More

    ಸಾಮೂಹಿಕ ಜವಾಬ್ದಾರಿ: ಮತದಾನ ಪ್ರಮಾಣ, ನಗದು ವಶದಲ್ಲಿ ದಾಖಲೆ

    ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ತಮ್ಮ ಕ್ಷೇತ್ರಗಳ ಶಾಸಕರನ್ನು ಮತದಾರರು ಈಗಾಗಲೇ ಆಯ್ಕೆ ಮಾಡಿದ್ದು, ಜನಾದೇಶ ಯಾರಿಗೆ ದೊರೆತಿದೆ ಎಂಬುದು ಇಂದಿನ ಮತ ಎಣಿಕೆಯಲ್ಲಿ ಬಹಿರಂಗವಾಗಲಿದೆ. ಈ ಬಾರಿ ರಾಜ್ಯದಲ್ಲಿ ಶೇ. 73.19ರಷ್ಟು ಮತದಾನವಾಗಿದ್ದು, ಕಳೆದ ಅವಧಿಗಿಂತ ಶೇ. 1.06 ರಷ್ಟು ಹೆಚ್ಚು ಎನ್ನುವುದು ಒಂದಿಷ್ಟು ಸಮಾಧಾನ ತರುವ ಸಂಗತಿ. ಅಲ್ಲದೆ, 1956ರಲ್ಲಿ ನೂತನ ರಾಜ್ಯವಾಗಿ ಕರ್ನಾಟಕ ರಚನೆಗೊಂಡ ನಂತರ ಇದು ಗರಿಷ್ಠ ಶೇಕಡಾವಾರು ಮತದಾನವಾಗಿದೆ. ಆದರೂ ಶೇ. 26ಕ್ಕಿಂತ ಹೆಚ್ಚು ಮತದಾರರು ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿರುವುದು ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಸುಧಾರಣೆಯಾಗದಿರುವುದು ಕಳವಳಕಾರಿಯೇ ಸರಿ.

    2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಶೇ. 72.13ರಷ್ಟು ಮತದಾನವಾಗಿರುವುದು ಇದುವರೆಗಿನ ದಾಖಲೆಯಾಗಿತ್ತು. ಬೆಂಗಳೂರಿನ ಮತದಾರರು ಮತ್ತೆ ನಿರಾಸೆ ಮೂಡಿಸಿದ್ದಾರೆ. ಇಲ್ಲಿ ಕಳೆದ ಬಾರಿ ಮತದಾನ ಪ್ರಮಾಣ ಶೇ. 54.1 ಆಗಿತ್ತು. ಈ ಬಾರಿಯೂ ಇದೇ ಪ್ರಮಾಣದಲ್ಲಿ ಮತದಾನವಾಗಿದೆ. ಮೇಲುಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಅತಿಹೆಚ್ಚು (ಶೇ. 91.01) ಪ್ರಮಾಣದ ಮತದಾನವಾಗಿದ್ದರೆ, ಬೆಂಗಳೂರು ವ್ಯಾಪ್ತಿಯ ಸಿ.ವಿ.ರಾಮನ್​ನಗರ ವಿಧಾನಸಭೆ ಕ್ಷೇತ್ರದಲ್ಲಿ ಅತಿ ಕಡಿಮೆ (ಶೇ. 47.44) ಮತ ಚಲಾವಣೆಯಾಗಿದೆ. ಇನ್ನು ಜಿಲ್ಲಾವಾರು ಗಣನೆಗೆ ತೆಗೆದುಕೊಂಡರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿಹೆಚ್ಚು (ಶೇ. 85.56) ಹಾಗೂ ಬಿಬಿಎಂಪಿ ದಕ್ಷಿಣ ಜಿಲ್ಲೆಯಲ್ಲಿ ಅತಿ ಕಡಿಮೆ (ಶೇ. 52.33) ಮತದಾನವಾಗಿದೆ. ಸೋಮವಾರ ಅಥವಾ ಮಂಗಳವಾರ ನಿಗದಿ ಮಾಡಿದರೆ ಶನಿವಾರ ಮತ್ತು ಭಾನುವಾರದ ವಾರಾಂತ್ಯವನ್ನು ಸೇರಿಕೊಂಡು ರಜೆ ಮೇಲೆ ತೆರಳುವವರ ಸಂಖ್ಯೆ ಹೆಚ್ಚಾಗಿ ಮತದಾನ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ವಾರದ ಮಧ್ಯದ ಬುಧವಾರವನ್ನು ಮತದಾನಕ್ಕೆ ಚುನಾವಣೆ ಆಯೋಗ ಆಯ್ದುಕೊಂಡಿತ್ತು. ಅಲ್ಲದೆ, ಮತದಾನದ ಜಾಗೃತಿ ಮೂಡಿಸಲು ವ್ಯಾಪಕ ಪ್ರಯತ್ನಗಳನ್ನೂ ನಡೆಸಿತ್ತು.

    ಚುನಾವಣೆ ಸಂದರ್ಭದಲ್ಲಿ ಅಪರಾಧ, ದುಷ್ಕೃತ್ಯಗಳು ಜರುಗಬಾರದು; ಹಣ ಅಥವಾ ಉಡುಗೊರೆ ಆಮಿಷದ ಮೂಲಕ ಅಭ್ಯರ್ಥಿಗಳು ಮತದಾರರನ್ನು ಪ್ರೇರೇಪಿಸಬಾರದು ಇತ್ಯಾದಿ ಉದ್ದೇಶದಿಂದ ರಾಜ್ಯದಲ್ಲಿ ಮಾರ್ಚ್ 29ರಿಂದಲೇ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿತ್ತು. ಆದರೆ, ವಾಸ್ತವದಲ್ಲಿ ಯಾವುದೇ ಆಮಿಷ ಒಡ್ಡದೆ ಚುನಾವಣೆ ನ್ಯಾಯಸಮ್ಮತವಾಗಿ ನಡೆದಿದೆ ಎನ್ನುವಂತಿಲ್ಲ. ಏಕೆಂದರೆ, ಮತದಾರರಿಗೆ ಆಮಿಷ ಒಡ್ಡುವ ಉದ್ದೇಶದ 375 ಕೋಟಿ ರೂಪಾಯಿಗೂ ಅಧಿಕ ಮೊತ್ತದ ನಗದು ಹಾಗೂ ಮದ್ಯ ಮತ್ತಿತರ ವಸ್ತುಗಳನ್ನು ರಾಜ್ಯದಲ್ಲಿ ಚುನಾವಣೆ ಆಯೋಗವು ಈ ಬಾರಿ ವಶಪಡಿಸಿಕೊಂಡಿದ್ದು, ಇದು ಕೂಡ ದಾಖಲೆಯೇ ಆಗಿದೆ. ಇದರಲ್ಲಿ ನಗದಿನ ಮೊತ್ತವೇ 147 ಕೋಟಿ ರೂಪಾಯಿ ಇದೆ. ಇದು ಅಧಿಕೃತವಾಗಿ ವಶವಾದದ್ದು. ಇನ್ನು ತೆರೆಮರೆಯಲ್ಲಿ ಎಷ್ಟಾಗಿರಬಹುದು? 2018ರಲ್ಲಿ ವಶಪಡಿಸಿಕೊಂಡ ನಗದು ಹಾಗೂ ವಸ್ತುಗಳ ಮೊತ್ತವು 83 ಕೋಟಿ ರೂಪಾಯಿ ಆಗಿತ್ತು. ಒಂದೊಂದು ಕ್ಷೇತ್ರಕ್ಕೆ ಕೋಟಿಗಟ್ಟಲೆ ಹಣ ವ್ಯಯಿಸಬೇಕಾದ ಸನ್ನಿವೇಶದಲ್ಲಿ ಸಾಮಾನ್ಯರು ಚುನಾವಣೆಗೆ ನಿಲ್ಲುವತ್ತ ಆಲೋಚನೆಯನ್ನೂ ಮಾಡದ ಸ್ಥಿತಿ ಇರುವುದು ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ. ಮತದಾರರು ಮತ್ತು ರಾಜಕೀಯ ಪಕ್ಷಗಳು ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾದುದು ಸದ್ಯದ ತುರ್ತು.

    ಮತ ಚಲಾಯಿಸಿದ ಬೆನ್ನಿಗೇ ‘ಕರೆಂಟ್ ಶಾಕ್​’: ಏ. 1ರಿಂದಲೇ ಜಾರಿಗೆ ಬರುವಂತೆ ವಿದ್ಯುತ್ ದರ ಏರಿಕೆ!

    ಹನ್ನೊಂದರ ಈ ಹುಡುಗಿ ಐನ್​ಸ್ಟೀನ್​-ಸ್ಟೀಫನ್ ಹಾಕಿಂಗ್​ಗಿಂತಲೂ ಬುದ್ಧಿವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts