More

    ಮಾಲೂರಿನಲ್ಲಿ ಆನೆ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ, ಸಾರ್ವಜನಿಕ ಮೃತ

    ಮಾಸ್ತಿ (ಮಾಲೂರು): ಮಾಲೂರಿನ ನೂಟವೆ ಗ್ರಾಮದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಹಿಂಡನ್ನು ಓಡಿಸುವಾಗ ಆನೆಗಳು ದಾಳಿ ನಡೆಸಿದ್ದು ಅರಣ್ಯ ಸಿಬ್ಬಂದಿ ಹಾಗೂ ಸಾರ್ವಜನಿಕರೊಬ್ಬರು ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ.

    ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿದ್ದ ಗುಡೇಗೌಡನೂರು ಗ್ರಾಮದ ನಿವಾಸಿ ಗುಟ್ಟ ಮುನಿಯಪ್ಪ (48), ಕೊಮ್ಮನಹಳ್ಳಿ ನಿವಾಸಿ ಆನಂದಯ್ಯ (40) ಮೃತರು. ಸೊಂಡಿಲಿನಿಂದ ಎತ್ತಿ ಎಸೆದ ರಭಸಕ್ಕೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ ಕರೆದೊಯ್ಯುವಾಗ ಮುನಿಯಪ್ಪ ಮೃತಪಟ್ಟರೆ, ಆನಂದಯ್ಯ ತೊರಲಕ್ಕಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಗಡಿಭಾಗವಾದ ದಿನ್ನಹಳ್ಳಿ ಮೂಲಕ ತಮಿಳುನಾಡಿನ ಮೂತನೂರು ಅರಣ್ಯ ಪ್ರದೇಶದಿಂದ ಬೂದಿಕೋಟೆ ಅರಣ್ಯ ವ್ಯಾಪ್ತಿಗೆ ತಿಂಗಳ ಹಿಂದೆಯೇ 20ಕ್ಕೂ ಹೆಚ್ಚು ಕಾಡಾನೆಗಳು ಆಗಮಿಸಿದ್ದು, ನಿತ್ಯವೂ ಗ್ರಾಮದಿಂದ ಗ್ರಾಮಕ್ಕೆ ಸಂಚರಿಸುತ್ತ ಬೆಳೆಗಳನ್ನು ನಾಶ ಮಾಡುತ್ತಿವೆ. ಕಾಡಾನೆಗಳ ಹಾವಳಿಗೆ ನಿತ್ಯವೂ ಲಕ್ಷಾಂತರ ರೂ. ಮೌಲ್ಯದ ಬೆಳೆಗಳು ನಾಶವಾಗುತ್ತಿವೆ.

    ಆನೆಗಳ ಉಪಟಳ ತಾಳದೆ ರೋಸಿಹೋದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತ್ತ ಬಂದಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳ ಹಿಂಡನ್ನು ತಮಿಳುನಾಡಿನ ಅರಣ್ಯ ಪ್ರದೇಶಕ್ಕೆ ಓಡಿಸಲು ಹರಸಾಹಸಪಡುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ವಾರದ ಹಿಂದೆ ಬಂಗಾರಪೇಟೆಯ ಗಡಿಭಾಗದಲ್ಲಿದ್ದ ಹಿಂಡು ಭಾನುವಾರ ಸಂಜೆ ಎಳೆಸಂದ್ರ ಗ್ರಾಮದ ಮೂಲಕ ತಾಲೂಕಿನ ನೂಟವೆ ಗ್ರಾಮದ ಸಮೀಪ ಬೀಡುಬಿಟ್ಟು ಬೆಳೆಗಳನ್ನು ನಾಶ ಮಾಡಿದ್ದವು. ವಿಷಯ ತಿಳಿದ ಅರಣ್ಯ ಸಿಬ್ಬಂದಿ ಓಡಿಸುವ ಕಾರ್ಯಾಚರಣೆ ಆರಂಭಿಸಿದ್ದರು.

    ಸಂಜೆ ನೂಟವೆ ಸಮೀಪದ ನೀಲಗಿರಿ ತೋಪಿನಲ್ಲಿದ್ದ ಆನೆಗಳ ಹಿಂಡು ನೋಡಲು ಬಂದ ಸುತ್ತಮುತ್ತಲಿನ ಹಳ್ಳಿಯ ಜನರು ಅವುಗಳಿಗೆ ಕಲ್ಲು ಇತರ ವಸ್ತುಗಳನ್ನು ತೂರಿದ್ದಲ್ಲದೆ ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿದ್ದರು. ಇದರಿಂದ ಕೆರಳಿದ ಕಾಡಾನೆಗಳು ಸಾರ್ವಜನಿಕರ ಮೇಲೆರಗಲು ಬಂದಾಗ ಗುಟ್ಟಮುನಿಯಪ್ಪ ಹಾಗೂ ಆನಂದಯ್ಯ ಸಿಕ್ಕಿಕೊಂಡು ಹೊಡೆತ ತಿಂದಿದ್ದಾರೆ.

    ಮೃತ ಕುಟುಂಬಕ್ಕೆ ಪರಿಹಾರ ಘೋಷಣೆ: ಜಿಲ್ಲೆಯಲ್ಲಿ ಕಾಡಾನೆ ಹಾವಳಿಗೆ ತಡೆಗೆ ರೈಲು ಕಂಬಿಗಳ ತಡೆಗೋಡೆ ಸೇರಿ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದರು.

    ನಗರದ ಎಸ್ಸೆನ್ನಾರ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕಾಡಾನೆಗಳ ಹಾವಳಿ ಬಗ್ಗೆ ತಿಳಿದಿದ್ದಾನೆ. ಈ ಭಾಗದಲ್ಲಿ ಪ್ರಸ್ತಾಪಿತ ಆನೆ ನಿರೋಧಕ ಕಂದಕ ಸೇರಿ ಕಾಡಾನೆಗಳ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಮುಂದೆ ಇಂತಹ ಘಟನೆ ಆಗದಂತೆ ಎಚ್ಚರ ವಹಿಸಲಾಗುವುದು ಎಂದರು.
    ಮೃತರ ಕುಟುಂಬಕ್ಕೆ 7.50 ಲಕ್ಷ ರೂ. ಪರಿಹಾರ ಘೋಷಿಸಿ, ಮೃತರ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ಕಲ್ಪಿಸುವ ಅವಕಾಶ ಇದ್ದರೆ ಅದನ್ನೂ ಮಾಡಿಕೊಡುವುದಾಗಿ ಹೇಳಿದರು.

    ವನ್ಯಜೀವಿಗಳ ಹಾವಳಿಗೆ ಈಗಾಗಲೆ ಅನೇಕರು ಬಲಿಯಾಗಿದ್ದಾರೆ, ಬೆಳೆ ಹಾನಿಗೀಡಾದ ರೈತರಿಗೆ ಪರಿಹಾರ ಕಲ್ಪಿಸುವಲ್ಲಿ ಅನುದಾನದ ಕೊರತೆ ಇರುವ ಬಗ್ಗೆ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಅಗತ್ಯವಿರುವ ಅನುದಾನ ಬಿಡುಗಡೆ ಜತೆಗೆ ಬೆಳೆ ನಷ್ಟಕ್ಕೆ ಪರಿಹಾರ ಮೊತ್ತ ಹೆಚ್ಚಿಸಲು ಕ್ರಮ ವಹಿಸಲಾಗುವುದು. ರಾಜ್ಯದ ವಿವಿಧೆಡೆ ಇಂತಹ ಘಟನೆಗಳು ನಡೆಯುತ್ತಿರುವುದರಿಂದ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಕೆಳಹಂತದ ಅಧಿಕಾರಿಗಳು ಏನು ಕ್ರಮ ಕೈಗೊಂಡಿದ್ದಾರೆ ಎಂದು ಮಾಹಿತಿ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ನುಡಿದರು.

    ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಣದಲ್ಲಿ ಡಿಎಫ್‌ಒ ವೈ. ಚಕ್ರಪಾಣಿ ಕುರಿತು ರೈತ ಸಂಘದವರು ಹಾಗೂ ಮಾಧ್ಯಮ ಪ್ರತಿನಿಧಿಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಆನಂದ ಸಿಂಗ್, ಒಂದಿಬ್ಬರು ಹೇಳಿದರೆ ನಂಬುದು ಕಷ್ಟವಾಗುತ್ತಿತ್ತು. ಆದರೆ ಎಲ್ಲರ ಧ್ವನಿಯೂ ಒಂದೇ ಆಗಿರುವುದರಿಂದ ಇದನ್ನು ಪ್ರಬಲ ಸಾಕ್ಷ್ಯವಾಗಿ ಪರಿಗಣಿಸಿ ಅಧಿಕಾರಿಯ ಕರ್ತವ್ಯ ನಿರ್ಲಕ್ಷ್ಯತೆಯ ವರ್ತನೆ ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್ ಮಾತನಾಡಿ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳ ಬಗ್ಗೆ ದೂರುಗಳಿವೆ. ಈ ಬಗ್ಗೆ ಅರಣ್ಯ ಸಚಿವರು ಗಮನ ಹರಿಸಬೇಕು ಹಾಗೂ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
    ಶಾಸಕ ಕೆ ವೈ. ನಂಜೇಗೌಡ, ಪ್ರಭಾರ ಜಿಲ್ಲಾಧಿಕಾರಿ ಎಚ್.ವಿ. ದರ್ಶನ್, ಜಿಪಂ ಅಧ್ಯಕ್ಷ ಸಿ.ಎಸ್. ವೆಂಕಟೇಶ್, ಕೆಜಿಎಫ್ ಎಸ್ಪಿ ಮೋಹಮದ್ ಸುಜೀತಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್‌ಜಿ. ನಾರಾಯಣಸ್ವಾಮಿ ಹಾಜರಿದ್ದರು.

    ಕಾಡಾನೆಗಳು ಬೆಳೆಗಳಿಗೆ ಹಾನಿ ಮಾಡುವ ಜತೆಗೆ ಜನರ ಪ್ರಾಣ ತೆಗೆಯುತ್ತಿವೆ. ಆದ್ದರಿಂದ ಅರಣ್ಯ ಇಲಾಖೆ ಆನೆಗಳ ನಿಯಂತ್ರಣಕ್ಕೆ ಕಾರಿಡಾರ್ ಹಾಗೂ ಕಂದಕಗಳನ್ನು ನಿರ್ಮಾಣ ಮಾಡಬೇಕು. ದಾಳಿಯಿಂದ ಮೃತಪಟ್ಟವರಿಗೆ ಸರ್ಕಾರದಿಂದ ಹೆಚ್ಚಿನ ಪರಿಹಾರ ಕೊಡಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಪ್ರಾಮಾಣಿಕ ಪ್ರಯತ್ನ ಮಾಡಬೇಕು.
    ಎಸ್.ಮುನಿಸ್ವಾಮಿ, ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts