More

    ಎಳ್ಳಮಾವಾಸ್ಯೆ ಜಾತ್ರೆ: ಪರಶುರಾಮ ಕೊಂಡದಲ್ಲಿ ಮಿಂದೆದ್ದ ಸಹಸ್ರಾರು ಭಕ್ತರು; ಇಂದು ರಾಮೇಶ್ವರಸ್ವಾಮಿ ಭವ್ಯ ರಥೋತ್ಸವ

    ತೀರ್ಥಹಳ್ಳಿ: ಇತಿಹಾಸ ಪ್ರಸಿದ್ಧ ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಗೆ ಗುರುವಾರದಿಂದ ಚಾಲನೆ ದೊರೆತಿದ್ದು ಈ ಬಾರಿ ನಿರೀಕ್ಷೆಗೂ ಮೀರಿ ಜನ ಸೇರಿದ್ದರು. ತುಂಗಾನದಿಯಲ್ಲಿ ನಡೆದ ತೀರ್ಥಸ್ನಾನದಲ್ಲಿ ಸಹಸ್ರಾರು ಮಂದಿ ಮಿಂದು ಪುನೀತಭಾವ ತಾಳಿದರು.

    ಶ್ರೀ ರಾಮೇಶ್ವರ ದೇವರ ಉತ್ಸವ ಮೂರ್ತಿಗೆ ರಾಮಕೊಂಡದ ಬಳಿ ಪೂಜೆ ಸಲ್ಲಿಸಿದ ನಂತರ ತೀರ್ಥಸ್ನಾನಕ್ಕೆ ಚಾಲನೆ ನೀಡಲಾಯಿತು. ಮಕ್ಕಳು-ಮಹಿಳೆಯರೂ ಸೇರಿದಂತೆ ಸಹಸ್ರಾರು ಮಂದಿ ಪರಶುರಾಮ ಕೊಂಡದಲ್ಲಿ ಮಿಂದರು. ಈ ಬಾರಿ ಹೊರಗಿನಿಂದ ಬಂದ ಭಕ್ತರೇ ಅಧಿಕವಾಗಿದ್ದು ನದಿಯಲ್ಲಿ ಉದ್ದನೆಯ ಸಾಲು ನಿರ್ಮಾಣವಾಗಿತ್ತು. ಸಂಜೆಯವರೆಗೂ ತೀರ್ಥಸ್ನಾನ ಮುಂದುವರಿದಿತ್ತು.
    ಮುಜರಾಯಿ ಅಧಿಕಾರಿಯೂ ಆಗಿರುವ ತಹಸೀಲ್ದಾರ್ ಜಕ್ಕನಗೌಡರ್, ಪಪಂ ಅಧ್ಯಕ್ಷೆ ಗೀತಾ ರಮೇಶ್, ಜಾತ್ರೆ ಸಮಿತಿ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ ಸೇರಿದಂತೆ ಗಣ್ಯರು ಗುರುವಾರ ಮುಂಜಾನೆ ರಾಮೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಶುಕ್ರವಾರ ಮಧ್ಯಾಹ್ನ ರಾಮೇಶ್ವರ ಸ್ವಾಮಿಯ ಅದ್ದೂರಿ ರಥೋತ್ಸವ ನಡೆಯಲಿದೆ.
    ತೀರ್ಥಸ್ನಾನಕ್ಕೆ ಆಗಮಿಸಿದ ಸಹಸ್ರಾರು ಭಕ್ತರಿಗಾಗಿ ಈ ಬಾರಿ ಕೆಟರಿಂಗ್ ಉದ್ಯಮ ನಡೆಸುವ ರಥಬೀದಿಯ ಪ್ರಸನ್ನ ಅವರ ಕುಟುಂಬದವರು ರುಚಿಯಾದ ಉಪಾಹಾರ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಖ್ಯಾತ ಸ್ಯಾಕ್ಸೋಫೋನ್ ವಾದಕ ಕಲಾವಿದ ಮಹೇಶ್ ಮೊಯ್ಲಿ ಗುರುವಾರ ತಮ್ಮ ತಂಡದೊಂದಿಗೆ ನೀಡಿದ ಇಂಪಾದ ವಾದನ ಸೇವೆ ಧಾರ್ಮಿಕ ಚಟುವಟಿಕೆಗಳಿಗೆ ವಿಶೇಷ ಮೆರುಗು ನೀಡಿತು
    ಶ್ರೀ ರಾಮೇಶ್ವರ ಮಿತ್ರವೃಂದದವರು ಆಯೋಜಿಸಿದ್ದ ಉಚಿತ ಭೋಜನದಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. ಜಾತ್ರೆಯಲ್ಲಿ ಸೇರಿದ್ದ ಜನರ ಸುರಕ್ಷತೆಗಾಗಿ ಪೋಲಿಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts