More

    ಸಶಕ್ತ ಭಾರತಕ್ಕಾಗಿ ಮೋದಿ ಪ್ರಯತ್ನ

    ಚಿಕ್ಕೋಡಿ: ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಆರು ವರ್ಷಗಳ ಅವಧಿಯಲ್ಲಿ ದೇಶದ ಜನಸಾಮಾನ್ಯನಿಗೂ ತಲುಪುವ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಜಾತಿ-ಮತ, ಪಕ್ಷ ಭೇದವಿಲ್ಲದೆ ಸಮಾಜದಲ್ಲಿ ಸಮಾನತೆ ನೆಲೆಯೂರುವಂತೆ ಮಾಡಿದ್ದಾರೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

    ಯಕ್ಸಂಬಾ ಪಟ್ಟಣದ ಜೊಲ್ಲೆ ಉದ್ಯೋಗ ಸಮೂಹದ ಆಡಳಿತ ಕಚೇರಿಯ ಸಭಾಭವನದಲ್ಲಿ ಕೇಂದ್ರ ಸರ್ಕಾರ ಎರಡನೇ ಅವಧಿಯ ಮೊದಲ ವರ್ಷ ಪೂರೈಸಿದ ನಿಮಿತ್ತ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

    ಕರೊನಾ ಹಾಗೂ ಲಾಕ್‌ಡೌನ್‌ನಿಂದ ಜನರಿಗೆ ತೊಂದರೆಯಾಗದಿರಲು ಪ್ರಧಾನಿ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಸಶಕ್ತ ಭಾರತ ನಿರ್ಮಾಣಕ್ಕೆ ವೇದಿಕೆ ಒದಗಿಸಿದ್ದಾರೆ ಎಂದರು. ಕೋವಿಡ್-19ನಿಂದ ದೇಶದ ಆರ್ಥಿಕತೆಯ ಮೇಲೆ ಆದ ದುಷ್ಪಾರಿಣಾಮ ನಿವಾರಿಸಲು ಕೇಂದ್ರ ಸರ್ಕಾರ ಆತ್ಮನಿರ್ಭರ ಭಾರತ ತತ್ತ್ವದಡಿ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಸೇರಿ ಎರಡು ಮಾದರಿಯ ವಿಶೇಷ ಪ್ಯಾಕೇಜ್ ಘೋಷಿಸಿದೆ. ಲಾಕ್‌ಡೌನ್ ಘೋಷಣೆಯಾದ ಬಳಿಕ ಕರೊನಾ ನಿರ್ವಹಣೆಗಾಗಿ 1.5 ಲಕ್ಷ ಕೋಟಿ ರೂ. ವೆಚ್ಚದಲ್ಲಿ ದೇಶದ 80 ಕೋಟಿ ಭಾರತೀಯರಿಗೆ 5 ಕೆಜಿ ಅಕ್ಕಿ, 8.2 ಕೋಟಿ ಕುಟುಂಬಗಳಿಗೆ 13 ಸಾವಿರ ಕೋಟಿ ರೂ. ವೆಚ್ಚದಲ್ಲಿ 3 ತಿಂಗಳು ಉಚಿತ ಸಿಲಿಂಡರ್ ವಿತರಣೆ, ಜನಧನ ಖಾತೆಗಳಿಗೆ 30 ಸಾವಿರ ಕೋಟಿ ರೂ., ಹಿರಿಯ ನಾಗರಿಕರು, ಅಂಗವಿಕಲರು, ವಿಧವೆಯರ ಮೂರು ತಿಂಗಳ ಮಾಸಾಶನಕ್ಕಾಗಿ 3 ಸಾವಿರ ಕೋಟಿ ರೂ., ಕಿಸಾನ್ ಸಮ್ಮಾನ್ ಯೋಜನೆಯಡಿ 8.7 ಕೋಟಿ ರೈತರಿಗೆ 17.890 ಕೋಟಿ ರೂ., ಆತ್ಮ ನಿರ್ಭರ ಭಾರತ ಅನುಷ್ಠಾನಕ್ಕಾಗಿ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಮೀಸಲಿಡುವ ಮೂಲಕ ಪ್ರಧಾನ ಮಂತ್ರಿಯವರು ಭಾರತ ದೇಶವನ್ನು ಸ್ವಾವಲಂಬಿಯನ್ನಾಗಿಸುತ್ತಿದ್ದಾರೆ ಎಂದು ಹೇಳಿದರು. 70.32 ಲಕ್ಷ ಹೊಸ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಲಾಗಿದ್ದು, ಜೂನ್ 30 ರೊಳಗೆ ಆತ್ಮನಿರ್ಭರ ಭಾರತ ವಿಶೇಷ ಪ್ಯಾಕೇಜ್‌ನಡಿ ಕಡಿಮೆ ದರದಲ್ಲಿ 62.780 ಕೋಟಿ ರೂ. ಸಾಲ ನೀಡಲಾಗಿದೆ ಎಂದರು. ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ. ರಾಜೇಶ ನೆರ್ಲಿ, ಬಸವಜ್ಯೋತಿ ಯುಥ್ ಫೌಂಡೇಷನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts