More

    ಚುನಾವಣೆಗಳೇ ಪ್ರಜಾಪ್ರಭುತ್ವದ ಜೀವಾಳ

    ಚಿಕ್ಕಪಡಸಲಗಿ: ಚುನಾವಣೆಗಳೇ ಪ್ರಜಾಪ್ರಭುತ್ವದ ಜೀವಾಳವಾಗಿದ್ದು, ಮಕ್ಕಳು ಶಾಲಾ ಹಂತದಲ್ಲಿಯೇ ಮತದಾನದ ಮಹತ್ವದ ಕುರಿತು ಅರಿಯಬೇಕು. ಚುನಾವಣೆ ಪ್ರಕ್ರಿಯೆಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಸಂವಿಧಾನದ ಆಶಯವನ್ನು ಅಳವಡಿಸಿಕೊಳ್ಳಬೇಕು ಎಂದು ಚುನಾವಣಾ ಸಾಕ್ಷರತಾ ಸಂಘದ ಸಂಚಾಲಕ ಶಿಕ್ಷಕಿ ಸವಿತಾ ಬೆನಕಟ್ಟಿ ಹೇಳಿದರು.

    ಸಮೀಪದ ಕುಂಬಾರಹಳ್ಳ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಶಾಲಾ ಸಂಸತ್ತು ಚುನಾವಣೆಯ ಸಂಚಾಲಕತ್ವವಹಿಸಿ ಮಾತನಾಡಿ, ಭಾರತ ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಇಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದಾರೆ. ಮತಗಳೇ ಪ್ರಭುತ್ವವನ್ನು ನಿರ್ಧರಿಸುತ್ತವೆ. ಮುಂದಿನ ಪ್ರಜೆಗಳಾದ ಮಕ್ಕಳು ವಿದ್ಯಾರ್ಥಿ ದೆಸೆಯಿಂದಲೇ ಪವಿತ್ರ ಮತದಾನದ ಮಹತ್ವ ಅರಿಯುವಂತಾಗಲು ಶಾಲೆ ಚುನಾವಣೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

    ಸಾರ್ವತ್ರಿಕ ಚುನಾವಣೆಗಳು ನಡೆಯುವ ಮಾದರಿಯಲ್ಲಿಯೇ ಮೊಬೈಲ್‌ನಲ್ಲಿ ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್ಗಳನ್ನು ಮಾಡಿ ಮಕ್ಕಳಿಂದ ಮತದಾನ ಮಾಡಿಸಲಾಯಿತು. ಮತದಾನದ ಪ್ರಾತ್ಯಕ್ಷಿಕೆಯಲ್ಲಿ ಕುಂಬಾರಹಳ್ಳ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗಪ್ಪ ತೇರದಾಳ, ಸದಸ್ಯ ಮಲ್ಲೇಶ ಬಂಡಿವಡ್ಡರ, ಮಾಜಿ ಅಧ್ಯಕ್ಷ ನಾಗಪ್ಪ ಹೆಗಡೆ ಉಪಸ್ಥಿತರಿದ್ದು ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದರು.

    ಚುನಾವಣೆ ಪ್ರಕ್ರಿಯೆಯಲ್ಲಿ ಇಬ್ಬರೂ ಪಿಆರ್‌ಒ, ಇಬ್ಬರು ಎಪಿಆರ್, ನಾಲ್ಕು ಜನ ಪಿಒಗಳಾಗಿ ವಿದ್ಯಾರ್ಥಿಗಳು ಕಾರ್ಯನಿರ್ವಹಿಸಿದರು. ಮಕ್ಕಳು ಸಂತಸದಿಂದ ತಮ್ಮ ಗುರುತಿನ ಚೀಟಿಗಳನ್ನು ತೋರಿಸುವ ಮೂಲಕ ಹಕ್ಕನ್ನು ಚಲಾಯಿಸಿದರು.

    ಚುನಾವಣೆ ನಂತರ ಮತಗಳನ್ನು ಎಣಿಕೆ ಮಾಡಿ ಆಯ್ಕೆಯಾದ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಮುಖ್ಯಶಿಕ್ಷಕ ನಾರಾಯಣ ಶಾಸ್ತ್ರಿ ಫಲಿತಾಂಶ ಘೋಷಿಸಿ ಮಾತನಾಡಿ, ಚುನಾವಣೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ. ಭಾರತದ ಭಾಗ್ಯವಿಧಾತರಾದ ನೀವೆಲ್ಲರೂ ಉತ್ತಮ ಪ್ರಜೆಗಳಾಗಿ ದೇಶಸೇವೆಯನ್ನು ಮಾಡಿ ಸಮಾಜದ ಋಣ ತೀರಿಸಬೇಕು ಎಂದರು.

    ಶಿಕ್ಷಕರಾದ ಬಾಹುಬಲಿ ಮುತ್ತೂರ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಸಂಜೀವ ಝಂಬುರೆ ತಂತ್ರಜ್ಞರಾಗಿ ಸಹಕರಿಸಿದರು. ಶಿಕ್ಷಕ ಸಂಗನಬಸವ ಉಟಗಿ, ಶಿಕ್ಷಕಿ ಆಸೀಫಾಭಾನು ಮೋಮಿನ್ ಚುನಾವಣಾ ಸಿಬ್ಬಂದಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts