಕಾರಿದರು.

    ನಗರದ ಗೋಪಾಲಗೌಡ ಬಡಾವಣೆಯ ಬಿಜೆಪಿ ಶಿವಮೊಗ್ಗ ನಗರ ಮಹಿಳಾ ಮೋರ್ಚಾದಿಂದ ಶನಿವಾರ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ 18 ವಾರ್ಡ್‌ಗಳ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ದೇಶ, ಗಡಿ, ಮಹಿಳೆಯರ ರಕ್ಷಣೆಗೆ ಒತ್ತು ನೀಡಲಿಲ್ಲ. ಆದರೆ ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಇಡೀ ದೇಶದ ಚಿತ್ರಣವನ್ನೇ ಬದಲಿಸಿದ್ದಾರೆ ಎಂದರು.
    ಮಹಿಳೆ ಎಂದರೆ ಮನೆಗೆ ಸೀಮಿತ. ನಾಲ್ಕು ಗೋಡೆ ನಡುವೆ ಮಾತ್ರ ಅವಳ ಜೀವನ ಎಂಬಂತಹ ಕಾಲವೊಂದಿತ್ತು. ಆದರೆ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶೇ.33ರಷ್ಟು ಮೀಸಲಾತಿ ನೀಡಿದೆ. ಅದರ ಪರಿಣಾಮ ಮಹಿಳೆ ರಾಜಕೀಯ ಸೇರಿ ಎಲ್ಲ ರಂಗಗಳಲ್ಲೂ ತೊಡಗಿಸಿಕೊಳ್ಳುವಂತಾಗಿದೆ ಎಂದು ಹೇಳಿದರು.
    ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು ಇಡೀ ಪ್ರಪಂಚದಲ್ಲಿ ಪ್ರಜ್ಞಾವಂತ ಮತದಾರರನ್ನು ಹೊಂದಿರುವ ಏಕೈಕ ದೇಶ ಭಾರತವಾಗಿದೆ. ಅದರಲ್ಲೂ ಮಹಿಳೆಯರು ಪುರುಷರಿಗಿಂತ ಹೆಚ್ಚು ಪ್ರಜ್ಞಾವಂತರಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದು ಕೇವಲ ಸಂಸತ್ ಸ್ಥಾನಕ್ಕಾಗಿ ನಡೆಯುತ್ತಿರುವ ಚುನಾವಣೆಯಲ್ಲ. ನಾಡು, ನುಡಿ, ಭಾಷೆ, ಗಡಿ ರಕ್ಷಣೆಗಾಗಿ ನಡೆಯುತ್ತಿದ್ದು ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಮೂಲಕ ದೇಶಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಾಡಬೇಕಿದೆ ಎಂದು ಮನವಿ ಮಾಡಿದರು.
    ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಒಂದು ಕಾಲದಲ್ಲಿ ಬಿಜೆಪಿ ಕಾರ್ಯಕರ್ತರ ಮನೆ ಹುಡುಕಿ ಹೋಗುವ ಸ್ಥಿತಿ ಇತ್ತು. ಕಾಂಗ್ರೆಸ್‌ನ ಗೂಂಡಾಗಳು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವ ಕಾಲವಿತ್ತು. ಇದೀಗ ಚಿತ್ರಣ ಬದಲಾಗಿದೆ. ಕೋಟ್ಯಂತರ ಕಾರ್ಯಕರ್ತರು ಪಕ್ಷದಲ್ಲಿದ್ದು ಕಾಂಗ್ರೆಸ್‌ನ ದಬ್ಬಾಳಿಕೆಗೆ ಉತ್ತರ ಕೊಡಲಾಗಿದೆ ಎಂದರು. ಏ.18ರಂದು ನಾಮಪತ್ರ ಸಲ್ಲಿಕೆ ವೇಳೆ ಗಾಂಧಿಬಜಾರ್, ನೆಹರು ರಸ್ತೆ, ಡಿಸಿ ಕಚೇರಿ ವೃತ್ತ ಮಹಿಳೆಯರಿಂದ ತುಂಬಿರಬೇಕು. ಮಹಿಳೆಯರನ್ನು ಕರೆತರುವ ಕೆಲಸ ಮಹಿಳಾ ಕಾರ್ಯಕರ್ತರದ್ದು ಎಂದರು.
    ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಗಾಯತ್ರಿದೇವಿ ಮಾತನಾಡಿ, ಇತಿಹಾಸದಲ್ಲಿ ಒಬ್ಬ ವ್ಯಕ್ತಿಗೊಸ್ಕರ ಚುನಾವಣೆ ಆಗುತ್ತಿದೆ. ಅವರು ವಿಶ್ವನಾಯಕ ನರೇಂದ್ರ ಮೋದಿ ಆಗಿದ್ದಾರೆ. ಬಿ.ವೈ.ರಾಘವೇಂದ್ರ ಅವರ ನಾಲ್ಕನೇ ಚುನಾವಣೆ ಇದಾಗಿದ್ದು ರಾಘಣ್ಣ ನಾಲ್ಕನೇ ಬಾರಿ ಲೋಕಸಭೆಗೆ ಆಯ್ಕೆಯಾಗಬೇಕು. ಕೇಂದ್ರದ ಮಂತ್ರಿ ಆಗಬೇಕು. ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಹೇಳಿದರು.
    ಮಾಜಿ ಎಂಎಲ್ಸಿ ಎಂ.ಬಿ.ಭಾನುಪ್ರಕಾಶ್, ಮಲ್ಲಪ್ಪ, ಎನ್.ಜೆ.ನಾಗರಾಜ್, ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ರಶ್ಮಿ ಶ್ರೀನಿವಾಸ್, ಪ್ರಮುಖರಾದ ಶಾಂತಾ ಸುರೇಂದ್ರ, ಎಸ್.ಜ್ಞಾನೇಶ್ವರ್, ಸುರೇಖಾ ಮುರಳೀಧರ್, ವಿಶ್ವನಾಥ, ಎನ್.ಕೆ.ಜಗದೀಶ್, ಯಶೋದಾ, ಲತಾ ಶ್ರೀನಿವಾಸ್, ಸುಧಾಮಣಿ, ಮಹಾಲಕ್ಷ್ಮೀ ಉಪಸ್ಥಿತರಿದ್ದರು.

    ನಾಮಪತ್ರ ಸಲ್ಲಿಕೆಗೆ ಬಿಎಸ್‌ವೈ, ಎಚ್‌ಡಿಕೆ
    ಏ.18ರಂದು ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲಾಗುವುದು. ಅಂದು ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಸೇರಿ ಹಲವರು ಪಾಲ್ಗೊಳ್ಳುವರು ಎಂದು ಬಿ.ವೈ.ರಾಘವೇಂದ್ರ ಹೇಳಿದರು. ಅಂದು ಬೆಳಗ್ಗೆ 9.30ಕ್ಕೆ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಸಹಸ್ರಾರು ಕಾರ್ಯಕರ್ತರು, ಬೆಂಬಲಿಗರೊಡಗೂಡಿ ಮೆರವಣಿಗೆ ಆರಂಭಗೊಳ್ಳಲಿದೆ. ಗಾಂಧಿಬಜಾರ್, ಶಿವಪ್ಪ ನಾಯಕ ವೃತ್ತ, ನೆಹರು ರಸ್ತೆ, ಸೀನಪ್ಪ ಶೆಟ್ಟಿ ವೃತ್ತ, ಮಹಾವೀರ ವೃತ್ತದ ಮೂಲಕ ಡಿಸಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts