More

    ವೃತ್ತಿಪರತೆ ಗುಣ ಮೈಗೂಡಿಸಿಕೊಳ್ಳಿ

    ಮೈಸೂರು: ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ವೃತ್ತಿಪರತೆ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಸರ್ಜನ್ ಡಾ.ಟಿ.ಅಮರನಾಥ್ ಸಲಹೆ ನೀಡಿದರು.


    ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕುವೆಂಪುನಗರದ ಬಿಜಿಎಸ್ ಅಂತಾರಾಷ್ಟ್ರೀಯ ಆರೋಗ್ಯ ವಿಜ್ಞಾನ ಸಂಸ್ಥೆಯ ಪದವೀಧರರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿಪರತೆ ಮುಖ್ಯವಾಗಿದೆ. ಇದರೊಂದಿಗೆ ಮಾನವೀಯತೆ, ಅಂತಃಕರಣವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದರು.


    ಶುಶ್ರೂಷಕರಾದವರು ರೋಗಿಗಳ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕು. ಅದರಿಂದ ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ತಲುಪಬಹುದಾಗಿದೆ ಎಂದರು.
    ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಶರಣಪ್ಪ ವಿ.ಹಲಸೆ ಮಾತನಾಡಿ, ಪದವಿ, ಸ್ನಾತಕೋತ್ತರ ಪದವಿ ಮುಗಿದ ನಂತರ ಕಲಿಕೆಯು ಸ್ಥಗಿತವಾಗಲ್ಲ. ಅದು ನಿರಂತರ ಪ್ರಕ್ರಿಯೆ. ನಿತ್ಯ ಅಭ್ಯಾಸ ಹಾಗೂ ಅನುಭವದಿಂದಲೇ ಕೌಶಲ ಸಿದ್ಧಿ ಸಾಧ್ಯ. ಪದವಿ ಬಳಿಕ ವೃತ್ತಿಯಲ್ಲಿ ಹೆಚ್ಚಿನ ಸಮಯ ಮೀಸಲಿಡಬೇಕು. ಜತೆಗೆ, ಜನರ ಆರೋಗ್ಯ ಕಾಪಾಡುವ ಕೆಲಸದಲ್ಲಿ ಸಕ್ರಿಯವಾಗಬೇಕು ಎಂದರು.


    ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸಮಾಜದಲ್ಲಿ ವಿಶೇಷ ಗೌರವ ಇದೆ. ಇದು ಬೇರೆ ವೃತ್ತಿಯವರಿಗೆ ಇಲ್ಲ. ರೋಗಿಗಳಿಗೆ ಆರೈಕೆ ಮಾಡುವುದರೊಂದಿಗೆ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕಾಯಕವನ್ನೂ ಶುಶ್ರೂಷಕರು ಮಾಡಬೇಕು ಎಂದರು.


    ದಿಜಿಶಾ ಜೋಸ್, ಜಿಸಮೊಲ್, ಅಪರ್ಣಾ ಉನ್ನಿಕೃಷ್ಣನ್, ಅಬಿನಾ ಅನಿಲ್, ಬಿಯಾ ಆನ್ ಥಾಮಸ್, ಮರ್ಲಿನ್ ಶಾಜಿ ಸೇರಿದಂತೆ ಸ್ನಾತಕ ವಿಭಾಗದ 57 ಹಾಗೂ ಸ್ನಾತಕೋತ್ತರ ವಿಭಾಗದ 4 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
    ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಚೆಲುವಾಂಬ ಆಸ್ಪತ್ರೆಯ ಶುಶ್ರೂಷಕ ಅಧೀಕ್ಷಕಿ ಬಿ.ಎ.ಸುಲಲಿತಾಂಗಿ, ಜಿಲ್ಲಾ ಶುಶ್ರೂಷಕ ಅಧಿಕಾರಿ ಕೆ.ಎ.ಖದೀಜಾ, ಅಪೋಲೋ ಬಿಜಿಎಸ್ ಆಸ್ಪತ್ರೆಯ ಉಪಾಧ್ಯಕ್ಷ ಎನ್.ಜಿ.ಭರತೀಶ ರೆಡ್ಡಿ, ವೈದ್ಯಕೀಯ ಅಧೀಕ್ಷಕ ಡಾ.ಅಮಾನ್ ನಾಯಕ್ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts