More

    ವಿದ್ಯುತ್ ಖಾಸಗೀಕರಣಕ್ಕೆ ವಿರೋಧ: ಬೆಂಗಳೂರಿನಲ್ಲಿ ರೈತ ಸಂಘದಿಂದ ಬೃಹತ್ ಪ್ರತಿಭಟನೆ

    ಕೊಪ್ಪಳ: ರೈತರಿಗೆ ಮಾರಕವಾಗುವ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿರುವ ಕೇಂದ್ರ ಸರ್ಕಾರ, ಸದ್ದಿಲ್ಲದೆ ವಿದ್ಯುತ್ ಖಾಸಗೀಕರಣ ಮಸೂದೆ ಮಂಡಿಸಿದೆ. ರಾಜ್ಯ ಸರ್ಕಾರವೂ ಅನುಷ್ಠಾನಕ್ಕೆ ಮುಂದಾಗಿರುವುದನ್ನು ಖಂಡಿಸಿ ನ.26ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜಿ.ಎಂ.ವೀರಸಂಗಯ್ಯ ತಿಳಿಸಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ರೈತರ ಪ್ರತಿಭಟನೆಗೆ ಮಣಿದು ಕೃಷಿ ಕಾಯ್ದೆ ವಾಪಸ್ ಪಡೆದಿದೆ. ಆದರೆ, ಇತ್ತೀಚೆಗೆ ಮಂಡಿಸಿದ ಐದು ಮಸೂದೆಗಳಲ್ಲಿ ವಿದ್ಯುತ್ ಖಾಸಗೀಕರಣವೂ ಇದ್ದು, ಮುಂದೆ ಕಾನೂನು ಆಗಲಿದೆ. ರಾಜ್ಯ ಸರ್ಕಾರಗಳು ಒಪ್ಪಿದರೆ ಮಾತ್ರ ಕಾಯ್ದೆ ಅನ್ವಯವಾಗಲಿದೆ ಎಂದು ಕೇಂದ್ರ ಹೇಳಿದೆ. ಈಗಾಗಲೇ ನಾಲ್ಕು ರಾಜ್ಯಗಳು ತಿರಸ್ಕರಿಸಿವೆ. ಆದರೆ, ಕರ್ನಾಟಕದಲ್ಲಿ ಕಾಯ್ದೆ ಜಾರಿಗೆ ಸರ್ಕಾರ ಉತ್ಸುಕವಾಗಿದೆ. ಮಾತಿಗೆ ಖಾಸಗೀಕರಣ ಮಾಡುವುದಿಲ್ಲವೆಂದು ಸಿಎಂ ಬೊಮ್ಮಾಯಿ ಹೇಳುತ್ತಾರೆ. ಮಾಡದಿದ್ದರೆ ಅವರನ್ನೇ ಬದಲಾವಣೆ ಮಾಡಿ ಕಾಯ್ದೆ ಜಾರಿ ಮಾಡುವಷ್ಟು ಕೇಂದ್ರ ಸರ್ಕಾರ ಪ್ರಬಲವಾಗಿದೆ ಎಂದರು.

    ರಾಜ್ಯದಲ್ಲಿ 45 ಲಕ್ಷ ಕೃಷಿ ಪಂಪ್‌ಸೆಟ್‌ಗಳಿವೆ. ಕೇಂದ್ರ ಕೋವಿಡ್‌ನಲ್ಲಿ ಘೋಷಿಸಿದ 20 ಲಕ್ಷ ಕೋಟಿ ರೂ. ಬಜೆಟ್‌ನಲ್ಲಿ ಎರಡು ಲಕ್ಷ ಕೋಟಿ ರೂ. ಸ್ಮಾರ್ಟ್ ಮೀಟರ್ ಕಂಪನಿಗೆ ನೀಡಿದೆ. ಪೂರ್ವ ಪಾವತಿ ಮೀಟರ್‌ಗಳನ್ನು ಅಳವಡಿಸಲು ಯೋಜಿಸಿದ್ದು, ರೈತರು ಮುಂಚಿತವಾಗಿ ರೀಚಾರ್ಜ್ ಮಾಡಿಕೊಳ್ಳಬೇಕು. ವಿದ್ಯುತ್ ನಿಗಮಗಳ ಆಸ್ತಿ ಮೊತ್ತ 10 ಲಕ್ಷ ಕೋಟಿ ರೂ.ಆಗುತ್ತದೆ. ಅದನ್ನು ಕೆಲವೇ ಲಕ್ಷ ಕೋಟಿಗೆ ಖಾಸಗಿಯವರಿಗೆ ನೀಡುತ್ತಾರೆ. ಇದನ್ನು ಖಂಡಿಸಿ ಹೋರಾಟ ನಡೆಸಲಾಗುವುದು. ವಿವಿಧ ಜಿಲ್ಲೆಗಳಿಂದ ಸಾವಿರಾರು ರೈತರು ಆಗಮಿಸುವರು. ಡಿ.5ರಿಂದ ಕೂಡಲಸಂಗಮದಿಂದ ಬೆಂಗಳೂರುವರೆಗೆ ಪಾದಯಾತ್ರೆ ಹಮ್ಮಿಕೊಳ್ಳುತ್ತೇವೆ. ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಸರ್ವೋದಯ ಪಕ್ಷಕ್ಕೆ ಪುನರ್ಜನ್ಮ ನೀಡಲಾಗುವುದೆಂದರು. ರೈತ ಮುಖಂಡರಾದ ಭೀಮಸೇನ ಕಲಿಕೇರಿ, ತಿಪ್ಪೇಸ್ವಾಮಿ, ಗವಿಸಿದ್ದಪ್ಪ ಬಗನಾಳ, ಅಮ್ಜದ ಪಾಷಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts