More

    ಉದ್ಯೋಗಸ್ಥ ಮಹಿಳೆಗೆ ಹಾಸ್ಟೆಲ್ ಅನುಕೂಲ

    ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶೇಷ ಪ್ರಯತ್ನದಿಂದ ಬೆಳಗಾವಿಗೆ 3 ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯ ಮಂಜೂರಾಗಿದ್ದು, ಅಲ್ಲಿನ ಸಿಬ್ಬಂದಿಗೆ ಗುರುವಾರ ತಾತ್ಕಾಲಿಕ ನೇಮಕಾತಿ ಆದೇಶ ಪತ್ರ ವಿತರಿಸಲಾಯಿತು.ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಉದ್ಯೋಗ ಕ್ಷೇತ್ರದಲ್ಲಿ ಆಗುತ್ತಿರುವ ಪ್ರಗತಿಪರ ಬದಲಾವಣೆಯಿಂದಾಗಿ ಹೆಚ್ಚು ಮಹಿಳೆಯರು ಉದ್ಯೋಗ ಅರಸಿ ಗ್ರಾಮೀಣ ಪ್ರದೇಶಗಳಿಂದ ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ವಲಸೆ ಬರುತ್ತಿದ್ದು, ಅಂತಹ ಮಹಿಳೆಯರಿಗೆ ಸುರಕ್ಷಿತ ಹಾಗೂ ಯೋಗ್ಯ ವಸತಿ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಉದ್ಯೋಗಸ್ಥ ಮಹಿಳೆಯರ ವಸತಿ ಗೃಹ ಯೋಜನೆ ಅನುಷ್ಠಾನಗೊಳಿಸಿದೆ.

    ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಆಯಾ ಜಿಲ್ಲೆಗಳ ಕಾರ್ಖಾನೆ, ಹೊಟೇಲ್, ಉದ್ದಿಮೆ, ಆಸ್ಪತ್ರೆ, ಸಣ್ಣ ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಂತಹ ಮಹಿಳೆಯರಿಗೆ ಅನುಕೂಲವಾಗುವಂತೆ ಜಿಲ್ಲೆಗೆ 3 ವಸತಿ ನಿಲಯಗಳನ್ನು ಸರ್ಕಾರ ಮಂಜೂರು ಮಾಡಿದೆ ಎಂದು ಹೇಳಿದರು. ಒಂಟಿ ಉದ್ಯೋಗಸ್ಥ ಮಹಿಳೆ, ವಿಧವೆ, ವಿಚ್ಛೇದಿತೆ, ವಿವಾಹಿತ ಉದ್ಯೋಗಸ್ಥ ಮಹಿಳೆ ಕೂಡ ಸೌಲಭ್ಯ ಪಡೆಯಬಹುದು. ಆದರೆ, ಅವರ ಕುಟುಂಬವು ಅದೇ ನಗರದಲ್ಲಿ ವಾಸಿಸಬಾರದು. ಅಂಗವಿಕಲ ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಉದ್ಯೋಗಸ್ಥ ಮಹಿಳೆಯರು, ಮಹಿಳಾ ಕಾರ್ಮಿಕರಿಗೆ ಅವಕಾಶವಿರುತ್ತದೆ. ಕಡಿಮೆ ಆದಾಯವುಳ್ಳ ಉದ್ಯೋಗಸ್ಥ ಮಹಿಳೆಯರಿಗೆ ಅವಕಾಶವಿರುತ್ತದೆ.

    18 ವರ್ಷದ ಒಳಗಿನ ಹೆಣ್ಣು ಮಕ್ಕಳು ಹಾಗೂ ಉದ್ಯೋಗಸ್ಥ ಮಹಿಳೆಯರು 5 ವರ್ಷದ ಒಳಗಿನ ಮಕ್ಕಳೊಂದಿಗೆ ವಸತಿ ನಿಲಯದಲ್ಲಿ ವಾಸ್ತವ್ಯ ಪಡೆಯಬಹುದು. ಉದ್ಯೋಗಸ್ಥ ಮಹಿಳೆಯರು ಸರ್ಕಾರದಿಂದ ನಡೆಯುವ ಶಿಶು ಪಾಲನಾ ಕೇಂದ್ರಗಳ ಸೌಲಭ್ಯ ಪಡೆಯಬಹುದು. ಬೆಳಗಾವಿ ಜಿಲ್ಲೆಯಲ್ಲಿ ಉದ್ಯಮಬಾಗ್ ಆಜಮ್‌ನಗರ, ಶಿವಬಸವ ನಗರದ ಪ್ರತಿ ವಸತಿ ನಿಲಯದಲ್ಲಿ 50 ಜನ ಉದ್ಯೋಗಸ್ಥ ಮಹಿಳೆಯರಿಗೆ ಅವಕಾಶವಿದೆ ಎಂದು ಹೆಬ್ಬಾಳ್ಕರ್ ತಿಳಿಸಿದರು. ಯುವ ಮುಖಂಡ ಮೃಣಾಲ ಹೆಬ್ಬಾಳ್ಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಂ.ನಾಗರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts