More

    ಚುನಾವಣೆಯಲ್ಲಿ ಅನಗತ್ಯ ವಿಚಾರಗಳು ಮುನ್ನೆಲೆಗೆ

    ದಾವಣಗೆರೆ: ಇಂದಿನ ಚುನಾವಣೆಯಲ್ಲಿ ಜನರ ಅಗತ್ಯಗಳು ಹಾಗೂ ಬದುಕು ಹಸನಾಗಿಸುವ ವಿಚಾರಗಳು ಚರ್ಚೆಯಾಗಬೇಕು. ಆದರೆ, ಬಜರಂಗದಳ, ಪಿಎಫ್‌ಐ ನಿಷೇಧದಂತಹ ಅನಗತ್ಯ ವಿಚಾರಗಳು ಮುನ್ನೆಲೆಗೆ ಬಂದಿರುವುದು ವಿಷಾದನೀಯ ಎಂದು ಹೋರಾಟಗಾರ ಇಮ್ತಿಯಾಜ್ ಹುಸೇನ್ ಹೇಳಿದರು.

    ಇಲ್ಲಿನ ರೋಟರಿ ಬಾಲಭವನದಲ್ಲಿ ನೆರಳು ಬೀಡಿ ಕಾರ್ಮಿಕರ ಯೂನಿಯನ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ 2ಬಿ ಮೀಸಲು ಮತ್ತು ಸಮುದಾಯದ ಸ್ಥಿತಿಗತಿ ವಿಚಾರ ಕುರಿತು ಮಾತನಾಡಿದರು.

    ಯಾವುದೇ ಪಕ್ಷಗಳು ಮಾಡುವ ಘೋಷಣೆಗಳಿಗೂ ಮೊದಲು ಜನರು ಬದುಕುವಂಥ ನೆಮ್ಮದಿಯ ವಾತಾವರಣ ಕಲ್ಪಿಸಬೇಕು. ನೆಮ್ಮದಿಯೇ ಇಲ್ಲದೆ ಘೋಷಣೆಗಳು ಜಾರಿಯಾದರೆ ಯಾವ ಫಲ ಸಿಗಲಿದೆ? ಎಂದು ಪ್ರಶ್ನಿಸಿದರು.

    ಮುಸ್ಲಿಮರ ಶೇ.4ರ ಮೀಸಲನ್ನು ಕಸಿದುಕೊಂಡರೂ ಸಮುದಾಯದ ಬಹುತೇಕ ಜನರಿಗೆ ತಿಳಿದಿಲ್ಲ. ಸ್ವಾತಂತ್ರೊೃೀತ್ತರ ಇತಿಹಾಸದಲ್ಲಿ ಮುಸ್ಲಿಮರು ಧಾರ್ಮಿಕ ಹೋರಾಟ ಮಾಡಿದ್ದೇ ಹೆಚ್ಚು. ಸಾಮಾಜಿಕ ಸಮಾನತೆ, ಶಿಕ್ಷಣ, ಉದ್ಯೋಗದ ಬೇಡಿಕೆ, ಶೋಷಣೆ ವಿರುದ್ಧವಾಗಿ ಹೋರಾಟ ಮಾಡಲಿಲ್ಲ ಎಂದು ವಿಷಾದಿಸಿದರು.

    ಮುಸ್ಲಿಮರ ಸ್ಥಿತಿಗೂ ದಲಿತರ ಸ್ಥಿತಿಗೂ ವ್ಯತ್ಯಾಸವಿಲ್ಲ. ಶಿಕ್ಷಣದ ಕೊರತೆಯಿಂದ ಮುಸ್ಲಿಮರಲ್ಲಿ ವೈದ್ಯರು, ಇಂಜಿನಿಯರ್‌ಗಳು, ಐಎಎಸ್ ಅಧಿಕಾರಿಗಳ ಸಂಖ್ಯೆ ಅತೀ ಕಡಿಮೆ ಎಂದರು.

    ಹಿಜಾಬ್, ಹಲಾಲ್, ಆಜಾನ್ ಮೊದಲಾದ ಹೆಸರದಲ್ಲಿ ನೆಮ್ಮದಿ ಹಾಳು ಮಾಡಲಾಯಿತು. ಮತಗಳ ವಿಭಜನೆ ಕಾರ್ಯತಂತ್ರದ ಪರಿಣಾಮ ಕೆಲ ಮುಖಂಡರು ಮುಸ್ಲಿಮರ ಮತಗಳು ಬೇಡ ಎಂದು ಹೇಳಿಕೆ ನೀಡುತ್ತಿದ್ದಾರೆ.

    ಉತ್ತರ ಪ್ರದೇಶದಲ್ಲಿ ಶೇ.25ರಷ್ಟು ಮುಸ್ಲಿಮರಿದ್ದರೂ ನೂರು ಮಂದಿ ಶಾಸಕರಾಗಲಿಲ್ಲ. ಇದಕ್ಕೆ ಮತ ವಿಭಜನೆ ಕಾರಣ. ಯಾವುದೇ ಕಾರಣಕ್ಕೂ ಮುಸ್ಲಿಮರ ಮತ ವಿಭಜನೆ ಆಗಲು ಬಿಡಬಾರದು ಎಂದು ಮನವಿ ಮಾಡಿದರು.

    ಮಹಿಳಾ ಮೀಸಲು ಮತ್ತು ದುಡಿವ ವರ್ಗದ ಮಹಿಳೆಯರ ಸವಾಲು ಕುರಿತು ಮಾತನಾಡಿದ ಹೋರಾಟಗಾರ್ತಿ ಶಾರದಾ ಗೋಪಾಲ ದಾಬಡೆ, ಚುನಾವಣಾ ಅಭ್ಯರ್ಥಿಗಳ ಆಸ್ತಿ ಐದು ವರ್ಷದಲ್ಲಿ ಹೆಚ್ಚುತ್ತಿದೆ. ಆದರೆ, ಬೀಡಿ ಕಾರ್ಮಿಕರು, ಕಟ್ಟಡ ಕಾರ್ಮಿಕರ ಕೂಲಿ ಮಾತ್ರ ಏರಿಕೆಯಾಗಿಲ್ಲ. ತಜ್ಞರ ಸಮಿತಿ ಶಿಫಾರಸುಗಳು ನೇಪಥ್ಯಕ್ಕೆ ಸರಿಯುತ್ತವೆ ಎಂದು ವಿಷಾದಿಸಿದರು.

    ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಎಂದು ಹೇಳಲಾಗುತ್ತಿದೆ. ಆದರೆ, ಚುನಾವಣೆಯಲ್ಲಿ ಗೆಲ್ಲುವ ಜನಪ್ರತಿನಿಧಿಗಳು ಆನಂತರ ಮುಖ ತೋರಿಸುವುದಿಲ್ಲ. ಯಾವುದೇ ಜಾತಿಯ ಮಹಿಳೆಯರು ಘನತೆಯಿಂದ ಬದುಕಲು ಇಷ್ಟದ ಉಡುಪು ಧರಿಸಲು, ಅಡುಗೆ ಮಾಡಲು, ಉಣ್ಣಲು ಅವಕಾಶವಿದೆ. ಇದನ್ನು ಪ್ರಶ್ನಿಸುವ ಹಕ್ಕು ಜನಪ್ರತಿನಿಧಿಗಳಿಗಿಲ್ಲ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts