More

    ಕ್ಯಾಂಪಸ್ ಸಂಚಾರಕ್ಕೆ ಇಲೆಕ್ಟ್ರಿಕ್ ಸ್ಕೂಟರ್

    ಸುರತ್ಕಲ್: ಕ್ಯಾಂಪಸ್ ಆವರಣದಲ್ಲಿ ಇಂಗಾಲದ ಅಂಶ ಕಡಿಮೆ ಮಾಡುವ ನಿಟ್ಟಿನಲ್ಲಿ ಸುರತ್ಕಲ್‌ನ ಎನ್‌ಐಟಿಕೆ ಕಾಲೇಜು ವಿಧ್‌ಯುಗ್ 2.1 ಎಂಬ ಇಲೆಕ್ಟ್ರಿಕ್ ಸ್ಕೂಟರನ್ನು ಅಭಿವೃದ್ಧಿ ಪಡಿಸಿದೆ.

    ಕ್ಯಾಂಪಸ್‌ನಲ್ಲಿಯೇ ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಫೈಲ್ ಮತ್ತು ಕಾಗದ ಪತ್ರಗಳನ್ನು ಕೊಂಡೊಯ್ಯಲು ಈ ಸ್ಕೂಟರನ್ನು ಕ್ಯಾಂಪಸ್ ಸಿಬ್ಬಂದಿ ಬಳಸಲಿದ್ದಾರೆ, ಎನ್‌ಐಟಿಕೆ ಸುರತ್ಕಲ್ ಡೈರೆಕ್ಟರ್ ಪ್ರೊ.ಕರ್ಣಂ ಉಮಾಮಹೇಶ್ವರ್ ಅವರು ಈಗಾಗಲೇ ಈ ವಾಹನದ ಪ್ರಾಯೋಗಿಕ ಚಾಲನೆ ನಡೆಸಿದ್ದಾರೆ ಎಂದು ಕಾಲೇಜು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

    ಎನ್‌ಐಟಿಕೆ ಕಾಲೇಜು ಅನ್ವಯಿಕ ಮೆಕ್ಯಾನಿಕ್ಸ್ ಮತ್ತು ಹೈಡ್ರಾಲಿಕ್ಸ್ ವಿಭಾಗದ ಸಹಾಯಕ ಪ್ರೊಫೆಸರ್ ಮತ್ತು ಸೆಂಟರ್ ಫಾರ್ ಸಿಸ್ಟಮ್ ಡಿಸೈನ್‌ನ ಸಹ ಅಧ್ಯಾಪಕ ಪೃಥ್ವಿರಾಜ್ ಯು.ಮಾತನಾಡಿ, ಈ ಇಲೆಕ್ಟ್ರಿಕ್ ಸ್ಕೂಟರ್, ವಿಧ್‌ಯುಗ್ ಸರಣಿಯಲ್ಲಿ ಬರುವಂತಹ ವಾಹನ. ಕ್ಯಾಂಪಸ್‌ನ ಆವರಣದಲ್ಲಿ ಕಚೇರಿ ಕೆಲಸಗಳಿಗೆ ಮೋಟಾರ್ ವಾಹನಗಳ ಬಳಕೆ ಕಡಿಮೆ ಮಾಡಿ ವಾಯುಮಾಲಿನ್ಯ ನಿಯಂತ್ರಿಸುವ ನಿಟ್ಟಿನಿಂದ ವಿಧ್‌ಯುಗ್ ಸರಣಿಯ ಇ-ವಾಹನಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ನಮ್ಮ ಕ್ಯಾಂಪಸ್‌ನಲ್ಲಿ ಪ್ರತಿನಿತ್ಯ ಫೈಲ್, ಇತರ ಕಾಗದ ಪತ್ರಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ವರ್ಗಾವಣೆ ಮಾಡಲು 20 ರಿಂದ 25 ಕಿಮೀಗಳಷ್ಟು ಸಂಚಾರ ಮಾಡಬೇಕಾಗುತ್ತದೆ. ಅಂದರೆ 14 ಇಂಜಿನಿಯರಿಂಗ್ ವಿಭಾಗಗಳ ಸುಮಾರು 60ರಷ್ಟು ಕಚೇರಿಗಳಿಗೆ ಹೋಗಬೇಕಾಗುತ್ತದೆ. ಇದರಿಂದ ವರ್ಷಕ್ಕೆ ಸುಮಾರು 10 ಕೆಜಿ ಇಂಗಾಲ ಕಾಲೇಜಿನ ಆವರಣದಲ್ಲಿ ಬಿಡುಗಡೆಯಾಗುತ್ತದೆ. ವಿಧ್‌ಯುಗ್ 2.1 ಬಳಸುವುದರಿಂದ ಇದನ್ನು ಸಂಪೂರ್ಣನಿಯಂತ್ರಿಸಬಹುದು ಎಂದರು.

    ವಿಧ್‌ಯುಗ್ 2.0 ಕುರಿತಾಗಿ ಬಂದಿದ್ದಂತಹ ಎಲ್ಲ ಪ್ರತಿಕ್ರಿಯೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರೊ.ಕೆ.ವಿ.ಗಂಗಾಧರನ್, ಸಂಶೋಧನಾ ವಿದ್ಯಾರ್ಥಿಗಳಾದ ರಕ್ಷಿತ್ ಕೋಟ್ಯಾನ್, ಸ್ಟೀವನ್ ಲಾಯ್ಡ, ರಜತ್ ಸಿ ಕೋಟೆಕಾರ್, ಲತೀಶ್ ಶೆಟ್ಟಿ, ಸಂದೇಶ್ ಭಕ್ತ, ಮತ್ತು ಅನುರಾಧ ಎಸ್. ಅವರನ್ನು ಒಳಗೊಂಡ ತಂಡ ವಿಧ್‌ಯುಗ್2.1 ನ್ನು ಅಭಿವೃದ್ಧಿ ಪಡಿಸಿದೆ ಎಂದರು.

    ತಾಸಿಗೆ 25 ಕಿಮೀ ವೇಗ: 250ವ್ಯಾಟ್ ಮೋಟಾರ್ ಮತ್ತು 48 ವೋಲ್ಟ್ ಸಾಮರ್ಥ್ಯದ ಬ್ಯಾಟರಿಯಿಂದ ಸ್ಕೂಟರ್ ಕಾರ್ಯನಿರ್ವಹಿಸುತ್ತದೆ. ಸಂಪೂರ್ಣ ಚಾರ್ಜ್ ಆಗಲು ಐದು ಗಂಟೆ ಬೇಕಿದ್ದು, ಫಾಸ್ಟ್‌ಚಾರ್ಜ್ ಮಾಡಿದಲ್ಲಿ ಮೂರು ಗಂಟೆ ಸಾಕಾಗುತ್ತದೆ. ಒಮ್ಮೆ ಶೇ100 ಚಾರ್ಜ್ ಆದ ನಂತರ 45 ರಿಂದ 50 ಕಿಮೀ ದೂರ ಇದನ್ನು ಬಳಸಬಹುದಾಗಿದ್ದು, ಇದರ ಟಾಪ್ ಸ್ಪೀಡ್ ಗಂಟೆಗೆ 25ಕಿಮೀಎಂದು ಪೃಥ್ವಿರಾಜ್ ಯು.ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts