More

    ದೆಹಲಿಗೆ ತೆರಳಿದ್ದವರಲ್ಲಿ 11 ಮಂದಿ ತುಮಕೂರಿಗರು!

    ತುಮಕೂರು: ಕರೊನಾ ಸೋಂಕಿಗೆ ಬಲಿಯಾದ ಶಿರಾ ಮೂಲದ 65 ವರ್ಷದ ವೃದ್ಧನ ಜತೆ ದೆಹಲಿಗೆ ಪಯಣ ಬೆಳೆಸಿದ್ದ 13 ಜನರ ತಂಡದಲ್ಲಿ 11 ಮಂದಿ ತುಮಕೂರಿಗರು ಎನ್ನುವ ಸುದ್ದಿ ಇಡೀ ನಗರವನ್ನೇ ತಲ್ಲಣಗೊಳಿಸಿದೆ.

    ವೃದ್ಧ ಮೃತಪಟ್ಟ ಸುದ್ದಿ ಬಿತ್ತರವಾಗುತ್ತಿದ್ದಂತೆ ನಗರ ಸಂಪೂರ್ಣ ಸ್ತಬ್ಧಗೊಂಡಿತು. ಮಾ.5 ರಂದು ಮಧ್ಯಾಹ್ನ 2.30ಕ್ಕೆ ತುಮಕೂರು ರೈಲ್ವೆ ನಿಲ್ದಾಣದಿಂದ ದೆಹಲಿಯ ಜಾಮಿಯಾ ಮಸೀದಿಯಲ್ಲಿ ಧಾರ್ಮಿಕ ಸಮ್ಮೇಳನವೊಂದರಲ್ಲಿ ಭಾಗವಹಿಸಲು ವೃದ್ಧನ ನೇತೃತ್ವದಲ್ಲಿ ತೆರಳಿದ್ದ ತಂಡದಲ್ಲಿ 13 ಜನರಿದ್ದು ಇವರಲ್ಲಿ 11 ಮಂದಿ ತುಮಕೂರಿಗರು ಎಂಬುದು ಆತಂಕ ಸೃಷ್ಟಿಸಿದೆ. ತಿಪಟೂರು ಮೂಲದ ಓರ್ವ ಹಾಗೂ ನಾಗಮಂಗಲ ಮೂಲದ ಓರ್ವ ವ್ಯಕ್ತಿ ಸಹ ಇವರೊಂದಿಗೆ ತೆರಳಿದ್ದರು.

    13 ಜನರು ಪತ್ತೆ : ವೃದ್ಧನ ಜತೆ ದೆಹಲಿ ಪಯಣ ಮುಗಿಸಿ ಒಟ್ಟಿಗೆ ತುಮಕೂರಿಗೆ ಮರಳಿದ್ದ ಈ 13 ಜನರನ್ನು ಪತ್ತೆ ಹಚ್ಚಲಾಗಿದೆ. ಈ ತಂಡದಲ್ಲಿ ತುಮಕೂರಿನ 11 ಮಂದಿಯನ್ನು ಪತ್ತೆ ಹಚ್ಚಿ ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಅಲ್ಲದೆ, 13 ಜನರ ರಕ್ತ ಹಾಗೂ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಯೋಗಾಲಯ ವರದಿ ನಿರೀಕ್ಷಿಸಲಾಗಿದ್ದು ಈ 11 ಜನರು ತುಮಕೂರಿನಲ್ಲಿ ಎಲ್ಲೆಲ್ಲಿ ಓಡಾಡಿದ್ದಾರೆಂಬ ಭೀತಿ ಈಗ ಎಲ್ಲರನ್ನೂ ಕಾಡುತ್ತಿದೆ. ಈ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಬಹುತೇಕ ಬಡಾವಣೆಗಳು ಸಂಪೂರ್ಣವಾಗಿ ಸ್ತಬ್ಧಗೊಂಡವು. ಆದರೂ, ಕೆಲವರು ಇದನ್ನು ಲೆಕ್ಕಿಸದೇ ಓಡಾಡುತ್ತಿದ್ದು ಅಂತಹವರಿಗೆ ಪೊಲೀಸರು ಎಚ್ಚರಿಕೆ ಪಾಠ ಹೇಳಿದರಲ್ಲದೆ, ಲಾಠಿ ರುಚಿ ಕೂಡ ತೋರಿಸಿದರು.

    ತೀವ್ರ ನಿಗಾದಲ್ಲಿ ವೈದ್ಯರು, ಶುಶ್ರೂಷಕರು!: ಮೃತ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ಶಿರಾದ ಖಾಸಗಿ ಆಸ್ಪತ್ರೆಯ ಇಬ್ಬರು ವೈದ್ಯರು, ಡಯಾಗ್ನಾಸ್ಟಿಕ್ ಸಿಬ್ಬಂದಿ ಹಾಗೂ ತುಮಕೂರಿನ ಖಾಸಗಿ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ನೀಡಿದ್ದ ಸ್ಟಾಫ್ ನರ್ಸ್, ಡಯಾಗ್ನಾಸ್ಟಿಕ್ ಸಿಬ್ಬಂದಿ ಸೇರಿ 7 ಮಂದಿ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಒಪಿಡಿಯಲ್ಲಿ ಪರೀಕ್ಷಿಸಿದ್ದ ಒಬ್ಬ ವೈದ್ಯರನ್ನು ಹೋಂ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಶಿರಾ ತಾಲೂಕು ವೈದ್ಯಾಧಿಕಾರಿ ಬಗ್ಗೆಯೂ ನಿಗಾವಹಿಸಲಾಗಿದೆ. ಒಟ್ಟಾರೆ ಆತನ ಜತೆ ಪ್ರಾಥಮಿಕ ಸಂಪರ್ಕ ಮಾಡಿದ್ದ 33 ಜನರನ್ನು ಗುರುತಿಸಿದ್ದು ಎಲ್ಲರನ್ನೂ ಪರೀಕ್ಷೆಗೊಳಪಡಿಸಲಾಗುತ್ತಿದೆ. ಅಲ್ಲದೇ ಮುನ್ನೆಚ್ಚರಿಕಾ ಕ್ರಮವಾಗಿ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಸಿಬ್ಬಂದಿ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಇವರನ್ನೆಲ್ಲ 28 ದಿನಗಳವರೆಗೆ ಕ್ವಾರಂಟೈನ್ ಮಾಡಲಿದ್ದು ನಂತರ ಮಾದರಿಗಳು ನೆಗೆಟಿವ್ ಬಂದರೆ ಮನೆಗೆ ಕಳುಹಿಸಲಾಗುವುದು.

    ಸ್ಮಾರ್ಟ್‌ಸಿಟಿಯಲ್ಲಿ ಡ್ರೋನ್ ಕಣ್ಗಾವಲು : ಲಾಕ್‌ಡೌನ್, ಕರ್ಫ್ಯೂ ಉಲ್ಲಂಘಿಸಿ ಅನಗತ್ಯವಾಗಿ ನಗರದಲ್ಲಿ ಸಂಚರಿಸುವರ ಮೇಲೆ ಪೊಲೀಸರು ಡ್ರೋನ್ ಕ್ಯಾಮರಾ ಕಣ್ಗಾವಲು ಇರಿಸಿದ್ದರು. ಬೆಳಗ್ಗೆ 7 ರಿಂದ 9ರವರೆಗೆ ದಿನಸಿ, ತರಕಾರಿ ವ್ಯಾಪಾರಕ್ಕೆ ವಿನಾಯಿತಿ ನೀಡಲಾಗಿತ್ತು. ಆನಂತರ ಸುಖಾಸುಮ್ಮನೆ ಓಡಾಡುವರನ್ನು ಪೊಲೀಸರು ಪ್ರಮುಖ ರಸ್ತೆಗಳಲ್ಲಿ ತಡೆದು ಲಾಠಿ ರುಚಿ ತೋರಿಸಿ ಮನೆಗೆ ಕಳುಹಿಸಿದರು. ಇನ್ನೂ ಕೆಲವು ಕಡೆ ಡ್ರೋನ್ ಕ್ಯಾಮರಾದಲ್ಲಿ ನೋಡಿ ಅನಗತ್ಯವಾಗಿ ತಿರುಗುತ್ತಿದ್ದವರನ್ನು ಸೆರೆ ಹಿಡಿದಿದ್ದು ಇದನ್ನು ಕಂಟ್ರೋಲ್ ರೂಂನಲ್ಲಿ ಪರಿಶೀಲಿಸಿ ಕಾನೂನಿನಡಿ ಕ್ರಮಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

    ಸೈನಿಕರಂತೆ ಹೋರಾಡೋಣ: ತುಮಕೂರು ಜಿಲ್ಲೆಯಲ್ಲಿ ಕರೊನಾಗೆ ವ್ಯಕ್ತಿ ಬಲಿಯಾಗಿರುವ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಮತ್ತೊಮ್ಮೆ ಜನರಲ್ಲಿ ಜಾಗೃತಿವಹಿಸಿ ಮನೆಯಲ್ಲೇ ಇರುವಂತೆ ಮನವಿ ಮಾಡಿದ್ದಾರೆ. ವಿಶ್ವವನ್ನೇ ತಲ್ಲಣಗೊಳಿಸಿರುವ ರೋಗದ ವಿರುದ್ಧ ಸೈನಿಕರಂತೆ ನಾವು ಹೋರಾಡೋಣ. ಸಾಮಾಜಿಕ ಅಂತರ ಕಾಯ್ದುಕೊಂಡು ಮನೆಯಲ್ಲಿಯೇ ಇರಬೇಕು. ಸೋಂಕು ಕಾಡ್ಗಿಚ್ಚಿನಂತೆ ಹರಡುತ್ತಿದೆ. ಸರ್ಕಾರ ಹಾಕಿರುವ ನಿರ್ಬಂಧ ಅನುಸರಿಸುವಂತೆ ಶ್ರೀಗಳು ಮನವಿ ಮಾಡಿದ್ದಾರೆ.

    ತಿಪಟೂರು ರಾಗಿ ಕೇಂದ್ರ ಲಾಕ್‌ಡೌನ್: ಕರೊನಾ ತಡೆಗೆ ಜನಸಂದಣಿ ನಿಯಂತ್ರಿಸುವ ಉದ್ದೇಶದಿಂದ ಮಾ.25ರಿಂದ ಜಾರಿಗೆ ಬರುವಂತೆ ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿದ್ದ ಕೆಎಸ್‌ಎಫ್‌ಸಿ ವತಿಯಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಲಾಗುತ್ತಿದ್ದ ಭತ್ತ, ರಾಗಿ, ಮತ್ತು ಬಿಳಿ ಜೋಳ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ವಿ.ವೆಂಕಟೇಶ್ ಆದೇಶಿಸಿದ್ದಾರೆ.

    ಟ್ರಾವೆಲ್ ಹಿಸ್ಟರಿ
    ಮಾ.5: ಮಧ್ಯಾಹ್ನ 2.30ಕ್ಕೆ ತುಮಕೂರು ರೈಲ್ವೆ ನಿಲ್ದಾಣದಿಂದ ಸಂಪರ್ಕ ಕ್ರಾಂತಿಯ ಎಸ್-6 ಬೋಗಿಯಲ್ಲಿ 13 ಜನರೊಂದಿಗೆ ದೆಹಲಿಯತ್ತ ಪ್ರಯಾಣ.
    ಮಾ.7: ಮಧ್ಯಾಹ್ನ 3ಕ್ಕೆ ದೆಹಲಿ ತಲುಪಿ ಹಜರತ್ ನಿಜಾಮುದ್ದೀನ್ ನಿಲ್ದಾಣದಲ್ಲಿ ಇಳಿದು ಜಾಮಿಯಾ ಮಸೀದಿಗೆ ಟ್ಯಾಕ್ಸಿಯಲ್ಲಿ ಪಯಣ.
    ಮಾ.7 ರಿಂದ 11: ಮಸೀದಿ ಹತ್ತಿರದ ಲಾಡ್ಜ್‌ನಲ್ಲಿ ರೂಂ ಸಿಗದ ಕಾರಣ ಜಾಮಿಯಾ ಮಸೀದಿಯಲ್ಲೇ ವಾಸ್ತವ್ಯ.
    ಮಾ.11: ಬೆಳಗ್ಗೆ 9ಕ್ಕೆ ಕೊಂಗು ಎಕ್ಸ್‌ಪ್ರೆಸ್ ಎಸ್-9 ಬೋಗಿಯಲ್ಲಿ ದೆಹಲಿಯಿಂದ ನಿರ್ಗಮನ
    ಮಾ.14: ರಾತ್ರಿ 12.30ಕ್ಕೆ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಬಂದಿಳಿದು, ಅಲ್ಲಿಂದ ಚಿತ್ರದುರ್ಗ ಸಾರಿಗೆ ಬಸ್ ಹಿಡಿದು ಬೆಳಗಿನ ಜಾವ ಶಿರಾಕ್ಕೆ ಆಗಮನ. ಒಂದೆರಡು ದಿನ ಮನೆಯಲ್ಲೇ ವಿಶ್ರಾಂತಿ.
    ಮಾ.18: ತೀವ್ರ ಜ್ವರ, ಕೆಮ್ಮು ಕಾಣಿಸಿಕೊಂಡಿದೆ.
    ಮಾ.19: ಸಂಜೆ 6ಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆ.
    ಮಾ.21: ಶಿರಾದ ಖಾಸಗಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ. ಈ ವೇಳೆ ಡಯೋಗ್ನಾಸ್ಟಿಕ್ ಕೇಂದ್ರದಲ್ಲಿ ಎಕ್ಸ್ ರೇ, ರಕ್ತ ಪರೀಕ್ಷೆ. ನಂತರ ಜಿಲ್ಲಾ ಆಸ್ಪತ್ರೆಗೆ ಶಿಫಾರಸು.
    ಮಾ.23: ಮಧ್ಯಾಹ್ನ 3ಕ್ಕೆ ಜಿಲ್ಲಾ ಆಸ್ಪತ್ರೆಯಲ್ಲಿ ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದು ಮತ್ತೆ ಶಿರಾಕ್ಕೆ ವಾಪಸ್.
    ಮಾ.24: ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಬೆಳಗಿನ ಜಾವ 3ಕ್ಕೆ ಜಿಲ್ಲಾ ಆಸ್ಪತ್ರೆಗೆ ದಾಖಲು. ವೈದ್ಯರ ಸೂಚನೆ ದಿಕ್ಕರಿಸಿ ಬೆಳಗ್ಗೆ 10 ಕ್ಕೆ ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲು. (ಸ್ಟಾಫ್ ನರ್ಸ್‌ನಿಂದ ಐವಿ ಫ್ಲೂೃಯಿಡ್ಸ್ ಹಾಗೂ ಆಕ್ಸಿಜನ್ ಮಾಸ್ಕ್ ವಿತರಣೆ). ಲ್ಯಾಬ್ ಟೆಕ್ನಿಷಿಯನ್‌ನಿಂದ ರಕ್ತ ಸಂಗ್ರಹ. ಎಕ್ಸ್ ರೇ. ಮತ್ತೆ ಜಿಲ್ಲಾ ಆಸ್ಪತ್ರೆಗೆ ಶಿಫಾರಸು. ಮಧ್ಯಾಹ್ನ 2ಕ್ಕೆ ಮತ್ತೆ ಜಿಲ್ಲಾ ಆಸ್ಪತ್ರೆಗೆ ದಾಖಲು. ತಕ್ಷಣವೇ ಐಸೋಲೇಷನ್ ವಾರ್ಡ್‌ಗೆ ಶ್‌ಟಿ. ರಕ್ತ ಹಾಗೂ ಕ ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನೆ. 26ರ ತಡರಾತ್ರಿ ಸೋಂಕು ದೃಢ.
    ಮಾ.27: ಬೆಳಗ್ಗೆ 10.45ರಲ್ಲಿ ಐಸೋಲೇಷನ್ ವಾರ್ಡ್‌ನಲ್ಲೇ ಕೊನೆಯುಸಿರು.

    ಜಾಮಿಯಾ ಮಸೀದಿಯ ಸಮ್ಮೇಳನವೊಂದರಲ್ಲಿ ಭಾಗವಹಿಸಿದ್ದ ವೃದ್ಧನಿಗೆ ಬಹುಷಃ ಅಲ್ಲೇ ಸೋಂಕು ತಗುಲಿರುವ ಸಾಧ್ಯತೆ ಇದೆ. ಈ ಬಗ್ಗೆ ಅಲ್ಲಿನ ಸರ್ಕಾರಕ್ಕೆ ಸಂಪೂರ್ಣ ಮಾಹಿತಿ ನೀಡಲಾಗುವುದು. ಈತನ ಜತೆ ತೆರಳಿದ್ದ 13 ಜನರನ್ನು ತೀವ್ರ ನಿಗಾದಲ್ಲಿ ಇಡಲಾಗಿದ್ದು ಅವರ ರಕ್ತ, ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.
    ಡಾ.ಕೆ.ರಾಕೇಶ್‌ಕುಮಾರ್ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts