More

    ಖಾಲಿ ನಿವೇಶನಗಳ ಸ್ವಚ್ಛತೆಗೆ ತಾಕೀತು

    ರಾಣೆಬೆನ್ನೂರ: ನಗರದ ವಿವಿಧೆಡೆ ಖಾಲಿ ನಿವೇಶನ ಹೊಂದಿರುವ ಮಾಲೀಕರು ಕೂಡಲೆ ಅವುಗಳನ್ನು ಸ್ವಚ್ಛಗೊಳಿಸಿ ನಗರಸಭೆಗೆ ಸಹಕಾರ ನೀಡಬೇಕು. ಇಲ್ಲವಾದರೆ ನಗರಸಭೆಯವರು ಖಾಲಿ ನಿವೇಶನದ ಮೇಲೆ ಬೋಜಾ ಕಾಣಿಸಲಿದ್ದಾರೆ.

    ನಗರದಲ್ಲಿರುವ ಖಾಲಿ ನಿವೇಶನಗಳಲ್ಲಿ ನಿತ್ಯವೂ ಅಕ್ಕಪಕ್ಕದ ನಿವಾಸಿಗಳು ಎಸೆಯುತ್ತಿರುವ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಹಾಗೂ ಅವುಗಳಲ್ಲಿ ಬೆಳೆದ ಗಿಡಗಂಟಿಗಳನ್ನು ತೆರವುಗೊಳಿಸುವುದು ನಗರಸಭೆಗೆ ತಲೆನೋವಾಗಿ ಪರಿಣಮಿಸಿದೆ. ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮಾಲೀಕರಿಗೆ ಹಲವು ಬಾರಿ ತಿಳಿಸಿದರೂ ಪ್ರಯೋಜವಾಗಿಲ್ಲ. ಆದ್ದರಿಂದ ನಗರಸಭೆ ಅಧಿಕಾರಿಗಳು ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಖಾಲಿ ನಿವೇಶನಗಳ ಮಾಲೀಕರಿಗೆ ಬೋಜಾ ಕೂರಿಸುವ ಕ್ರಮಕ್ಕೆ ಮುಂದಾಗಲಿದ್ದಾರೆ. ಈಗಾಗಲೇ ಸಾರ್ವಜನಿಕವಾಗಿ ನೋಟಿಸ್ ನೀಡಲಾಗಿದ್ದು, ನಿವೇಶನ ಸ್ವಚ್ಛಗೊಳಿಸಿಕೊಳ್ಳಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ.

    ಬೋಜಾ ಏಕೆ…?: ನಗರಸಭೆಯಿಂದ ನಗರದಲ್ಲಿ 6 ಸಾವಿರಕ್ಕೂ ಅಧಿಕ ಖಾಲಿ ನಿವೇಶನಗಳನ್ನು ಪತ್ತೆ ಮಾಡಲಾಗಿದೆ. ಬಹುತೇಕ ನಿವೇಶನಗಳನ್ನು ಅಕ್ಕಪಕ್ಕದ ಜನತೆ ತ್ಯಾಜ್ಯ ಎಸೆಯುವ ತಿಪ್ಪೆ ಗುಂಡಿಗಳನ್ನಾಗಿ ಮಾಡಿಕೊಂಡಿದ್ದಾರೆ. ಕೆಲ ನಿವೇಶನಗಳಲ್ಲಿ ಬೃಹತ್ ಪ್ರಮಾಣದ ಗಿಡಗಂಟಿಗಳು ಬೆಳೆದು ಅರಣ್ಯ ಪ್ರದೇಶಗಳಂತೆ ಗೋಚರಿಸುತ್ತಿವೆ.

    ಇದೀಗ ನಗರಸಭೆಯಿಂದ ಈ ನಿವೇಶನಗಳನ್ನು ಸ್ವಚ್ಛಗೊಳಿಸಲು ಮುಂದಾದರೆ ಜೆಸಿಬಿ, ಕಾರ್ವಿುಕರು ಹಾಗೂ ತ್ಯಾಜ್ಯ ಸಾಗಾಟ ಸೇರಿ ಲಕ್ಷಾಂತರ ರೂ. ಖರ್ಚು ತಗಲುತ್ತದೆ. ಆದ್ದರಿಂದ ಖಾಲಿ ನಿವೇಶನ ಮಾಲೀಕರಿಗೆ ಒಂದು ತಿಂಗಳ ಕಾಲಾವಕಾಶ ನೀಡಿ ಸ್ವಚ್ಛಗೊಳಿಸಲು ಸೂಚಿಸಲಾಗಿದೆ.

    ಒಂದು ವೇಳೆ ನಿವೇಶನ ಮಾಲೀಕರು ಸ್ವಚ್ಛಗೊಳಿಸದಿದ್ದರೆ ನಗರಸಭೆಯವರೇ ಸ್ವಚ್ಛತಾ ಕಾರ್ಯ ಮಾಡುತ್ತಾರೆ. ಅದಕ್ಕೆ ತಗಲುವ ಖರ್ಚನ್ನು ಆಯಾ ನಿವೇಶನಗಳ ಮಾಲೀಕರಿಂದ ತುಂಬಿಸಿಕೊಳ್ಳಲಾಗುತ್ತದೆ. ಬಹುತೇಕ ನಿವೇಶನಗಳ ಮಾಲೀಕರು ಪರಸ್ಥಳದಲ್ಲಿ ನೆಲೆಸಿದ್ದಾರೆ. ಆದ್ದರಿಂದ ನಗರಸಭೆಯಿಂದ ಸ್ವಚ್ಛಗೊಳಿಸಿದ ಖರ್ಚನ್ನು ಆಯಾ ನಿವೇಶನ ಮಾಲೀಕರು ನೀಡುವವರೆಗೂ ಅವುಗಳ ಮೇಲೆ ಬೋಜಾ ಕೂರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

    ವಿಷಜಂತುಗಳ ಆವಾಸ ಸ್ಥಾನ

    ತ್ಯಾಜ್ಯ ಸಂಗ್ರಹಕ್ಕೆ ನಿತ್ಯವೂ ಮನೆ ಮನೆಗೆ ನಗರಸಭೆ ಕಸದ ವಾಹನಗಳು ಬರುತ್ತವೆ. ಆದರೂ, ಜನರು ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ. ಅಲ್ಲದೆ, ಗಿಡಗಂಟಿಗಳು ಬೆಳೆದ ಕಾರಣ ಹಾವು, ಚೇಳು ಸೇರಿ ಇತರ ವಿಷಜಂತುಗಳ ಆವಾಸತಾಣಗಳಾಗಿವೆ. ಹೀಗಾಗಿ ನಿವೇಶನಗಳ ಅಕ್ಕಪಕ್ಕದ ಜನತೆ ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ.

    ನಗರದಲ್ಲಿರುವ ಬಹುತೇಕ ನಿವೇಶನಗಳು ಕಸದ ತಿಪ್ಪೆಗಳಾಗಿವೆ. ಅವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅವುಗಳ ಮಾಲೀಕರ ಜವಾಬ್ದಾರಿ. ಈ ಬಗ್ಗೆ ಎಷ್ಟು ಬಾರಿ ಹೇಳಿದರೂ ಮಾಲೀಕರು ತಿಳಿದುಕೊಳ್ಳುತ್ತಿಲ್ಲ. ಆದ್ದರಿಂದ ಈ ಬಾರಿ ನಗರಸಭೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಮಾಲೀಕರು ಸ್ವಯಂ ಪ್ರೇರಣೆಯಿಂದ ಸ್ವಚ್ಛಗೊಳಿಸಿಕೊಳ್ಳದ ನಿವೇಶನಗಳನ್ನು ನಗರಸಭೆಯಿಂದ ಸ್ವಚ್ಛಗೊಳಿಸಲಾಗುವುದು. ಅದಕ್ಕೆ ತಗುಲುವ ಖರ್ಚನ್ನು ಮಾಲೀಕರಿಂದ ತುಂಬಿಸಿಕೊಳ್ಳಲಾಗುವುದು. ಅಲ್ಲಿಯವರೆಗೆ ಅವರ ನಿವೇಶನದ ಮೇಲೆ ನಗರಸಭೆ ಬೋಜಾ ಕೂರಿಸಲಾಗುವುದು.
    | ರೂಪಾ ಚಿನ್ನಿಕಟ್ಟಿ ನಗರಸಭೆ ಅಧ್ಯಕ್ಷೆ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts